ಪಂತ್, ಅಯ್ಯರ್ ವೇತನಕ್ಕಿಂತ ಕಡಿಮೆ – ಚಾಂಪಿಯನ್ಸ್ ಟ್ರೋಫಿ ಗೆದ್ದವರಿಗೆ ಬಹುಮಾನ ಎಷ್ಟು?

2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಈ ಬಾರಿ ಪಾಕಿಸ್ತಾನ ಆಯೋಜನೆ ಮಾಡ್ತಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು ಭಾರತದ ಮ್ಯಾಚ್ಗಳೆಲ್ಲಾ ದುಬೈನಲ್ಲಿ ನಡೆಯಲಿವೆ. 1996 ರ ನಂತರ ಪಾಕಿಸ್ತಾನ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸುತ್ತಿದೆ. ಫೆಬ್ರವರಿ 19 ರಿಂದ ಟೂರ್ನಿ ಆರಂಭಗೊಂಡರೆ ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. 8 ಟೀಮ್ಗಳನ್ನ 2 ಗುಂಪುಗಳಾಗಿ ಡಿವೈಡ್ ಮಾಡಿದ್ದು, ಲೀಗ್ ಹಂತದಲ್ಲಿ ಪ್ರತೀ ತಂಡಕ್ಕೂ 3 ಪಂದ್ಯಗಳು ಇರಲಿವೆ. ಸೋ ಹೆಚ್ಚು ಮ್ಯಾಚ್ಗಳನ್ನ ಗೆದ್ದ ಎರಡು ತಂಡಗಳು ಸೆಮಿಫೈನಲ್ಗೆ ಲಗ್ಗೆ ಇಡಲಿವೆ. ಅಂತಿಮವಾಗಿ 2 ತಂಡಗಳು ಫೈನಲ್ ಪ್ರವೇಶಿಸಲಿದ್ದು ಮಾರ್ಚ್ 9ರಂದು ಅಂತಿಮ ಫೈಟ್ ಇರಲಿದೆ. ಇದೀಗ ಟೂರ್ನಿಯಲ್ಲಿ ಗೆದ್ದವ್ರಿಗೆ ಪ್ರೈಸ್ ಮನಿ ಎಷ್ಟು ಅನ್ನೋದನ್ನ ಐಸಿಸಿ ಅನೌನ್ಸ್ ಮಾಡಿದೆ.
ಇದನ್ನೂ ಓದಿ : ಕೆಎಲ್ ರಾಹುಲ್ ಫಸ್ಟ್ ಚಾಯ್ಸ್ – CTಗೂ ಕನ್ನಡಿಗನೇ ವಿಕೆಟ್ ಕೀಪರ್
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬಹುಮಾನದ ಮೊತ್ತವನ್ನು ಶೇ 53ರಷ್ಟು ಹೆಚ್ಚಿಸಿದೆ. ಪಂದ್ಯಾವಳಿಯಲ್ಲಿ ವಿಜೇತ ತಂಡವು 2.24 ಮಿಲಿಯನ್ ಡಾಲರ್ ನಗದು ಬಹುಮಾನ ಪಡೆಯಲಿದೆ. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಹೇಳೋದಾದ್ರೆ ಸುಮಾರು 19.45 ಕೋಟಿ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ. ರನ್ನರ್ ಅಪ್ ಆದ ತಂಡವು ಅರ್ಧದಷ್ಟು ಮೊತ್ತವನ್ನು ಅಂದರೆ 9.72 ಕೋಟಿ ರೂಪಾಯಿಯನ್ನು ಪಡೆಯಲಿದೆ. ಹಾಗೇ ಸೆಮಿಫೈನಲ್ ಪಂದ್ಯದಲ್ಲಿ ಸೋತ ತಂಡವು 4.86 ಕೋಟಿ ರೂಪಾಯಿಗಳನ್ನು ಪಡೆಯಲಿದೆ. ಸದ್ಯ ಒಟ್ಟು ಬಹುಮಾನದ ಮೊತ್ತವನ್ನು 59,94 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಬಹುಮಾನದ ಮೊತ್ತವನ್ನು ಏರಿಕೆ ಮಾಡಿರುವುದು ಕ್ರಿಕೆಟ್ ಅನ್ನು ಉತ್ತೇಜಿಸಲು ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ.
ಅಷ್ಟೇ ಅಲ್ದೇ ಲೀಗ್ ಹಂತದ ಪಂದ್ಯದಲ್ಲಿ ಗೆಲ್ಲುವ ಪ್ರತೀ ತಂಡಕ್ಕೆ 30 ಲಕ್ಷ ರೂಪಾಯಿ ನೀಡಲಾಗುತ್ತೆ. ಐದು ಅಥವಾ ಆರನೇ ಸ್ಥಾನದಲ್ಲಿರುವ ತಂಡಗಳು ತಲಾ 3 ಕೋಟಿ ರೂಪಾಯಿ ಪಡೆಯಲಿವೆ. ಹಾಗೇ ಏಳು ಮತ್ತು ಎಂಟನೇ ಸ್ಥಾನದಲ್ಲಿರುವ ತಂಡಗಳು 1.2 ಕೋಟಿ ರೂಪಾಯಿಯನ್ನು ಗಳಿಸುತ್ತವೆ. ಇದಲ್ಲದೆ, ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಎಂಟು ತಂಡಗಳು 1.08 ಕೋಟಿ ರೂ. ಪಡೆಯುತ್ತವೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಹುಮಾನದ ಮೊತ್ತ ಅನೌನ್ಸ್ ಆದ್ಮೇಲೆ ಕೆಲವ್ರು ಇದು ನಮ್ಮ ಭಾರತದಲ್ಲಿ ಐಪಿಎಲ್ ನ ಕೆಲ ಆಟಗಾರರು ಪಡೆಯೋ ಸ್ಯಾಲರಿಗಿಂತ ಕಡಿಮೆ ಇದೆ ಅಂತಿದ್ದಾರೆ. ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಅವರ ಸಂಬಳಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೂರನೇ ಐಪಿಎಲ್ ಟ್ರೋಫಿಗೆ ಮುನ್ನಡೆಸಿದ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ₹26.75 ಕೋಟಿಗೆ ಖರೀದಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಭ್ ಪಂತ್ ಅವರನ್ನು ₹27 ಕೋಟಿಗೆ ಖರೀದಿಸಿದ್ದು, ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತಿ ಹೆಚ್ಚು ಖರೀದಿಯಾದ ಆಟಗಾರರಾಗಿದ್ದಾರೆ. ಹಾಗೇ ವೆಂಕಟೇಶ್ ಅಯ್ಯರ್ ಅವರನ್ನು ಮರಳಿ ಖರೀದಿಸಲು ಕೆಕೆಆರ್ ₹23.75 ಕೋಟಿ ಖರ್ಚು ಮಾಡಿತು. ಅಲ್ದೇ ಸಾಕಷ್ಟು ಪ್ಲೇಯರ್ಸ್ 20ಕೋಟಿಗೂ ಹೆಚ್ಚು ಹಣವನ್ನ ಪಡೆಯುತ್ತಿದ್ದಾರೆ.