ನಾಯಿಗೆ ಸ್ನಾನ ಮಾಡಿಸಲು ಹೋಗಿ ಅಣ್ಣ, ತಂಗಿ ಕೆರೆಪಾಲು – ಮುದ್ದಿನ ಶ್ವಾನದಿಂದಲೇ ಬಯಲಾಯ್ತು ಸಾವಿನ ರಹಸ್ಯ!

ನಾಯಿಗೆ ಸ್ನಾನ ಮಾಡಿಸಲು ಹೋಗಿ ಅಣ್ಣ, ತಂಗಿ ಕೆರೆಪಾಲು – ಮುದ್ದಿನ ಶ್ವಾನದಿಂದಲೇ ಬಯಲಾಯ್ತು ಸಾವಿನ ರಹಸ್ಯ!

ಅಲ್ಲೊಂದು ಹೊಂಡ. ಹೊಂಡದ ದಡದಲ್ಲಿ ನಿಂತು ನಾಯಿಯೊಂದು ಒಂದೇ ಸಮನೆ ಬೊಗಳುತ್ತಿತ್ತು. ಆರಂಭದಲ್ಲಿ ಜನರೆಲ್ಲಾ ಯಾಕೋ ಬೊಗಳುತ್ತಿದೆ ಎಂದುಕೊಂಡು ತಮ್ಮ ಪಾಡಿಗೆ ತಾವು ಹೋಗಿದ್ರು. ಆದರೆ ಆ ಶ್ವಾನ ಮಾತ್ರ ನೀರಿನ ಕಡೆಯೇ ನೋಡಿಕೊಂಡು ಬೊಬ್ಬೆ ಹೊಡಿಯುತ್ತಿತ್ತು. ನಾಯಿಯ ವರ್ತನೆ ಕಂಡು ಕೆಲವರು ಹತ್ತಿರ ಬಂದು ನೋಡಿದ್ದಾರೆ. ಆಗ ಕಂಡಿದ್ದೇ ಭಯಾನಕ ದೃಶ್ಯ.

ಇದನ್ನೂ ಓದಿ : ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಸ್ಲಮ್‌ನ ರಾಜಕುಮಾರಿ – 14 ವರ್ಷದ ಬಾಲೆಗೆ ಹಾಲಿವುಡ್‌ನಿಂದಲೂ ಆಫರ್..!

ಅದೇ ಹೊಂಡದಲ್ಲಿಯೇ ಅಣ್ಣ ತಂಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆಗಿದ್ದೇನಂದ್ರೆ ಅಣ್ಣ-ತಂಗಿ ಇಬ್ಬರೂ ಸಾಕು ನಾಯಿಗೆ ಸ್ನಾನ (bath) ಮಾಡಿಸಬೇಕೆಂದು ಅದನ್ನು ಸಮೀಪದ ಹೊಂಡಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗಲೇ ಇಂಥಾದ್ದೊಂದು ಘಟನೆ ನಡೆದಿದೆ. ಮಹಾರಾಷ್ಟ್ರದ (Maharashtra) ಡೊಂಬಿವಲಿ ದವಾಡಿ ಎಂಬ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ರಂಜಿತ್ ರವೀಂದ್ರನ್ (22) ಮತ್ತು ಅವರ ತಂಗಿ ಕೀರ್ತಿ ರವೀಂದ್ರನ್ (16) ಕೆಲಸದ ನಿಮಿತ್ತ ತಮ್ಮ ಪೋಷಕರೊಂದಿಗೆ ಭಾನುವಾರ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಗೆ ಹೋದ ಮೇಲೆ ಅಣ್ಣ-ತಂಗಿಯರಿಬ್ಬರು ತಮ್ಮ ಸಾಕು ನಾಯಿಯನ್ನು ಸ್ಕೂಟರ್​ನಲ್ಲಿ ಕರೆದುಕೊಂಡು ಸಮೀಪದ ಗವೇವಿ ಹೊಂಡಕ್ಕೆ ತೆರಳಿದ್ದರು. ಆದರೆ ನಾಯಿಗೆ ಸ್ನಾನ ಮಾಡಿಸುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರೂ ಕಣ್ಣೆದುರೇ ನೀರಿನಲ್ಲಿ ಮುಳುಗುತ್ತಿದ್ದಾಗ ನಾಯಿ ಸಹಾಯಕ್ಕಾಗಿ ಜೋರಾಗಿ ಬೊಗಳ ತೊಡಗಿದೆ. ಆದರೆ ನಾಯಿಯ ಸಂಕಟ ಆರಂಭದಲ್ಲಿ ಯಾರಿಗೂ ಅರ್ಥವಾಗಿಲ್ಲ. ನಾಯಿ ನೀರಿನತ್ತ ಕಣ್ಣು ಹಾಯಿಸಿ ಬೊಗಳುವುದನ್ನು ಆ ಮೂಲಕ ಹೋಗುತ್ತಿದ್ದ ಗ್ರಾಮಸ್ಥರು ಗಮನಿಸಿದ್ದಾರೆ. ಅನುಮಾನಗೊಂಡ ಗ್ರಾಮಸ್ಥರು ಕೆರೆಯೊಳಗೆ ನೋಡಿದಾಗ ಅಣ್ಣ-ತಂಗಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಗಂಟೆಗಳ ಕಾಲ ಶೋಧ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಅಣ್ಣ ತಂಗಿ ಇಬ್ಬರೂ ಸದಾ ಓದಿನಲ್ಲಿ ಮುಂದಿದ್ದರು ಎಂಬುದನ್ನ ನೆನಪು ಮಾಡಿಕೊಂಡು ಸ್ಥಳೀಯರು ಕೂಡ ಕಣ್ಣೀರಿಟ್ಟಿದ್ದಾರೆ. ಕೀರ್ತಿ 10ನೇ ತರಗತಿಯಲ್ಲಿ ಶೇ. 98 ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ರಂಜಿತ್ ಕೂಡ ಎಂಬಿಬಿಎಸ್ ಅಂತಿಮ ವರ್ಷ ಓದುತ್ತಿದ್ದ. ಆದರೆ ವಿಧಿಯಾಟದ ಮುಂದೆ ಇಬ್ಬರೂ ಸಾವಿನ ಮನೆ ಸೇರಿದ್ದು ಕುಟುಂಬಸ್ಥರು ಮಾತ್ರವಲ್ಲದೆ ಇಡೀ ಗ್ರಾಮಸ್ಥರೇ ಕಣ್ಣೀರಿಡುತ್ತಿದ್ದಾರೆ.

suddiyaana