ಕೇಸ್ ಗಳೇ ಮುತಾಲಿಕ್ ಆಸ್ತಿ! – ಕುಟುಂಬವೇ ಇಲ್ಲ, ದೇಣಿಗೆಯೇ ಆದಾಯ..

ಕೇಸ್ ಗಳೇ ಮುತಾಲಿಕ್ ಆಸ್ತಿ! – ಕುಟುಂಬವೇ ಇಲ್ಲ, ದೇಣಿಗೆಯೇ ಆದಾಯ..

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆ ದಿನವಾಗಿದ್ದು, ಈಗಾಗಲೇ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಆಸ್ತಿ ವಿವರ ಘೋಷಿಸಿದ್ದಾರೆ. ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಕೂಡ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಘೋಷಿಸಿದ್ದಾರೆ. ಇದರಲ್ಲಿ ಅವರ ಆಸ್ತಿಗಿಂತ ಅಪರಾಧ ಪ್ರಕರಣಗಳೇ ಹೆಚ್ಚಿವೆ.

ಇದನ್ನೂ ಓದಿ: ಮಕ್ಕಳಿಗೆ ರಜೆ ಎಂದು ಪ್ರಚಾರಕ್ಕೆ ಕರೆಯಬೇಡಿ..! – ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದ ಚುನಾವಣಾಧಿಕಾರಿಗಳು..!

ಪಕ್ಷೇತರ ಅಭ್ಯರ್ಥಿ ಮುತಾಲಿಕ್‌ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕಾಸಿಗಿಂತ ಕೇಸೇ ಜಾಸ್ತಿಯಿರುವ ಮಾಹಿತಿ ಬಹಿರಂಗಗೊಂಡಿದೆ. ಪ್ರಮೋದ್ ಮತಾಲಿಕ್ ಬಳಿ ಸ್ಥಿರಾಸ್ತಿ, ವಾಹನ, ಸಾಲ ಇಲ್ಲ. ಮುತಾಲಿಕ್ ಕೈಯಲ್ಲಿ 10,500 ರೂ. ನಗದು, ಎರಡು ಬ್ಯಾಂಕುಗಳಲ್ಲಿ 2,63,500 ರೂ. ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಯಾದಗಿರಿ, ಶೃಂಗೇರಿ, ಬೆಂಗಳೂರು, ಬಬಲೇಶ್ವರ, ಬಾಗಲಕೋಟೆ ನವನಗರ, ಜೇವರ್ಗಿ ಹಾಗೂ ಮುರುಡೇಶ್ವರ ಸೇರಿ ರಾಜ್ಯದ 7 ಠಾಣೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಕೇಸು ಮುತಾಲಿಕ್ ವಿರುದ್ಧ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ, ಮಾನನಷ್ಟ ಮೊಕದ್ದಮೆ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೋಮು ಗಲಭೆ, ಜೀವ ಬೆದರಿಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ ಕೇಸ್‌ಗಳು ದಾಖಲಾಗಿದೆ ಎಂದು ಆಯೋಗಕ್ಕೆ ತಿಳಿಸಿದ್ದಾರೆ.

ಪ್ರಮೋದ್ ಮುತಾಲಿಕ್  ಅವರಿಗೆ ಪತ್ನಿ, ಅವಲಂಬಿತರೂ ಇಲ್ಲ. ಅವರ ಹೆಸರಿನಲ್ಲಿ ಯಾವುದೇ ಜಮೀನು, ನಿವೇಶನ, ಮನೆ, ವಾಹನ, ಚಿನ್ನಾಭರಣ, ಸಾಲ, ದುಬಾರಿ ವಸ್ತುಗಳು ಇಲ್ಲ. ಅವರ ಆದಾಯ ಮೂಲ ದೇಣಿಗೆ ಸಂಗ್ರಹ, ಉದ್ಯೋಗ ಸಮಾಜಸೇವೆ ಅಂತಾ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ತಿಳಿಸಿದ್ದಾರೆ.

suddiyaana