ಡಿಕೆಶಿ ವಿರುದ್ಧ ಖರ್ಗೆಗೆ ಪತ್ರ ಬರೆದ್ರಾ ಸಿದ್ದರಾಮಯ್ಯ? – ಲೆಟರ್ ಬಗ್ಗೆ ವಿಪಕ್ಷನಾಯಕ ಹೇಳಿದ್ದೇನು?

ಡಿಕೆಶಿ ವಿರುದ್ಧ ಖರ್ಗೆಗೆ ಪತ್ರ ಬರೆದ್ರಾ ಸಿದ್ದರಾಮಯ್ಯ? – ಲೆಟರ್ ಬಗ್ಗೆ ವಿಪಕ್ಷನಾಯಕ ಹೇಳಿದ್ದೇನು?

ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕರ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಆತ್ಮೀಯವಾಗಿರುವ ವಿಡಿಯೋ ರಿಲೀಸ್ ಮಾಡಲಾಗಿತ್ತು. ಇದು ಒಂದು ರೀತಿ ಸಂದರ್ಶನದ ರೀತಿ ಇತ್ತು. ಆದರೆ ಈಗ ಪತ್ರವೊಂದು ವೈರಲ್ ಆಗಿದ್ದು ಭಾರೀ ಸಂಚಲನ ಮೂಡಿಸಿದೆ.

ಡಿ.ಕೆ ಶಿವಕುಮಾರ್ ನನಗೆ ಕೋಲಾರದ ಟಿಕೆಟ್ ತಪ್ಪಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಜನಾಭಿಪ್ರಾಯವಿದ್ದರೂ, ಡಿಕೆ ಶಿವಕುಮಾರ್ ತಾವೊಬ್ಬರೇ ರಾಜ್ಯ ಸುತ್ತಿ ತಾವೇ ಲೀಡರ್ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ ಎಂಬ ರೀತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಲೆಟರ್ ಹೆಡ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರವೊಂದು ವೈರಲ್ ಆಗುತ್ತಿದೆ. ಈ ಪತ್ರದ ಬಗ್ಗೆ  ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಇದು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಮತದಾನೋತ್ಸವಕ್ಕೆ ಸಜ್ಜಾಯ್ತು ಕರ್ನಾಟಕ – ಮತಗಟ್ಟೆಗಳ ಸುತ್ತ ಬಿಗಿ ಬಂದೋಬಸ್ತ್!

ನಾಡಿನ ಮಹಾಜನತೆಯಲ್ಲಿ ಮನವಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನನ್ನ ಹೆಸರಿನಲ್ಲಿ ನಕಲಿ ಪತ್ರವೊಂದನ್ನು ಬರೆದಿದ್ದಾರೆ. ಇದು ನಾನು ಬರೆದ ಪತ್ರ ಅಲ್ಲವೇ ಅಲ್ಲ. ಕೆಲವು ಕುತಂತ್ರಿಗಳು ನಕಲಿ ಪತ್ರವನ್ನು ಸೃಷ್ಟಿಮಾಡಿ ನನಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಲು ಅಥವಾ ಭಿನ್ನಾಭಿಪ್ರಾಯಗಳು ಇವೆ ಎಂದು ಅಪಪ್ರಚಾರ ಮಾಡಲು ಇಂತಹ ಹುನ್ನಾವರನ್ನು ಮಾಡಿದ್ದಾರೆ. ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ. ಇದು ನಕಲಿ ಪತ್ರ, ನಾನು ಬರೆದ ಪತ್ರವಲ್ಲ. ಇದನ್ನು ಆರ್ ಎಸ್ ಎಸ್ ನಂತಹ ಕುತಂತ್ರಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಪತ್ರವನ್ನು ತಿರಸ್ಕರಿಸಬೇಕು ಎಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ. ಈ ಬಗ್ಗೆ ಚುನಾವಣಾ ಆಯೋಗ ಮತ್ತು ಪೊಲೀಸರಿಗೆ ದೂರು ನೀಡುತ್ತೇನೆ. ಈ ನಕಲಿ ಪತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಲು ಮತ್ತು ಅಂಥವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದೂರು ಸಲ್ಲಿಸುವವನಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

suddiyaana