ಮೊಮ್ಮಗನಿಗೆ ಪಟ್ಟ ಕಟ್ಟುತ್ತಾರಾ ತಾತ?- ಧವನ್ ರಾಕೇಶ್ ಭವಿಷ್ಯಕ್ಕೆ ಸಿದ್ದು ತಂತ್ರ!?
ಯಾವ ಕ್ಷೇತ್ರ? ಹೇಗಿದೆ ಪ್ಲ್ಯಾನ್?

ಅಪ್ಪನ ನಂತ್ರ ಮಗ.. ಮಗನ ನಂತ್ರ ಮೊಮ್ಮಗ.. ಒಟ್ನಲ್ಲಿ ಪರಿವಾರವೇ ಆಯ್ಕೆ.. ಪರಿವಾರವೇ ಭವಿಷ್ಯ.. ಪರಿವಾರದಿಂದಲೇ ನಾಯಕರ ಉಗಮ.. ಇದು ನಮ್ ದೇಶದಲ್ಲಿ ಕೆಲ ರಾಜಕೀಯ ನಾಯಕರ ಲೆಕ್ಕಾಚಾರ.. ಮನೆತನಗಳಿಂದಲೇ ರಾಜಕಾರಣ ಮಾಡುವುದಕ್ಕೆ ಕುಟುಂಬ ರಾಜಕಾರಣ ಅಂತ ಕರೆದು ಅದನ್ನೆಷ್ಟೇ ಟೀಕಿಸಿದ್ರೂ ಕುಟುಂಬ ರಾಜಕಾರಣ ನಮ್ಮಲ್ಲಿ ನಿಲ್ಲೋದಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ.. ಅದು ನೆಹರು- ಗಾಂಧಿ ಕುಟುಂಬ ಇರಲಿ.. ಅದು ಕರುಣಾನಿಧಿ ಕುಟುಂಬ ಆಗಿರಲಿ.. ಅಥವಾ ದೇವೇಗೌಡರ ಕುಟುಂಬ.. ಯಡಿಯೂರಪ್ಪನವರ ಕುಟುಂಬವೇ ಆಗಿರಲಿ.. ಈಗ ಅದೇ ಸಾಲಿಗೆ ಸಿದ್ದರಾಮಯ್ಯ ಪರಿಪೂರ್ಣವಾಗಿ ಸೇರುವ ತಯಾರಿ ಮಾಡಿದ್ದಾರೆ ಅನ್ನಿಸ್ತಿದೆ.. ಈಗಾಗ್ಲೇ ಒಬ್ಬ ಮಗನನ್ನು ರಾಜಕೀಯಕ್ಕೆ ತಂದು ಎಂಎಲ್ಎ ಮಾಡಿ ನಂತರ ಎಂಎಲ್ಸಿ ಮಾಡಿ ಆಗಿದೆ.. ಹೀಗೆ ಅಪ್ಪ ಇರುವಾಗಲೇ ಮಗ.. ಅಥವಾ ಅಪ್ಪನ ನಂತರ ಮಗ ಎನ್ನುವ ಪಟ್ಟಿ ನಮ್ಮ ರಾಜ್ಯದಲ್ಲಿ ದೊಡ್ಡದಿದೆ.. ಆದ್ರೀಗ ಸಿದ್ದರಾಮಯ್ಯನವರು ತಮ್ಮ ಮೊಮ್ಮಗನಿಗೆ ಪಟ್ಟಕಟ್ಟಲು ಸಿದ್ಧತೆ ನಡೆಸಿದ್ದಾರಾ ಎಂಬ ಅನುಮಾನ ಕಾಡೋದಿಕ್ಕೆ ಶುರುವಾಗಿದೆ.. ರಾಜ್ಯ ಕಾಂಗ್ರೆಸ್ನಲ್ಲೂ ಇಂತದ್ದೊಂದು ಚರ್ಚೆ ಜೋರಾಗಿ ನಡೆದಿದೆ.. ಇದಕ್ಕೆ ಮುಖ್ಯ ಕಾರಣ, ಸಿದ್ದರಾಮಯ್ಯನವರ ಮೊಮ್ಮಗ, ಇತ್ತೀಚೆಗೆ ವರುಣಾ ಕ್ಷೇತ್ರದಲ್ಲಿ ಜಾಸ್ತಿ ಆ್ಯಕ್ಟೀವ್ ಆಗಿ ಓಡಾಡ್ತಿರೋದು.
ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ರಾಕೇಶ್ ಅವರನ್ನು ಮೊದಲ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕಳೆದುಕೊಂಡಿದ್ರು. ಅಲ್ಲಿಂದ ನಂತರ ಅವರು ವಿಪರೀತ ಹಚ್ಚಿಕೊಂಡಿದ್ದು ಅಂದ್ರೆ ಅವರ ಮೊಮ್ಮಗ ಧವನ್ ರಾಕೇಶ್ ಅವರನ್ನು.. ಅಪ್ಪನನ್ನು ಕಳೆದುಕೊಂಡಾಗ ಇನ್ನೂ ಶಾಲೆಯಲ್ಲಿ ಓದುತ್ತಿದ್ದ ಹುಡುಗ ಧವನ್.. ಕಳೆದ ಬಾರಿ ಅಂದ್ರೆ 2023ರ ವಿಧಾನಸಭಾ ಚುನಾವಣೆ ವೇಳೆ ವರುಣಾ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿದಿದ್ದ ಸಿದ್ದರಾಮಯ್ಯ, ನಾಮಿನೇಷನ್ ಹಾಕೋಕೂ ಮುಂಚೆ ಒಂದು ಮಾತು ಹೇಳಿದ್ದರು.. ಇದು ನನ್ನ ಕಡೆಯ ಎಲೆಕ್ಷನ್.. ಇನ್ನು ಮುಂದೆ ಏನಿದ್ದರೂ ನಮ್ಮ ಯತೀಂದ್ರ ಹಾಗೂ ಧವನ್ ಅವರಿಗೆ ನೀವು ಆಶೀರ್ವಾದ ಮಾಡ್ಬೇಕು ಎಂದು ಅಡ್ವಾನ್ಸ್ ಆಗಿ ಕೇಳಿಕೊಂಡಿದ್ದರು.. ಅವತ್ತು ತಾತನ ಪಕ್ಕದಲ್ಲಿ ಇದೇ ಧವನ್ ರಾಕೇಶ್ ಸಿದ್ದರಾಮಯ್ಯ ಇದ್ದರು.. ಆಗಿನ್ನೂ ಧವನ್ 12ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗ..

ಎಲೆಕ್ಷನ್ಗೆ ನಿಲ್ಲೋ ವಯಸ್ಸು ಇನ್ನೂ ದೂರವಿದ್ದರೂ, ಸಿದ್ದರಾಮಯ್ಯ ತಮ್ಮ ಮೊಮ್ಮಗನ ಹೆಸರು ಹೇಳಿ, ರಾಜಕಾರಣಕ್ಕೆ ತರುವ ಮುನ್ಸೂಚನೆ ನೀಡೋದಿಕ್ಕೆ ಕಾರಣ ಕೂಡ ಇತ್ತು.. . ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಲ್ಲಿ ಒಳ್ಳೆಯ ಹಿಡಿತ ಇದ್ದೇ ಇದೆ.. ಹೀಗಾಗಿ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತನ್ನ ನಂತರ ತನ್ನ ಮಗ ಹಾಗೂ ಮೊಮ್ಮಗ ಎಂಬ ರೀತಿಯ ಲೆಕ್ಕಾಚಾರದಲ್ಲಿದ್ದಾರೆ.. ವರುಣಾ ಕ್ಷೇತ್ರದಲ್ಲಿ 2028ಕ್ಕೆ ಧವನ್ ಶಾಸಕ ಎಂಬ ಫ್ಯಾನ್ ಪೇಜ್ಗಳನ್ನೂ ಕ್ರಿಯೇಟ್ ಮಾಡಿರುವುದನ್ನು ನೋಡಿದ್ರೆ ಚುನಾವಣೆಗೆ ತಯಾರಿ ಈಗಿಂದಲೇ ಶುರುವಾದಂತೆ ಭಾಸವಾಗುತ್ತಿದೆ…

ಅಂದಹಾಗೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಪುತ್ರ ಯತೀಂದ್ರ ಸಿದ್ದರಾಮಯ್ಯ ಈಗಾಗಲೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ ವರುಣಾ ಕ್ಷೇತ್ರದಿಂದ ಶಾಸಕರಾಗಿದ್ದರು. ಈಗ ಯತೀಂದ್ರ , ವಿಧಾನಪರಿಷತ್ ಸದಸ್ಯರಾಗಿದ್ದಾರೆ. ತಂದೆಯ ಕ್ಷೇತ್ರವಾದ ವರುಣಾ ಕ್ಷೇತ್ರದ ಉಸ್ತುವಾರಿಯಾಗಿ ಅಲ್ಲಿನ ಅಭಿವೃದ್ದಿ ಕೆಲಸಗಳನ್ನು ಯತೀಂದ್ರ ನೋಡಿಕೊಳ್ಳುತ್ತಿದ್ದಾರೆ. ರಾಜಕೀಯವಾಗಿಯೂ ಮೈಸೂರು ಜಿಲ್ಲೆಯಲ್ಲಿ ತಂದೆ ಸಿದ್ದರಾಮಯ್ಯಗೆ ನೆರವಾಗುತ್ತಿದ್ದಾರೆ. ಆದರೇ ಯತೀಂದ್ರ ಮದುವೆ ಆಗಿಲ್ಲ. ಹೀಗಾಗಿ ಈಗ ಸಿಎಂ ಸಿದ್ದರಾಮಯ್ಯಗೆ ಒಬ್ಬ ರಾಜಕೀಯ ಉತ್ತರಾಧಿಕಾರಿಯನ್ನು ಧವನ್ ಮೂಲಕ ನೋಡುತ್ತಿರುವಂತಿದೆ.. ಸಿದ್ದರಾಮಯ್ಯರ ಹಿರಿಯ ಮಗ ರಾಕೇಶ್ ಚಾಮುಂಡೇಶ್ವರಿ ಕ್ಷೇತ್ರ, ವರುಣಾ ಕ್ಷೇತ್ರ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ತುಂಬ ಆ್ಯಕ್ಟಿವ್ ಆಗಿದ್ರು. ಆದ್ರೆ ರಾಕೇಶ್ ಫಾರಿನ್ಗೆ ಹೋದಾಗ ಮೃತಪಟ್ಟಿರೋದು ನಿಮ್ಗೆಲ್ಲಾ ಗೊತ್ತಿದೆ. ಹೀಗಾಗಿ ಧವನ್ ರಾಕೇಶ್ಗೆ ರಾಜಕೀಯ ರಂಗ ಪ್ರವೇಶ ಮಾಡೋಕೆ ಸಿದ್ದರಾಮಯ್ಯ ವೇದಿಕೆ ರೆಡಿ ಮಾಡ್ತಿದ್ದಾರೆ.

ಸಿಎಂ ಮೊಮ್ಮಗ, ರಾಕೇಶ್ ಪುತ್ರ ಧವನ್ ಸದ್ಯಕ್ಕೆ ವಿದೇಶದಲ್ಲಿ ಓದುತ್ತಿದ್ದಾರೆ. ಇವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಕೂಡ ಇದೆ. ಲಾಸ್ಟ್ ಟೈಂ ಅಂದ್ರೆ ಕಳೆದ ವಿಧಾನಸಭಾ ಎಲೆಕ್ಷನ್ ವೇಳೆ ವರುಣಾ ಕ್ಷೇತ್ರದಲ್ಲಿ ತಾತ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ನಡೆಸಿದ್ದರು. ವೇದಿಕೆಯಲ್ಲಿ ಭಾಷಣವನ್ನು ಮಾಡಿದ್ದರು. ಆದರೇ, ಧವನ್ ಕಾನ್ವೆಂಟ್ನಲ್ಲಿ ಓದುತ್ತಾ ಇದ್ದಿದ್ದರಿಂದಲೋ ಏನೋ ಕನ್ನಡ ಭಾಷೆಯ ಮೇಲೆ ಹಿಡಿತ ಇರಲಿಲ್ಲ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಜನ ಟ್ರೋಲ್ ಕೂಡ ಮಾಡಿದ್ದರು.. ಸಿದ್ದರಾಮಯ್ಯ ಅವರನ್ನು ಕನ್ನಡ ರಾಮಯ್ಯ ಅಂತ ಕೂಡ ಅಭಿಮಾನಿಗಳು ಕರೆಯುತ್ತಾರೆ. ಆದರೇ, ಅವರ ಮೊಮ್ಮಗನಿಗೆ ನೆಟ್ಟಗೆ ಕನ್ನಡ ಕಲಿಸಿ ಕೊಟ್ಟಿಲ್ಲ ಅಂತ ಹೇಳ್ತಿದ್ರು. ಬಟ್ ಇದೇನು ರಾಜಕೀಯದಲ್ಲಿ ಅಷ್ಟು ಮ್ಯಾಟರ್ ಆಗಲ್ಲ..
ಮೊಮ್ಮಗನಿಗೆ ಸಿದ್ದು ಪ್ರಚಾರ
ಸಿದ್ದರಾಮಯ್ಯ ಕಳೆದ ಎಲೆಕ್ಷನ್ನಿಂದಲೇ ಮೊಮ್ಮಗನಿಗೆ ಪ್ರಚಾರ ನೀಡುವುದ್ದಕ್ಕೆ ಮುಂದಾಗಿದ್ದಾರೆ. ಕಳೆದ ಎಲೆಕ್ಷನ್ ಸಂದರ್ಭದಲ್ಲಿ ಕ್ಷೇತ್ರದವರಿಗೆ ಮೊಮ್ಮಗ ಧವನ್ ಪರಿಚಯಿಸುವ ಕೆಲಸ ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಆ ಮೂಲಕ ತಮ್ಮ ಮುಂದಿನ ರಾಜಕೀಯ ಉತ್ತರಾಧಿಕಾರಿ ಧವನ್ ಅನ್ನೋ ಮೆಸೇಜ್ ಪಾಸ್ ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯರ ಮೊಮ್ಮಗ ಧವನ್ ರಾಜಕೀಯ ಎಂಟ್ರಿ ಖಚಿತವಾಗಿದೆ. ಮೊಮ್ಮಗನಿಗೆ ಒಂದಷ್ಟು ಟಿಪ್ಸ್ ಕೂಡ ಸಿದ್ದರಾಮಯ್ಯ ಕೊಡುತ್ತಿದ್ದಾರೆ. ಮೊಮ್ಮಗ ವಿದೇಶದಿಂದ ಬಂದಾಗ ತಮ್ಮ ಜೊತೆಗೆ ತಾವು ಹೋದ ಸಭೆ, ಸಮಾರಂಭಗಳಿಗೂ ಧವನ್ ನನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆರ್ಸಿಬಿ ಆಟಗಾರರ ಸನ್ಮಾನ ಸಮಾರಂಭಕ್ಕೂ ಧವನ್ ನನ್ನು ಕರೆ ತಂದಿದ್ದರು. ಹಾಗೇ ರಾಹುಲ್ ಗಾಂಧಿ ಜೊತೆ ಕೂಡ ಧವನ್ ಕಾಣಿಸಿಕೊಂಡಿದ್ರು.
ವರುಣಾ ಕ್ಷೇತ್ರದಿಂದ ಧವನ್ ಅಖಾಡಕ್ಕೆ?
ಧವನ್ ಅನ್ನ ವರುಣಾದಿಂದ ಸ್ಪರ್ಧಿಸಲು ತಯಾರಿ ನಡೆಸಲಾಗುತ್ತಿದೆ ಅನ್ನೋ ವಿಚಾರಗಳು ಕೇಳಿ ಬರ್ತಾ ಇವೆ. ದೇವೇಗೌಡ್ರ ಕುಟುಂಬಕ್ಕೆ ಹೇಗೆ ಹಾಸನ ಇತ್ತೋ ಹಾಗೇ ಈಗ ಸಿದ್ದರಾಮಯ್ಯ ಕುಟುಂಬಕ್ಕೆ ವರುಣಾ ಆಗಿದೆ. ಇತ್ತೀಚೆಗೆ ವರುಣಾದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ರಾಕೇಶ್ ಅವರನ್ನು ಹಾಡಿಹೊಗಳಿದ್ರು. ಈ ಟೈಂನಲ್ಲೇ ಅನೇಕ ನಾಯಕರು ಧವನ್ ಅವರನ್ನು ರಾಜಕೀಯಕ್ಕೆ ಕರೆತರಬೇಕೆಂದು ಒತ್ತಾಯಿಸಿದ್ದಾರೆ. ಈ ಕ್ಷೇತ್ರದ ನಿಂತ್ರೆ ಸಿದ್ದು ಮೊಮ್ಮಗನಿಗೆ ಬೆಂಬಲ ಸಿಕ್ಕೇ ಸಿಗುತ್ತೆ. ಈ ಹಿಂದಿನ ಎಲೆಕ್ಷನ್ನಲ್ಲಿ ಇದೇ ನನ್ನ ಕೊನೆಯ ಚುನಾವಣೆ ಅಂತ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸದ್ಯದ ರಾಜ್ಯ ರಾಜಕೀಯ ನೋಡಿದ್ರೆ ಸಿದ್ದರಾಮಯ್ಯ 2028ರ ಎಲೆಕ್ಷನ್ಗೆ ನಿಲ್ಲೋದು ಡೌಟ್. ಪಕ್ಷದ ದೃಷ್ಟಿಯಿಂದ ನಿಂತ್ರೂ ಮೊಮ್ಮಗನಿಗೆ ವರುಣಾ ಕ್ಷೇತ್ರ ಭದ್ರಪಡಿಸುವ ಕೆಲಸ ಮಾಡೋ ಎಲ್ಲಾ ಸಾಧ್ಯತೆ ಕಾಣ್ತಿದೆ.. ಯಾಕಂದ್ರೆ ಇತ್ತೀಚೆಗೆ ವೋಟರ್ ಲಿಸ್ಟ್ನಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಹೆಸರನ್ನು ಬೆಂಗಳೂರಿಗೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ.. ಇದ್ರಿಂದಾಗಿ ಯತೀಂದ್ರ ಸಿದ್ದರಾಮಯ್ಯ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸೋದಿಲ್ವಾ? ಒಂದು ವೇಳೆ ಸ್ಪರ್ಧಿಸಿದ್ರೂ ಬೆಂಗಳೂರಿನ ಯಾವುದಾದರೂ ಕ್ಷೇತ್ರ ನೋಡಿಕೊಳ್ತಾರಾ? ಎಂಬ ಅನುಮಾನಗಳೂ ಶುರುವಾಗಿವೆ..
ಧವನ್ಗೂ ಇದೆ ರಾಜಕೀಯ ಆಸಕ್ತಿ
ಇನ್ನೂ 2023ರ ವಿಧಾನಸಭೆ ಚುನಾವಣೆಯಲ್ಲಿ ಧವನ್ , ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಾತನ ಪರ ಪ್ರಚಾರ ಮಾಡಿದ್ರು. ಆಗಲೇ ಧವನ್ ನಾನು ರಾಜಕೀಯಕ್ಕೆ ಬರಬೇಕು ಅನ್ನಿಸ್ತಿದೆ ಅಂತ ಹೇಳಿದ್ರು. ನಾನು ಕೂಡ ತಾತ ಸಿದ್ದರಾಮಯ್ಯ ರೀತಿ ಲಾ ಓದಿ ನಂತರ ರಾಜಕೀಯಕ್ಕೆ ಬರುತ್ತೇನೆ. ನಮ್ಮ ತಂದೆ ರಾಕೇಶ್ ಗೆ ರಾಜಕೀಯದಲ್ಲಿರಲು ತುಂಬ ಆಸಕ್ತಿ ಇತ್ತು. ಆದರೇ, ಅವರು ತೀರಿಕೊಂಡರು. ಅವರ ಕನಸನ್ನು ನಾನು ನನಸು ಮಾಡುತ್ತೇನೆ. ನಮ್ಮಪ್ಪ ರಾಕೇಶ್ ರಕ್ತವೇ ನಂದು. ನನಗೆ ರಾಜಕೀಯದಲ್ಲಿ ತುಂಬ ಆಸಕ್ತಿ ಇದೆ. ಈಗ ನಾನು ಸೆಕೆಂಡ್ ಪಿಯುಸಿ ಓದುತ್ತಿದ್ದೇನೆ ಎಂದು 2023ರಲ್ಲಿ ಟಿವಿ ಚಾನಲ್ ಗಳಿಗೆ ನೀಡಿದ್ದ ಸಂದರ್ಶನದಲ್ಲಿ ಧವನ್ ಹೇಳಿದ್ದರು. ರಾಜಕೀಯದ ಬಗ್ಗೆ ತಾತನ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೇನೆ ಎಂದು ಧವನ್ ಹೇಳಿದ್ದರು. ಹೀಗಾಗಿ ಧವನ್ ರಾಜಕೀಯಕ್ಕೆ ಬರೋದುಫಿಕ್ಸ್ ಆಗಿದೆ. ಈಗಾಗ್ಲೇ ಧವನ್ ಪಿಯು ನಂತರ ಕಾನೂನು ವಿದ್ಯಾರ್ಥಿಯಾಗಿದ್ದಾರೆ.. ಇದು ರಾಜಕೀಯಕ್ಕೆ ಬರೋದಿಕ್ಕೆ ಮೆಟ್ಟಿಲು ಅಂತಲೇ ಪರಿಗಣಿಸಲಾಗಿದ್ದು, ಸಿದ್ದರಾಮಯ್ಯ ಕೂಡ ಮೊಮ್ಮಗನನ್ನು ರಾಜಕೀಯ ರಂಗಪ್ರವೇಶ ಮಾಡಿಸಲು ಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ..

ನೋಡಿರಿ

