IPLನಲ್ಲಿ ಶ್ರೇಯಸ್ ಅಯ್ಯರ್ ಹಿಸ್ಟರಿ – 3 ಟೀಂ ನಾಯಕ.. 3 ಸಲ ಪ್ಲೇ ಆಫ್
DC, KKR, ಪಂಜಾಬ್‌ನಲ್ಲೂ ಸಕ್ಸಸ್

ಐಪಿಎಲ್‌ನಲ್ಲಿ ಸಕ್ಸಸ್ ಫುಲ್ ಕ್ಯಾಪ್ಟನ್ಸ್ ಎಂದಾಕ್ಷಣ ಕಣ್ಮುಂದೆ ಬರೋದು ಮಹೇಂದ್ರ ಸಿಂಗ್ ಧೋನಿ, ಹಿಟ್ಮ್ಯಾನ್ ರೋಹಿತ್ ಶರ್ಮಾ. ಬರೋಬ್ಬರಿ 5 ಬಾರಿ ಟ್ರೋಫಿ ಗೆದ್ದಿರುವ ಸಾಧನೆ ಮಾಡಿರುವ ಇವರು, ಐಪಿಎಲ್ನ ಲೆಜೆಂಡರಿ ಕ್ಯಾಪ್ಟನ್ಗಳು ಅಂತಾನೇ ಫೇಮಸ್. ಆದ್ರೀಗ ಇವರನ್ನೇ ಮೀರಿಸುವ ನಾಯಕನಾಗುವತ್ತ ಹೆಜ್ಜೆ ಹಾಕಿದ್ದಾರೆ.. ಅದು ಯಾರ ಅಂದ್ರೆ ಶ್ರೇಯಸ್ ಅಯ್ಯರ್. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರು ತಂಡಗಳನ್ನು ಪ್ಲೇಆಫ್ಗೇರಿಸಿದ ಮೊದಲ ನಾಯಕ ಎಂಬ ದಾಖಲೆಯೊಂದು ಶ್ರೇಯಸ್ ಅಯ್ಯರ್ ಪಾಲಾಗಿದೆ. ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಈವರೆಗೆ ಮೂರು ತಂಡಗಳನ್ನು ಮುನ್ನಡೆಸಿದ್ದಾರೆ. ಈ ಮೂರು ತಂಡಗಳು ಕೂಡ ಪ್ಲೇಆಫ್ಗೆ ಪ್ರವೇಶಿಸಿದೆ ಎಂಬುದೇ ವಿಶೇಷ. 2019 ಮತ್ತು 2020 ರಲ್ಲಿ ಶ್ರೇಯಸ್ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಡೆಲ್ಲಿ ಪಡೆ ಪ್ಲೇಆಫ್ಗೇರಿತ್ತು. ಅದರಲ್ಲೂ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್ಗೇರಿಸುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು. 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್, ಕೆಕೆಆರ್ ಪಡೆಗೆ 10 ವರ್ಷಗಳ ಬಳಿಕ ಟ್ರೋಫಿ ಗೆದ್ದು ಕೊಡುವಲ್ಲಿ ಯಶಸ್ವಿಯಾದರು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ 2ನೇ ಕ್ಯಾಪ್ಟನ್ ಎನಿಸಿಕೊಂಡರು. ಇದೀಗ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ಚೊಚ್ಚಲ ಸೀಸನ್ನಲ್ಲೇ ಪಂಜಾಬ್ ಪಡೆಯನ್ನು ಪ್ಲೇಆಫ್ಗೆ ತಲುಪಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳನ್ನು ಪ್ಲೇಆಫ್ಗೇರಿಸಿದ ಏಕೈಕ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ.
ಐಪಿಎಲ್ ನಾಯಕನಾಗಿ ಶ್ರೇಯಸ್ ಅಯ್ಯರ್ ಮ್ಯಾಜಿಕ್
ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್, ಈ ಸೀಸನ್ನಲ್ಲಿ ಪಂಜಾಬ್ ಚುಕ್ಕಾಣಿ ಹಿಡಿದಿದ್ದಾರೆ. ಶ್ರೇಯಸ್ ಅಯ್ಯರ್, ಪಂಜಾಬ್ ನಾಯಕನಾದ ಬೆನ್ನಲ್ಲೇ ಈ ಸೀಸನ್ನಲ್ಲಿ ಪಂಜಾಬ್ ಲಕ್ ಬದಲಾಗುತ್ತೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ. ತನ್ನ ಆಟದ ಮೂಲಕ ಆ ನಂಬಿಕೆ ಉಳಿಸಿಕೊಂಡಿದ್ದಾರೆ ಶ್ರೇಯಸ್ ಅಯ್ಯರ್. ಕ್ರೀಸ್ನಲ್ಲಿ ಬ್ಯಾಟ್ ಹಿಡಿದು ಹೆಚ್ಚು ಸದ್ದು ಮಾಡಿದ ಶ್ರೇಯಸ್ ಅಯ್ಯರ್, ನಾಯಕನಾಗಿ ತಾನೇನು ಅನ್ನೋದನ್ನು ಫ್ರೂವ್ ಮಾಡಿದ್ದಾರೆ. ಹಿಂದೆಂದೂ ಕಾಣದ ಸಕ್ಸಸ್ನ ಪಂಜಾಬ್ ತಂಡಕ್ಕೆ ನೀಡಿದ್ದಾರೆ. ಈ ಮೂಲಕ ಪಂಜಾಬ್ ಫ್ರಾಂಚೈಸಿಯ ನಂಬಿಕೆ ಮಾತ್ರವೇ ಉಳಿಸಿಕೊಳ್ಳಲಿಲ್ಲ. ತಾನೋರ್ವ ಬೆಸ್ಟ್ ಕ್ಯಾಪ್ಟನ್ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಜೊತೆಗೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ್ದಾರೆ.
ಎಲ್ಲಾ ನಾಯಕರಿಗೂ ಸೆಡ್ಡು ಹೊಡೆದ ಶ್ರೇಯಸ್
ಐಪಿಎಲ್ನ ದಿಗ್ಗಜ ನಾಯಕರು ಎಂದಾಕ್ಷಣ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್ ನೆನಪಾಗ್ತಾರೆ. ಯಾಕಂದ್ರೆ ಹೆಚ್ಚು ಟ್ರೋಫಿ ಗೆದ್ದಿದ್ದಾರೆ. ಈ ಲೆಜೆಂಡರಿ ನಾಯಕರನ್ನೇ ಶ್ರೇಯಸ್ ಅಯ್ಯರ್ ನಾಯಕತ್ವದ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಒಂದು ಐಪಿಎಲ್ ಟ್ರೋಫಿಯನ್ನೂ ಗೆದ್ದಿರೋ ಶ್ರೇಯಸ್, ವಿನ್ನಿಂಗ್ ಪರ್ಸಂಟೇಜ್ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಐಪಿಎಲ್ ನಾಯಕನಾಗಿ 82 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಶ್ರೇಯಸ್ ಅಯ್ಯರ್, 45 ಪಂದ್ಯಗಳಲ್ಲಿ ಗೆದ್ದು ಬೀಗಿದ್ದಾರೆ. 32 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 59.4ರ ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ದಾರೆ. ಧೋನಿ 233 ಪಂದ್ಯಗಳಿಂದ 135 ಮ್ಯಾಚ್ ಗೆದ್ದು, 79 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದ್ದಾರೆ. 58.44ರಷ್ಟು ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ದಾರೆ. 158 ಪಂದ್ಯಗಳ ಪೈಕಿ 87ರಲ್ಲಿ ಗೆಲುವು, 67ರಲ್ಲಿ ಸೋಲು ಕಂಡಿರುವ ರೋಹಿತ್, 56.32ರ ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ರೆ. ಹಾರ್ದಿಕ್ 56 ಪಂದ್ಯಗಳ ಪೈಕಿ 33ರಲ್ಲಿ ಗೆಲುವು, 23 ಪಂದ್ಯದಲ್ಲಿ ಸೋಲುಂಡಿದ್ದಾರೆ. 58.9ರಷ್ಟು ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ದಾರೆ.
ಪ್ರತಿ ಅವಕಾಶದಲ್ಲೂ ಶ್ರೇಯಸ್ ಮಿಂಚು..!
2018ರ ಐಪಿಎಲ್ನ ಮಿಡ್ ವೇನಲ್ಲಿ ಡೆಲ್ಲಿ ತಂಡದ ನಾಯಕತ್ವದ ಚುಕ್ಕಾಣಿ ಹಿಡಿದ ಶ್ರೇಯಸ್ ಅಯ್ಯರ್, 2020ರ ಐಪಿಎಲ್‌ನಲ್ಲಿ ಯುವ ಆಟಗಾರರನ್ನೇ ಒಳಗೊಂಡ ತಂಡವನ್ನ ಫೈನಲ್ಗೆ ಕೊಂಡೊಯ್ದಿದ್ರು. ಡೆಲ್ಲಿ ನಾಯಕನಾಗಿ ದಿಗ್ಗಜ ಆಟಗಾರರೇ ಮಾಡದ ಸಾಧನೆ ಮಾಡಿದ್ರು. ಆದ್ರೆ, 2021ರಲ್ಲಿ ಇಂಜುರಿಯಿಂದ ಸೀಸನ್ ಅರ್ಧದಲ್ಲೇ ಹೊರಬಿದ್ದ ಶ್ರೇಯಸ್ಗೆ ಮತ್ತೆ ನಾಯಕತ್ವದ ಪಟ್ಟ ಸಿಗಲಿಲ್ಲ. ಬಳಿಕ 2022ರಲ್ಲಿ ಕೆಕೆಆರ್ ಸೇರಿದ ಅಯ್ಯರ್, 2024ರಲ್ಲಿ ಕೊಲ್ಕತ್ತಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಆದ್ರೆ, ಆ ಕ್ರೆಡಿಟ್ ಕಂಪ್ಲೀಟ್ ಗಂಭೀರ್ ಪಾಲಾಗಿತ್ತು. ಇದೀಗ, ಅದೇ ಶ್ರೇಯಸ್ ಅಯ್ಯರ್, ಪಂಜಾಬ್ ನಾಯಕನಾಗಿ ಪ್ರಸಕ್ತ ಸೀಸನ್ನಲ್ಲಿ ಟ್ರೋಫಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪಂಜಾಬ್ ಪಡೆಯಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಕನಸು ಹುಟ್ಟು ಹಾಕಿದ್ದಾರೆ. ಈ ಸಲ ಪಂಜಾಬ್‌ಗೆ ಕಪ್ ಗೆಲ್ಲಿಸಿಕೊಟ್ರೆ, ದೊಡ್ಡ ಸಕ್ಸಸ್ ಕಾಣೋದು ಪಕ್ಕಾ.