ಕೊಹ್ಲಿ ದಾಖಲೆ ಮುರಿದು ದಿಲ್ ಗೆದ್ದ ಗಿಲ್ – ಶುಭ್ ಮನ್ ಆಟಕ್ಕೆ ರೆಕಾರ್ಡ್ ಗಳೇ ಉಡೀಸ್!
ಶುಭ್ಮನ್ ಗಿಲ್. ಕ್ರಿಕೆಟ್ ಲೋಕದಲ್ಲಿ ಸದ್ಯ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಹೆಸ್ರು. ಸಿಕ್ಸ್, ಫೋರ್ ಗಳ ಮೂಲಕವೇ ಮೈದಾನದಲ್ಲಿ ರನ್ ಮಳೆ ಸುರಿಸುತ್ತಿರೋ ಯಂಗ್ ಕ್ರಿಕೆಟರ್. ಇನ್ನೂ 23ರ ಹರೆಯದ ಈ ಬ್ಯಾಟ್ಸ್‌ಮನ್ ನಿನ್ನೆಯೂ ಮ್ಯಾಜಿಕ್ ಮಾಡಿದ್ದಾರೆ. ಅಬ್ಬರದ ಬ್ಯಾಟಿಂಗ್ನಿಂದಲೇ ದಾಖಲೆ ಸೃಷ್ಟಿಸಿದ್ದಾರೆ.
ಇದನ್ನೂ ಓದಿ :ನ್ಯೂಜಿಲೆಂಡ್ ವಿರುದ್ಧ ಸರ್ವಶ್ರೇಷ್ಠ ಗೆಲುವು – ಅದೆಷ್ಟು ದಾಖಲೆಗಳಿಗೆ ಸಾಕ್ಷಿಯಾಯ್ತು ‘ಮೋದಿ’ ಸ್ಟೇಡಿಯಂ?
ಟೀಂ ಇಂಡಿಯಾ ಪಾಲಿಗೆ ಶುಭ್ಮನ್ ಗಿಲ್ ಈಗ ರನ್ ಮಷಿನ್ನಂತಾಗಿದ್ದಾರೆ. ನಿನ್ನೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಗಿಲ್ ಸೆಂಚುರಿ ಬಾರಿಸಿದ್ದಾರೆ. ಅದೂ ಕೂಡ ಜಸ್ಟ್ 63 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ ಅಜೇಯ 126 ರನ್ ಸಿಡಿಸಿದ್ದಾರೆ.
23ರ ಹರೆಯದ ಈ ಬ್ಯಾಟ್ಸ್ ಮನ್ ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ ಗಳಿಸಿದ್ದರು. ಏಕದಿನದಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಅಂತಾರಾಷ್ಟ್ರೀಯ ಟಿ20ಯಲ್ಲಿ ಮೊದಲ ಶತಕ ಬಾರಿಸಿದ್ದು, ಇದು ಗಿಲ್ರ ಮೊದಲ ಸೆಂಚುರಿ ಆಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ್ದು, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2023 ರ ಕ್ರಿಕೆಟ್ನಲ್ಲಿ 160 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದಾರೆ. ಇಷ್ಟು ಆಟಗಾರರಲ್ಲಿ ಶುಭ್ ಮನ್ ಗಿಲ್ ಎಲ್ಲರಿಗಿಂತ ಅತೀ ಹೆಚ್ಚು ರನ್ ಗಳಿಸಿದ್ದಾರೆ. ಅಂದರೆ ಗಿಲ್ 159 ಆಟಗಾರರಿಗಿಂತ ಮುಂದಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಗಿಲ್ ಕೇವಲ ಬೌಂಡರಿಗಳಿಂದಲೇ 500 ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ.
ಶುಭ್ ಮನ್ ಗಿಲ್ 2023ರಲ್ಲಿ 12 ಇನ್ನಿಂಗ್ಸ್‌ಗಳಲ್ಲಿ 77ರ ಸರಾಸರಿಯಲ್ಲಿ 769 ರನ್ ಗಳಿಸಿದ್ದಾರೆ. ಬೇರೆ ಯಾವುದೇ ಬ್ಯಾಟ್ಸ್ಮನ್ಗಳು 500 ರನ್‌ಗಳ ಗಡಿಯನ್ನು ತಲುಪಲು ಸಾಧ್ಯವಾಗಿಲ್ಲ. ಆದ್ರೆ ಗಿಲ್ 4 ಶತಕ ಹಾಗೂ ಒಂದು ಅರ್ಧ ಶತಕ ಸಿಡಿಸಿದ್ದಾರೆ. 208 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ. ಯುವ ಆಟಗಾರ ಗಿಲ್ ಈ ವರ್ಷ ಇದುವರೆಗೆ 87 ಬೌಂಡರಿ ಮತ್ತು 26 ಸಿಕ್ಸರ್ ಸಿಡಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 135 ಆಗಿದೆ. ODIಗಳಲ್ಲಿ 6 ಇನ್ನಿಂಗ್ಸ್ ಮೂಲಕ 567 ರನ್ ಗಳಿಸಿದ್ದಾರೆ ಮತ್ತು T20 ಇಂಟರ್ ನ್ಯಾಷನಲ್ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 202 ರನ್ ಗಳಿಸಿದ್ದಾರೆ. ಈ ವರ್ಷ ಶುಭ್ಮನ್ ಇಲ್ಲಿಯವರೆಗೆ ಯಾವುದೇ ಟೆಸ್ಟ್ ಆಡಿಲ್ಲ.
2023 ರಲ್ಲಿ ಭಾರತದ ಇತರ ಬ್ಯಾಟ್ಸ್‌ಮನ್‌ಗಳ ಪ್ರದರ್ಶನವನ್ನು ನೋಡಿದರೆ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ 6 ಇನ್ನಿಂಗ್ಸ್‌ಗಳಲ್ಲಿ 2 ಶತಕಗಳ ಸಹಾಯದಿಂದ 338 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ ಕೂಡ 6 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು 2 ಅರ್ಧ ಶತಕಗಳ ಸಹಾಯದಿಂದ 328 ರನ್ ಗಳಿಸಿದ್ದಾರೆ.
ಶುಭಮನ್ ಗಿಲ್ ರ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಟೀಮ್ ಇಂಡಿಯಾ 2023 ರಲ್ಲಿ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ ಮತ್ತು ನಾಲ್ಕರಲ್ಲಿ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನೂ ತಂಡ ಗೆದ್ದುಕೊಂಡಿದೆ.