ಗೌಡ್ರು ಅಖಾಡದಲ್ಲಿ ‘ಹುಲಿಯಾ’ ಘರ್ಜನೆ – ಮತದಾರರೇ ನನ್ನ ದೇವರೆಂದ ಸಿದ್ದರಾಮಯ್ಯ
ಸಮಾವೇಶದಲ್ಲಿ ಮಹಿಳೆಯರಿಗೆ ಅಪಮಾನ!  

ಗೌಡ್ರು ಅಖಾಡದಲ್ಲಿ ‘ಹುಲಿಯಾ’ ಘರ್ಜನೆ – ಮತದಾರರೇ ನನ್ನ ದೇವರೆಂದ ಸಿದ್ದರಾಮಯ್ಯಸಮಾವೇಶದಲ್ಲಿ ಮಹಿಳೆಯರಿಗೆ ಅಪಮಾನ!  

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಿದೆ. ಒಂದು ದಿನ ಬಿಜೆಪಿ ಸೌಂಡ್ ಮಾಡಿದ್ರೆ, ಇನ್ನೊಂದು ದಿನ ಕಾಂಗ್ರೆಸ್ ಸದ್ದು ಮಾಡುತ್ತೆ.. ಬಿಜೆಪಿ ಬಣ ಬಡಿದಾಟದ ಮಧ್ಯೆ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಷ ರಣಕಹಳೆಯನ್ನ ಊದಿದ್ದಾರೆ. ಅದು ದೇವಗೌಡರ ತವರಿನಲ್ಲೇ ಸಿದ್ದರಾಮಯ್ಯ ತನ್ನ ತಾಕತ್ತು ತೋರಿಸಿ ಎದುರಾಳಿಗಳಿಗೆ ಟಕ್ಕರ್ ನೀಡಿದ್ದಾರೆ. ಹಾಗಿದ್ರೆ ಸಮಾವೇಷದಲ್ಲಿ ದಿಕೆಶಿ ಡಿಚ್ಚಿ ಕೊಟ್ಟಿದ್ದು ಯಾರಿಗೆ, ಸಿದ್ದರಾಮಯ್ಯ ಎದುರಾಳಿಗಳಿಗೆ ಏನೆಲ್ಲಾ ಮಾತಿನ ಬಣ ಚುಚ್ಚಿದ್ರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಭಾರತದ ಭದ್ರತೆ ಕೆಣಕಿದ PAK.. ಕಂಪೇರ್ ಮಾಡದಂತೆ BCCI ವಾರ್ನಿಂಗ್ – ಚಾಂಪಿಯನ್ಸ್ ಟ್ರೋಫಿ ಕಗ್ಗಂಟಾಯ್ತಾ?

ದೇವೇಗೌಡರ ತವರ ಜಿಲ್ಲೆಯಾದ ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ರು. ಮೊದಲು ಈ ಸಮಾವೇಶವನ್ನ ಸಿದ್ದರಾಮಯ್ಯ ಮಯ ಮಾಡಲು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ರು. ನಂತರ ಸಿಎಂ ಆಪ್ತರ ನಿರ್ಧಾರಕ್ಕೆ ಬ್ರೇಕ್ ಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಸಮಾವೇಶದ ವೇದಿಕೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಸಮಾವೇಶದ ರೂಪುರೇಷೆಯನ್ನೇ ಬದಲಾಯಿಸಿದ್ದರು. ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶದ ಬದಲಿಗೆ ಕಾಂಗ್ರೆಸ್‌ನ ಜನ ಕಲ್ಯಾಣ ಸಮಾವೇಶ ಎಂದು ಡಿಕೆ ಶಿವಕುಮಾರ್ ಹೆಸರು ಬದಲಾಯಿಸಿದ್ದರು. ಆದ್ರೆ ಸಿದ್ದರಾಮಯ್ಯ ಸಮಾವೇಶದಲ್ಲಿ ತನ್ನ ತಾಕತು ಏನು ಅನ್ನೋದನ್ನ ತೋರಿಸಿದ್ರು.

ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಿದ್ರು. ಒಕ್ಕಲಿಗರ ಪ್ರಾಬಲ್ಯದ ಹಳೆ ಮೈಸೂರು ಭಾಗವನ್ನು ಕಾಂಗ್ರೆಸ್‌ನ ತೆಕ್ಕೆಗೆ ಎಳೆದುಕೊಳ್ಳಲು ಕಾಂಗ್ರೆಸ್ ಕಹಳೆ ಊದಿದ್ರು. ಸಮಾವೇಶದಲ್ಲಿ ಎಲ್ಲಿ ಕಣ್ಣು ಹಾಯಿಸಿದ್ರು ಸಿದ್ದರಾಮಯ್ಯರ ಫೋಟೋ ಫೆಕ್ಸ್‌ಗಳು ರಾರಾಜಿಸುತ್ತಿದ್ದವು. ಹಾಸನ ಜನಕಲ್ಯಾಣ ಸಮಾವೇಶದ ಭಾಷಣದ ಸಂದರ್ಭದಲ್ಲಿ ಮಾತನಾಡಲು ವೇಧಿಕೆಗೆ ಆಗಮಿಸಿದ ಡಿಕೆ ಶಿವಕುಮಾರ್ ಅವರು, ಸಿಎಂ ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದಂತೆ ಪೋಟೋ ಪ್ರದರ್ಶನ ಮಾಡಿ ಸಿಎಂ ಸಿದ್ದರಾಮಯ್ಯ ಪರ ಅಬ್ಬರದ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತು ಪ್ರಾರಂಭಿಸಿದ ಡಿಕೆ ಶಿವಕುಮಾರ್ ಅವರು, ಈ ಬಂಡೆ ಯಾವತ್ತಿದ್ರು ಸಿದ್ದರಾಮಯ್ಯ ಜೊತೆ ಇರ್ತೀನಿ ಎಂದು ಹೇಳಿದರು. ಇದಾದ ಬಳಿಕ ಜನರು ತಮ್ಮ ಹರ್ಷೋದ್ಘಾರವನ್ನು ನಿಲ್ಲಿಸಿದರು.

ಈ ಹಾಸನದ ಇತಿಹಾಸ ನೋಡಿದರೆ ನೋವಾಗುತ್ತೆ

ಮಾತನಾಡಿದ ಡಿಕೆಶಿ  ಅವರು, ನಾನು ಎಲ್ಲಿರ್ತೀನಿ, ಅಲ್ಲಿ ಪ್ರಾಮಾಣಿವಾಗಿಯೇ ಇರ್ತೀನಿ ಈ ಹಾಸನದ ಇತಿಹಾಸ ನೋಡಿದರೆ ನೋವಾಗುತ್ತೆ. ಹಲವು ರಾಜಕೀಯ ಕುಟುಂಬಗಳು ನೋವುಂಡಿವೆ. ಹಾಸನಾಂಬೆ ಆ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಬೇಕು ಎಂದು ನುಡಿದರು. ನಿಮ್ಮ ಹಾಸನದ ಮಾಜಿ ಸಂಸದರ ಸಾಕ್ಷಿಗುಡ್ಡೆ ಬಗ್ಗೆ ಮಾತನಾಡಲು ಅಸಹ್ಯವಾಗುತ್ತೆ. ವಿಜಯೇಂದ್ರ ಹಾಗೂ ಕುಮಾರಸ್ವಾಮಿಗೆ ಉಪಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ಇನ್ನು ಮುಂದೆ ಹಾಸನದ ಏಳು ವಿಧಾನಸಭೆ ಕ್ಷೇತ್ರ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಸುರ್ಜೇವಾಲ ನಿಜವಾದ ಚಾಣಕ್ಯ ಎಂದ ರಾಜಣ್ಣ

ಸಮಾವೇಶ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲರನ್ನ ಚುನಾವಣಾ ಚಾಣಕ್ಯ ಎಂದು ಕರೆಯುವ ಮೂಲಕ ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ

ಹಾಸನದ ಏಳಕ್ಕೆ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುತ್ತೆ

ಹೊಳೆನರಸೀಪುರದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ಎಲ್ಲಿದೆ ಹಾಸನದಲ್ಲಿ ಜೆಡಿಎಸ್ ಭದ್ರಕೋಟೆ, 25 ವರ್ಷಗಳ ಬಳಿಕ ಲೋಕಸಭೆ ಗೆದ್ದಿದ್ದೇವೆ. ಮುಂದೆ ಹಾಸನದ ಏಳಕ್ಕೆ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುತ್ತೇವೆ ಎಂದು ನುಡಿದರು.

ಇಡೀ ಹಾಸನದ ಮಹಿಳೆಯರ ಮೇಲೆ ಅತ್ಯಾಚಾರ

ಇನ್ನೂ ಮಾತನಾಡುವ ಭರದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಇಡೀ ಹಾಸನದ ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ ಎಂದಿದ್ದಾರೆ. ಇದು ಹಾಸನದ ಮಹಿಳೆಯರಿಗೆ ಒಂದು ತರ ಮುಜುಗರ ಮಾಡಿದಂತಾಗಿದೆ.

ಹಾಸನದಲ್ಲಿ ಘರ್ಜಿಸಿದ ಹುಲಿಯಾ

ಕಾರ್ಯಕ್ರಮ ಉದ್ದೇಶಿಸಿದ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ತೆರಿಗೆ ವಂಚನೆ ಆಗ್ತಾ ಇದ್ರೂ ದೇವೇಗೌಡರು ಕುಮಾರಸ್ವಾಮಿ ಎಂದಾದ್ರೂ ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೇ ಮಾಡಿದ್ರಾ ಎಂದು ಪ್ರಶ್ನಿಸಿದರು.

ಹಾಸನದಲ್ಲಿ ಇಷ್ಟು ದೊಡ್ಡ ಸಮಾವೇಶ ಇದೇ ಮೊದಲು ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಹಾಸನದಲ್ಲಿ ಇಷ್ಟೊಂದು ದೊಡ್ಡ ಸಮಾವೇಶ ಆಗಿರುವುದನ್ನು ನೋಡಿಲ್ಲ ಎಂದು ಸಿಎಂ ಹೇಳಿದ್ರು.  ಡಾ. ರಾಜ್ ಕುಮಾರ್ ಅಭಿಮಾನಿಗಳೇ ದೇವರು ಅಂತಿದ್ರು. ನಾನು ಕೂಡ ಮತದಾರರೇ ದೇವರು ಅಂದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ವೇದಿಕೆ ಮೇಲೆ ಹೇಳಿದ್ರು.

ದೇವೇಗೌಡರು ಯಾರನ್ನೂ ಬೆಳೆಯಲು ಬಿಟ್ಟಿಲ್ಲ

ಹೆಚ್‌ಡಿ ದೇವೇಗೌಡರು ಜೆಡಿಎಸ್‌ನಲ್ಲಿ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಬಿಎಲ್ ಶಂಕರ್, ವೈಕೆ ರಾಮಯ್ಯ ಅವರ ಮನೆ ಮಕ್ಕಳಂತಿದ್ರು, ಆದ್ರೂ ಅವರನ್ನು ಬೆಳೆಸಿಲ್ಲ. ನಮಗೆಲ್ಲಾ ರಾಜಕೀಯ ವನವಾಸ ಮಾಡಿಸಿದ್ರು, ಈಗ ತಮ್ಮ ವನವಾಸವನ್ನು ತಾವೇ ಅನುಭವಿಸುತ್ತಿದ್ದಾರೆ.  ನಾನು ಜೆಡಿಎಸ್ ಬಿಡಲಿಲ್ಲ, ಅವರೇ ನನ್ನನ್ನು ಉಚ್ಛಾಟನೆ ಮಾಡಿದ್ರು, ಅಹಿಂದ ಸಮಾವೇಶ ಮಾಡಿದ್ದಕ್ಕೆ ಉಚ್ಛಾಟಿಸಿದ್ರು ಎಂದು ದೇವೇಗೌಡ್ರು ಕುಟುಂಬಕ್ಕೆ ಟಾಂಗ್ ಕೊಟ್ಟಿದ್ದಾರೆ.

ಒಟ್ನಲ್ಲಿ ದೇವೇಗೌಡ್ರ ಅಖಾಡದಲ್ಲಿ ತೊಡೆ ತಟ್ಟಿದ ಸಿದ್ದರಾಮಯ್ಯ ತನ್ನ ತಾಕತ್ತು ಏನು ಅನ್ನೋದನ್ನ ತೋರಿಸಿದ್ದಾರೆ. ಈ ಮೂಲಕ ವಿಪಕ್ಷ ನಾಯಕರಿಗೆ ಹಾಗು ತನ್ನ ಪಕ್ಷದಲ್ಲೇ ಇರೋ ವಿರೋಧಿಗಳಿಗೆ ಸಿದ್ದರಾಮಯ್ಯ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.

Shwetha M