BPL ಕಾರ್ಡ್ ಗೆ ₹5 ಲಕ್ಷ.. APL ಕಾರ್ಡ್ ಗೆ ₹1.5 ಲಕ್ಷ! – ಈ ಒಂದು ಕಾರ್ಡ್ ಇದ್ರೆ ಏನೆಲ್ಲಾ ಉಪಯೋಗ?

BPL ಕಾರ್ಡ್ ಗೆ ₹5 ಲಕ್ಷ.. APL ಕಾರ್ಡ್ ಗೆ ₹1.5 ಲಕ್ಷ! – ಈ ಒಂದು ಕಾರ್ಡ್ ಇದ್ರೆ ಏನೆಲ್ಲಾ ಉಪಯೋಗ?

ಪ್ರತಿಯೊಬ್ಬರಿಗೂ ಆರೋಗ್ಯ ಅನ್ನೋದು ಬಹಳ ಮುಖ್ಯ. ಆದ್ರೆ ಬಡವರಿಗೆ ಯಾವುದಾದರೂ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗೋಕೂ ಹಿಂದೆ ಮುಂದೆ ನೋಡ್ತಾರೆ. ಯಾಕಂದ್ರೆ ಆಸ್ಪತ್ರೆಗೆ ಬಿಲ್ ಕಟ್ಟೋದಕ್ಕೆ ಹಣವೇ ಇರೋದಿಲ್ಲ. ಇಂಥವ್ರ ಕಷ್ಟಕಾಲಕ್ಕೆ ನೆರವಾಗೋಕೆ ಇರೋದು ಒಂದೇ ದಾರಿ. ಅದು ಆರೋಗ್ಯ ವಿಮೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಇರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನಿಂದ ಸಾಕಷ್ಟು ಉಪಯೋಗಗಳಿವೆ. ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನಲ್ಲಿ ಕೆಲವೊಂದಿಷ್ಟು ಬದಲಾವಣೆ ತಂದಿದೆ. ಇದ್ರಿಂದ ರಾಜ್ಯದ ಜನತೆಗೆ ಮತ್ತಷ್ಟು ಪ್ರಯೋಜನ ಆಗಲಿದೆ. ಹೇಗೆ ಅನ್ನೋ ಬಗೆಗಿನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಕ್ಷದ್ವೀಪಕ್ಕೆ ಹೋಗಬೇಕು ಎಂಬ ಪ್ಲಾನ್ ಮಾಡ್ತಿದ್ದೀರಾ ? – ಕನೆಕ್ಟಿವಿಟಿ ವಿಚಾರದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಸಿಎಂ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ ಆರೋಗ್ಯ ಹೆಲ್ತ್ ಕಾರ್ಡ್ ಹೆಸರನ್ನು ಬದಲಾಯಿಸಿದ್ದಾರೆ. ಆಯುಷ್ಮಾನ್ ಭಾರತ್‌ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಎಂಬುದಾಗಿ ಮರುನಾಮಕರಣ ಮಾಡಿದ್ದಾರೆ. ಕಳೆದ ಡಿಸೆಂಬರ್​ನಲ್ಲೇ ಕರ್ನಾಟಕ ಕಾರ್ಡ್ ಬಿಡುಗಡೆ ಮಾಡಲಾಗಿದ್ದು, ಇದರಿಂದ ರಾಜ್ಯದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಜನ ಪ್ರಯೋಜನ ಪಡೆದುಕೊಳ್ಳಬಹುದು.

ಸದ್ಯ 5.9 ಕೋಟಿ ಜನರಿಗೆ ಹೆಲ್ತ್ ಕಾರ್ಡ್ ಒದಗಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ. ರಾಜ್ಯದ ಜನಸಾಮಾನ್ಯರಿಗೂ ಉತ್ತಮ ಆರೋಗ್ಯ ಮತ್ತು ಚಿಕಿತ್ಸೆ ಒದಗಿಸಲು ನೆರವಾಗುವಂತೆ ಕರ್ನಾಟಕ ಆರೋಗ್ಯ ಕಾರ್ಡ್ ಜಾರಿಗೆ ತರಲಾಗಿದೆ. ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವವರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಇತರ ಯಾವುದೇ ರಾಜ್ಯಗಳಲ್ಲಿಯೂ ಹೆಲ್ತ್ ಕಾರ್ಡ್ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದು. ಇದಕ್ಕಾಗಿಯೇ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ನ್ಯಾಷನಲ್ ಪೋರ್ಟಲ್ ಗೆ ಕರ್ನಾಟಕ ರಾಜ್ಯದ ಹೊಸ ಕಾರ್ಡ್ ಅನ್ನು ಸಂಯೋಜನೆಗೊಳಿಸಲಾಗಿದೆ.

ಹೊಸ ಆರೋಗ್ಯ ಕಾರ್ಡ್ ಗೆ ಕೇಂದ್ರ ಸರ್ಕಾರದಿಂದ 34 ಪರ್ಸೆಂಟ್ ಅನುದಾನ ಸಿಕ್ಕರೆ ರಾಜ್ಯ ಸರ್ಕಾರ 66 ಪರ್ಸೆಂಟ್​ ಅನುದಾನವನ್ನ ನೀಡುತ್ತೆ. ಅಂದ್ರೆ ಈ ಯೋಜನೆಯಲ್ಲಿ ಬಹುಪಾಲು ವೆಚ್ಚ ರಾಜ್ಯ ಸರ್ಕಾರದ್ದೇ ಆಗಿರುತ್ತೆ. ಈ ಕಾರ್ಡ್ ಹೊಂದಿರುವ ಬಿಪಿಎಲ್ ಫಲಾನುಭವಿಗಳು ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸೆಯನ್ನು ಪಡೆಯಬಹುದು. ಅಂದ್ರೆ ಕುಟುಂಬದ ಒಬ್ಬ ಸದಸ್ಯ ಅಥವಾ ಒಟ್ಟಾರೆಯಾಗಿ ಇರುವ ಸದಸ್ಯರಿಗೆ ಇದು ಅನ್ವಯವಾಗುತ್ತೆ.

ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಕೂಡ ಆರೋಗ್ಯ ಕಾರ್ಡ್ ನ ಪ್ರಯೋಜನ ಸಿಗಲಿದೆ. ಎಪಿಎಲ್ ಕುಟುಂಬದ ವಾರ್ಷಿಕ ಚಿಕಿತ್ಸೆಯ ಮೊತ್ತ 5 ಲಕ್ಷ ರೂಪಾಯಿಗಳಾಗಿದ್ದರೆ ಅದರಲ್ಲಿ 1.5 ಲಕ್ಷ ರೂಪಾಯಿಯ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇನ್ನುಳಿದ ಶೇಕಡಾ 70ರಷ್ಟು ಚಿಕಿತ್ಸಾ ವೆಚ್ಚವನ್ನು ಎಪಿಎಲ್ ಕಾರ್ಡ್ ಹೊಂದಿರುವವರು ಭರಿಸಬೇಕು. ಶೇಕಡ 30ರಷ್ಟು ಹಣವನ್ನ ಮಾತ್ರ ಸರ್ಕಾರ ಭರಿಸುತ್ತೆ. ಮತ್ತೊಂದು ವಿಶೇಷವೆಂದರೆ ಈ ಕಾರ್ಡ್ ಅಡಿಯಲ್ಲಿ 1,650 ಚಿಕಿತ್ಸಾ ಪ್ಯಾಕೇಜ್ ಗಳು ಲಭ್ಯವಿದ್ದು ಎಲ್ಲ ಸಾರ್ವಜನಿಕ ಆಸ್ಪತ್ರೆ ಹಾಗೂ 540 ನೋಂದಾಯಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಉಪಯೋಗ ಪಡೆಯಬಹುದು. ಜೊತೆಗೆ 171 ತುರ್ತು ಚಿಕಿತ್ಸೆ ಹಾಗೂ ಜೀವ ಉಳಿಸುವ ಪ್ಯಾಕೇಜ್ ಗಳನ್ನು ಕೂಡ ನೀಡಲಾಗುವುದು.

ನೀವು ಇನ್ನೂ ಕಾರ್ಡ್ ಮಾಡಿಸಿಕೊಂಡಿಲ್ಲ ಅಂದ್ರೆ ಈ ಕೂಡಲೇ ಮಾಡಿಸಿಕೊಳ್ಳಿ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ಪಡೆಯಲು ಫಲಾನುಭವಿಗಳು ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಇತರ ಯಾವುದೇ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಒಂದು ಕಾರ್ಡ್ ಇದ್ದರೆ ಫಲಾನುಭವಿಗಳ ವೈದ್ಯಕೀಯ ದಾಖಲೆಯನ್ನು ಪರಿಶೀಲಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸರ್ಕಾರ ನೆರವಾಗಲಿದೆ. ಬಡತನದ ಕುಟುಂಬಗಳ ಆರೋಗ್ಯ ಕಾಪಾಡಲೆಂದೇ ಈ ಸ್ಕೀಂ ಜಾರಿಗೆ ತರಲಾಗಿದ್ದು ನೀವೂ ಕೂಡ ಪ್ರಯೋಜನ ಪಡೆದುಕೊಳ್ಳಬಹುದು.

Shwetha M