ಸಿದ್ಧಗಂಗಾ ಶ್ರೀಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ – ಲಕ್ಷಾಂತರ ಭಕ್ತರಿಗೆ ಭರ್ಜರಿ ಭೋಜನ!

ಸಿದ್ಧಗಂಗಾ ಶ್ರೀಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ – ಲಕ್ಷಾಂತರ ಭಕ್ತರಿಗೆ ಭರ್ಜರಿ ಭೋಜನ!

ತುಮಕೂರು : ಇಂದು ಅಕ್ಷರ ಸಂತ, ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ. ಹೀಗಾಗಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಲಕ್ಷಾಂತರ ಭಕ್ತರಿಗಾಗಿ ಬಗೆ ಬಗೆ ಭೋಜನ ಸಿದ್ಧವಾಗಿದೆ.

ಶಿಕ್ಷಣ ಕ್ರಾಂತಿ  ಮೂಲಕ ಲಕ್ಷಾಂತರ ಮಕ್ಕಳ ಬದುಕು ಬೆಳಗಿದ ಸಿದ್ದಗಂಗಾ ಶ್ರೀಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ಹೀಗಾಗಿ ಲಿಂಗೈಕ್ಯ ಪರಮಪೂಜ್ಯ  ಶ್ರೀಗಳ ಗದ್ದುಗೆಗೆ ಬೆಳಿಗ್ಗೆ 5 ಗಂಟೆಯಿಂದ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಬೆಳ್ಳಿ ರಥದಲ್ಲಿ ಪೂಜ್ಯರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಬಳಿಕ ನಡೆಯುವ ಕಾರ್ಯಕ್ರಮಕ್ಕಾಗಿ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಬೃಹತ್ ಸಭಾಮಂಟಪ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ : ಮೂವರು ಮಕ್ಕಳಿಗೆ ಜನ್ಮ ನೀಡಿದರೆ ಅಧಿಕ ವೇತನ, 3 ಲಕ್ಷ ಸಹಾಯಧನ! – ಸರ್ಕಾರದಿಂದ ಬಂಪರ್ ಆಫರ್

ಮಠದ ಶ್ರೀಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ, ಸಚಿವರಾದ ಜೆ.ಸಿ ಮಾಧುಸ್ವಾಮಿ, ವಿ. ಸೋಮಣ್ಣ, ಆರಗ ಜ್ಞಾನೇಂದ್ರ, ಬಿ.ಸಿ ನಾಗೇಶ್​, ಡಾ.ಕೆ.ಸುಧಾಕರ್​​, ಎಸ್​.ಟಿ.ಸೋಮಶೇಖರ್​, ಸಿ.ಸಿ.ಪಾಟೀಲ್​​, ಸಂಸದರಾದ ಬಸವರಾಜ್, ತೇಜಸ್ವಿ ಸೂರ್ಯ, ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಸೇರಿದಂತೆ ವಿವಿಧ ನಾಯಕರು ಹಾಗೂ ಮಠಾಧೀಶರು ಭಾಗಿಯಾಗಲಿದ್ದಾರೆ.

ಸಿದ್ಧಗಂಗಾ ಮಠದ  ಅಧ್ಯಕ್ಷರಾದ ಸಿದ್ದಲಿಂಗಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಶಿವಾನುಭಚರಮೂರ್ತಿ ಪರಮಪೂಜ್ಯ ಶ್ರೀ ಶಿವರುದ್ರ ಮಹಾ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ.   ಇನ್ನು ಕಾರ್ಯಕ್ರಮದಲ್ಲಿ “ವಿಶ್ವ ಜ್ಯೋತಿ” (ಶಿವಕುಮಾರ ಸ್ವಾಮೀಜಿಗಳ ಕುರಿತ ಲೇಖನ ಸಂಗ್ರಹ) ಪುಸ್ತಕ ಬಿಡುಗಡೆ ಮಾಡಲಾಗುತ್ತದೆ. ಕಾರ್ಯಕ್ರಮದ ವೀಕ್ಷಣೆಗೆ 10ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.

ಶ್ರೀಮಠಕ್ಕೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿ 5 ಕಡೆ ಪ್ರಸಾದದ ಕೌಂಟರ್​ ತೆರೆಯಲಾಗಿದೆ. ಕೈಗಾರಿಕಾ ವಸ್ತು ಪ್ರದರ್ಶನ ಆವರಣ, ಸಾದರ ಕೊಪ್ಪಲು ಕೆಂಪಹೊನ್ನಯ್ಯ ಅತಿಥಿಗೃಹ, ಹೊಸಪ್ರಸಾದ ನಿಲಯದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬರುವ ಭಕ್ತರಿಗೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುವುದು. ಸಾರ್ವಜನಿಕರು ಮಠಕ್ಕೆ ಕ್ಯಾತ್ಸಂದ್ರ ಮಾರ್ಗವಾಗಿ ಪ್ರವೇಶ ನೀಡಲು ಅನುವು ಮಾಡಿಕೊಡಲಾಗಿದೆ. ಮಠದ ಹಿಂಬದಿ ಗೇಟ್​ ಮುಖಾಂತರ ವಿಐಪಿಗಳು ಪ್ರವೇಶ ಮಾಡಬಹುದಾಗಿದೆ. ಇನ್ನು ಮಠಕ್ಕೆ 5 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದ್ದು ಬೃಹತ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸೋದರಿಂದ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಿದ್ದಗಂಗಾ ಮಠದ ಸುತ್ತಲು ತುಮಕೂರು ಎಸ್​ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ನಾಲ್ವರು ಡಿ.ವೈ.ಎಸ್.ಪಿ, 10 ಜನ ಸಿ.ಪಿ.ಐ, 20 ಜನ ಸಬ್​ಇನ್ ಸ್ಪೆಕ್ಟರ್, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

 

suddiyaana