ಪಠ್ಯ ಪುಸ್ತಕ ಪರಿಷ್ಕರಣೆಗೆ ಸಿದ್ಧವಾಯ್ತು ಸಮಿತಿ – ಸೂಲಿಬೆಲೆ ಪಾಠಕ್ಕೆ ಕತ್ತರಿ?

ಪಠ್ಯ ಪುಸ್ತಕ ಪರಿಷ್ಕರಣೆಗೆ ಸಿದ್ಧವಾಯ್ತು ಸಮಿತಿ – ಸೂಲಿಬೆಲೆ ಪಾಠಕ್ಕೆ ಕತ್ತರಿ?

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಶೈಕ್ಷಣಿಕ ಚಟುವಟಿಕೆಗಳು ಬಹುತೇಕ ಆರಂಭವಾಗಿದೆ. ಆದರೆ ಇದೀಗ ಕಾಂಗ್ರೆಸ್‌ ಸರ್ಕಾರ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದೆ.

ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆಗೆ ಈಗಾಗಲೇ ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳ ಜೊತೆ ಚರ್ಚೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆ ಲೋಪದೋಷಗಳು ಸರಿಪಡಿಸುವಂತೆ ಸಮಿತಿಗೆ ಹೇಳಿದ್ದಾರೆ.

ಇದನ್ನೂ ಓದಿ: ಆಧಾರ್ ವಿವರಗಳನ್ನ ಅಪ್ಡೇಟ್ ಮಾಡಿಸಲು ಜೂನ್ 14 ಕೊನೆಯ ದಿನ – ನಂತರ ಎಷ್ಟು ಶುಲ್ಕ ಪಾವತಿ ಮಾಡಬೇಕು?

ಯಾವ ಯಾವ ಪಾಠಗಳನ್ನು ಕೈಬಿಡಬೇಕು? ಪಾಠಗಳಲ್ಲಿ ಕೆಲ ಪದ ಬಳಿಕೆ ಎಲ್ಲಿಲ್ಲಿ ಸೇರಿಸಲಾಗಿದೆ? ಅದನ್ನ ಗುರುತಿಸುವಂತೆ ಸಿದ್ದರಾಮಯ್ಯ ಅವರು ಸಮಿತಿಗೆ ಸೂಚನೆ ನೀಡಿದ್ದು, ಇನ್ನೊಂದು ವಾರದಲ್ಲಿ ಪಠ್ಯ ಪರಿಷ್ಕರಣೆ ಲೋಪದೋಷ ಸಂಬಂಧ ವರದಿ ನೀಡುವಂತೆ ಸಿಎಂ ಸೂಚಿಸಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಹೊಸ ಪಾಠಗಳ ಸೇರ್ಪಡೆ ಇಲ್ಲ. ಕಳೆದ ವರ್ಷ ಸೇರಿಸಲಾಗಿದ್ದ ಪಾಠಗಳಿಗೆ ಕತ್ತರಿ ಬೀಳುವ ಸಾಧ್ಯತೆ. ಆರ್.ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌, ಮತ್ತು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಪಾಠಕ್ಕೆ ಕತ್ತರಿ ಬೀಳುವ ಸಾಧ್ಯತೆ ಎಂದು ತಿಳಿದುಬಂದಿದೆ.

ಆದರೆ, 2023-24ನೇ ಶೈಕ್ಷಣಿಕ ಸಾಲಿಗೆ ಈಗಾಗಲೇ ಬಹುತೇಕ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳು ಮುದ್ರಣವಾಗಿ ಶಾಲೆಗಳನ್ನು ತಲುಪಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯ ಮುದ್ರಿಸುವ ಪ್ರಕ್ರಿಯೆಗೆ ಕೈಹಾಕುವುದಿಲ್ಲ. ಬದಲಾಗಿ, ವಿತರಿಸಲಾಗಿರುವ ಪಠ್ಯದಲ್ಲಿ ವಿವಾದಿತ ಹಾಗೂ ಆಕ್ಷೇಪಣೆ ಕೇಳಿಬಂದಿರುವ ಪಾಠಗಳನ್ನು ಪಟ್ಟಿಮಾಡಿ, ಅವುಗಳನ್ನು ಮಕ್ಕಳಿಗೆ ಬೋಧನೆ ಮಾಡದಂತೆ ಶಾಲೆಗಳಿಗೆ ಸುತ್ತೋಲೆ ಹೊರಡಿಸುವ ಸಾಧ್ಯತೆಗಳಿವೆ. ಈ ವಿಚಾರವನ್ನು ಮುಂದಿನ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಚರ್ಚಿಸಿ ಅನಂತರ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ.

suddiyaana