ಸಿಎಂ ಪಟ್ಟಕ್ಕೇರಲು ಸಿದ್ದು, ಡಿಕೆಶಿ ಪಟ್ಟು – ಇಬ್ಬರ ಕಿತ್ತಾಟದಲ್ಲಿ ಮೂರನೆಯವರ ಪಾಲಾಗುತ್ತಾ ಗದ್ದುಗೆ?

ಸಿಎಂ ಪಟ್ಟಕ್ಕೇರಲು ಸಿದ್ದು, ಡಿಕೆಶಿ ಪಟ್ಟು – ಇಬ್ಬರ ಕಿತ್ತಾಟದಲ್ಲಿ ಮೂರನೆಯವರ ಪಾಲಾಗುತ್ತಾ ಗದ್ದುಗೆ?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬಂದರೂ ಕೂಡ ಸಿಎಂ ಕುರ್ಚಿ ಕಾಳಗ ತಾರಕಕ್ಕೇರುತ್ತಿದೆ. ಫಲಿತಾಂಶ ಹೊರಬಿದ್ದು 4 ದಿನವಾದ್ರೂ ಯಾರಿಗೆ ಮುಖ್ಯಮಂತ್ರಿ ಗದ್ದುಗೆ ಅನ್ನೋದು ಮಾತ್ರ ಇನ್ನೂ ಫೈನಲ್ ಆಗಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಾವೇ ಸಿಎಂ ಆಗಬೇಕೆಂದು ಪಟ್ಟು ಹಿಡಿದಿದ್ದು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಇಬ್ಬರೂ ನಾಯಕರು ಹೈಕಮಾಂಡ್ ಮುಂದೆ ಪಟ್ಟು ಕದಲಿಸದೆ ತಂತ್ರ ಹೆಣೆಯುತ್ತಿದ್ದಾರೆ.

ಇದನ್ನೂ ಓದಿ : ದೆಹಲಿಯತ್ತ ಡಿಕೆ ಶಿವಕುಮಾರ್ – ಇಂದೇ ಸಿಎಂ ಆಯ್ಕೆ ಸಾಧ್ಯತೆ

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದು ಸೋಮವಾರವೇ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕಸರತ್ತು ನಡೆಸುತ್ತಿದ್ದಾರೆ. ಮಂಗಳವಾರ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ನಾಯಕರ ಮುಂದೆ ತಮ್ಮ ವಾದ ಮಂಡಿಸಲಿದ್ದಾರೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಿದ್ದರಾಮಯ್ಯಗೆ ಶಾಸಕರ ದಂಡೇ ಸಾಥ್ ನೀಡಿದೆ. ಶಾಸಕರಾದ ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್, ಬೈರತಿ ಸುರೇಶ್, ಅನಿಲ್ ಚಿಕ್ಕಮಾಧು, ಕೆ.ಜೆ.ಜಾರ್ಜ್, ಪುತ್ರ ಯತೀಂದ್ರ ಸಾಥ್ ನೀಡಿದ್ದಾರೆ.

ಹಿಮಾಚಲ ಪ್ರದೇಶದ ಪ್ರವಾಸಕ್ಕೆ ತೆರಳಿರುವ ಸೋನಿಯಾ ಗಾಂಧಿ (Sonia Gandhi) ದೆಹಲಿಗೆ ಮರಳಲಿದ್ದು, ಡಿಕೆ ಶಿವಕುಮಾರ್‌ (DK Shivakumar ) ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲೇ ಖರ್ಗೆ ನಿವಾಸದಲ್ಲೇ ಬ್ಯಾಲೆಟ್‌ ಬಾಕ್ಸ್‌ ತೆರೆಯಲಾಗುತ್ತದೆ. ಶಾಸಕರು ಯಾರಿಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೋ ಅವರಿಗೆ ಸಿಎಂ ಪಟ್ಟ ಸಿಗುವ ಸಾಧ್ಯತೆಯಿದೆ. ಇದಾದ ಬಳಿಕ ಇಬ್ಬರ ಜೊತೆ ಸಂಧಾನ ಸಭೆ ನಡೆದು ಸಿಎಂ ಯಾರಾಗಬೇಕು ಎಂಬ ನಿರ್ಧಾರ ಅಂತಿಮವಾಗಲಿದೆ.

ಮತ್ತೊಂದೆಡೆ ಡಿ.ಕೆ ಶಿವಕುಮಾರ್ ಪರ ಸೋದರ ಡಿ.ಕೆ ಸುರೇಶ್ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಹೀಗಾಗಿ ಸೋದರ ಡಿಕೆಶಿಗೇ ಸಿಎಂ ಕುರ್ಚಿ ನೀಡುವಂತೆ ಇಂಗಿತ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಡಿಕೆಶಿ, ಸಿದ್ದರಾಮಯ್ಯ ಜೊತೆಗೆ ಬೇರೆ ನಾಯಕರಿಗೆ ಸಿಎಂ ಪಟ್ಟ ಕಟ್ಟುವಂತೆ ಕೆಲ ಶಾಸಕರು ಒತ್ತಾಯಿಸಿದ್ದಾರೆ.

suddiyaana