KKR ಸಾರಥ್ಯದಿಂದ ಶ್ರೇಯಸ್ ಔಟ್? – ರೋಹಿತ್ & ಸೂರ್ಯ & ಕಮಿನ್ಸ್ ರೇಸ್
2025ರ ಹರಾಜು ನಿಯಮನೇ ಕಾರಣ
2025ರ ಐಪಿಎಲ್ಗೆ ಬಿಸಿಸಿಐ ಸಿದ್ಧತೆ ಮಾಡಿಕೊಳ್ತಿದೆ. ಹಾಗೇ ಹರಾಜು ವೇಳೆಗೆ ಏನೆಲ್ಲಾ ರೂಲ್ಸ್ ಇರ್ಬೇಕು ಅನ್ನೋದು ಕೂಡ ಫೈನಲ್ ಆಗ್ತಿದೆ. ಈಗಾಗ್ಲೇ 18ನೇ ಸೀಸನ್ನ ಚಾಂಪಿಯನ್ ಪಟ್ಟದ ಮೇಲೆ ಕಣ್ಣೀಟ್ಟಿರೋ ಫ್ರಾಂಚೈಸಿಗಳು ಕೆಲವೊಂದು ಬದಲಾವಣೆಗಳನ್ನ ಮಾಡಿಕೊಳ್ತಿವೆ. ಅದ್ರಲ್ಲೂ 2024ರ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ನಾಯಕನನ್ನೇ ಬದಲಿಸೋ ಮಹತ್ವದ ನಿರ್ಧಾರ ಕೈಗೊಂಡಿರೋ ಬಗ್ಗೆ ವರದಿಯಾಗಿದೆ. ಕೆಕೆಆರ್ನಲ್ಲಿ ಯಾಕೆ ಕ್ಯಾಪ್ಟನ್ಸಿ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ? ಚಾಂಪಿಯನ್ ತಂಡದ ನಾಯಕ ಯಾಕೆ ಬೇಡವಾದ್ರು? ಯಾರೆಲ್ಲಾ ರೇಸ್ನಲ್ಲಿ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಗುವಿನಿಂದ ತುಳಸಿಗೆ ಅಪಾಯ – ಕಮೆಂಟ್ ಗೆ ಹೆದರಿದ್ರಾ ಡೈರೆಕ್ಟರ್?
18ನೇ ಸೀಸನ್ ಐಪಿಎಲ್ಗೂ ಮುನ್ನ ಹಲವು ಫ್ರಾಂಚೈಸಿ ತಂಡಗಳು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಅದ್ರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಕಳೆದ ವರ್ಷ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸೋಕೆ ಶಾರುಖ್ ಒಡೆತನದ ಫ್ರಾಂಚೈಸಿ ಮುಂದಾಗಿದ್ಯಂತೆ. ಹಾಗಂತ ಚಾಂಪಿಯನ್ ಆದ ನಂತರ ನಾಯಕನನ್ನು ತೆಗೆದುಹಾಕುತ್ತಿರುವುದು ಹೊಸದೇನೂ ಅಲ್ಲ. ಈ ಹಿಂದೆ ಮುಂಬೈ ಇಂಡಿಯನ್ಸ್‌ನಲ್ಲಿ ಈ ಪ್ರಕ್ರಿಯೆ ನಡೆದಿತ್ತು. ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ ರೋಹಿತ್ ಶರ್ಮಾ ಅವರನ್ನು ಬದಲಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಲಾಗಿತ್ತು. ಮುಂಬೈಗೆ ಹಾರ್ದಿಕ್ ಹಿಂತಿರುಗುತ್ತಿದ್ದಂತೆ ತಂಡದ ಪ್ರದರ್ಶನ ಫ್ಲ್ಯಾಪ್ ಶೋ ಆಗಿತ್ತು. ಆಟಗಾರರಲ್ಲೂ ಅಸಮಾಧಾನ ಮೂಡಿತ್ತು. ಬಟ್ ಈಗ ಇದೇ ಸ್ಥಿತಿ ಕೆಕೆಆರ್ ತಂಡಕ್ಕೂ ಉಂಟಾಗೋ ಲಕ್ಷಣ ಕಾಣ್ತಿದೆ. ಯಾಕಂದ್ರೆ ಈಗಾಗ್ಲೇ ಕೆಕೆಆರ್ ಫ್ರಾಂಚೈಸಿ ನೂತನ ಕ್ಯಾಪ್ಟನ್ ಪಟ್ಟಕ್ಕಾಗಿ ಮೂವರ ಮೇಲೆ ಕಣ್ಣಿಟ್ಟಿದೆ.
ಮೂವರ ಮೇಲೆ ಕೆಕೆಆರ್ ಕಣ್ಣು!
ಸ್ಪೋಟಕ ಬ್ಯಾಟಿಂಗ್ ಮೂಲಕವೇ ಟಿ-20 ಕ್ರಿಕೆಟ್ನ ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳೋ ಸೂರ್ಯಕುಮಾರ್ ಯಾದವ್ ಸದ್ಯ ಐಪಿಎಲ್‌ನಲ್ಲಿ ಮುಂಬೈ ಪರ ಆಡ್ತಿದ್ದಾರೆ. ಆದ್ರೆ ಹಾರ್ದಿಕ್ ಕ್ಯಾಪ್ಟನ್ಸಿಯಿಂದ ಬೇಸತ್ತು ಮುಂದಿನ ಆವೃತ್ತಿಯಲ್ಲಿ ತಂಡವನ್ನು ಬದಲಾಯಿಸೋ ಸಾಧ್ಯತೆ ಇದೆ. ಹೀಗಾಗಿ ಸೂರ್ಯಗೆ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿ ಮಾಡಲು ಸಂಪರ್ಕ ಮಾಡಲಾಗಿದೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ಬಳಿಕ ಸೂರ್ಯಕುಮಾರ್ ಅವರನ್ನು ಟೀಮ್ ಇಂಡಿಯಾದ ಪೂರ್ಣಾವಧಿ ಟಿ20 ನಾಯಕನ್ನಾಗಿ ಮಾಡಲಾಗಿದೆ. ಸೂರ್ಯಕುಮಾರ್ ನಂತರ ಮುಂಚೂಣಿಯಲ್ಲಿರುವ ಆಟಗಾರನ ಹೆಸರು ರೋಹಿತ್ ಶರ್ಮಾ. ಮುಂದಿನ ಋತುವಿನಲ್ಲಿ ರೋಹಿತ್ ಕೋಲ್ಕತ್ತಾ ತಂಡವನ್ನು ಸೇರಿಕೊಳ್ಳಬಹುದು ಎಂಬ ಚರ್ಚೆಗಳು ಕ್ರಿಕೆಟ್ ಗಲ್ಲಿಯಲ್ಲಿ ಆರಂಭವಾಗಿವೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ ಬಳಿಕ ರೋಹಿತ್ ಬೇಸರಗೊಂಡಿದ್ದು, ಮುಂಬೈ ಇಂಡಿಯನ್ಸ್‌ನಿಂದ ಹೊರಬರಬಹುದು. ಬರೋದು ಪಕ್ಕಾ ಆದ್ರೆ ಕೆಕೆಆರ್ ಕ್ಯಾಪ್ಟನ್ಸಿ ಅವ್ರಿಗೇ ನೀಡೋಕೆ ಮುಂದಾಗಿದ್ದಾರೆ. ಹಾಗೇ ಮತ್ತೊಬ್ಬ ಆಟಗಾರ ಪ್ಯಾಟ್ ಕಮಿನ್ಸ್. 2025ರ ಐಪಿಎಲ್ ಟೂರ್ನಿಯಲ್ಲಿ ಪ್ಯಾಟ್ ಕಮಿನ್ಸ್ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. 2024ರ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್ ಗೆ ಕರೆದೊಯ್ದಿದ್ದ ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಕಮ್ಮಿನ್ಸ್ ಮರಳಿ ಕೆಕೆಆರ್ ಸೇರುವ ಸಾಧ್ಯತೆಯಿದೆ. ಈ ಹಿಂದೆಯೂ ಅವರಿಗೆ ಕೆಕೆಆರ್ ತಂಡದೊಂದಿಗೆ ಆಡಿರುವ ಅನುಭವಿದೆ. ಮೆಗಾ ಹರಾಜಿಗೂ ಮುನ್ನ ಎಸ್‌ಆರ್‌ಹೆಚ್ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗದಿದ್ದರೆ ಕೋಲ್ಕತ್ತಾ ಅವರನ್ನು ನಾಯಕನ ಸ್ಥಾನಕ್ಕೆ ಹರಾಜಿನಲ್ಲಿ ಖರೀದಿಸಲು ಮಂದಾಗಬಹುದು.
ಅಷ್ಟಕ್ಕೂ 2025ರ ಐಪಿಎಲ್ ಟೂರ್ನಿಯಲ್ಲಿ ಇಷ್ಟೆಲ್ಲಾ ದೊಡ್ಡ ಮಟ್ಟದ ಬದಲಾವಣೆಗಳು ಆಗೋದಕ್ಕೆ ಕಾರಣ ಮೆಗಾ ಆಕ್ಷನ್. ಈ ಸಲ ಮೆಗಾ ಹರಾಜು ಪ್ರಕ್ರಿಯೆ ನಡೆಯೋದ್ರಿಂದ ಮೂರ್ನಾಲ್ಕು ಆಟಗಾರರನ್ನ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಹರಾಜಿಗೆ ಬರಲೇಬೇಕು. ಹೀಗೆ ಬಂದ ವೇಳೆ ಯಾವ ಫ್ರಾಂಚೈಸಿ ಹೆಚ್ಚು ಬಿಡ್ ಕರೆಯುತ್ತದೆಯೋ ಆ ತಂಡಕ್ಕೆ ಸೇರಲೇಬೇಕಾದ ಅನಿವಾರ್ಯವಿದೆ. ಸೋ 18ನೇ ಸೀಸನ್ ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆಗಳು ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.