ಶ್ರದ್ಧಾ ಹತ್ಯೆ ಪ್ರಕರಣ- ಅಫ್ತಾಬ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳಾವುವು?

ಶ್ರದ್ಧಾ ಹತ್ಯೆ ಪ್ರಕರಣ- ಅಫ್ತಾಬ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳಾವುವು?

ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ನನ್ನು ಪೊಲೀಸರು ಈಗಾಗಲೇ ಬಂಧಿಸಿ, ತನಿಖೆಯನ್ನು ಆರಂಭಿಸಿದ್ದಾರೆ. ಆದರೆ ಈ ಪ್ರಕರಣವನ್ನು  ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆತ ತುಂಡು ಮಾಡಿ ಬಿಸಾಡಿರುವ ಶ್ರದ್ಧಾಳ ದೇಹದ 35 ಭಾಗಗಳ ಪೈಕಿ ಕೆಲವು ಮಾತ್ರ ಪತ್ತೆಯಾಗಿವೆ. ಆಕೆಯ ತಲೆಬುರುಡೆ ಸಿಗದೆ ಈ ಪ್ರಕರಣದ ತನಿಖೆ ಮುಂದುವರೆಯುವುದು ಅಸಾಧ್ಯವಾಗಿರುವುದರಿಂದ ಅಫ್ತಾಬ್ ವಿರುದ್ಧದ ಪ್ರಬಲ ಸಾಕ್ಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಫ್ತಾಬ್​ನಿಗೆ ಕೊಲೆಗಾರ ಎಂದು ಶಿಕ್ಷೆ ನೀಡಬೇಕಾದರೆ ಶ್ರದ್ಧಾಳ ತಲೆಬುರುಡೆ, ಆಕೆಯ ಮೊಬೈಲ್, ಆಕೆಯನ್ನು ಕೊಂದ ಆಯುಧ ಸಿಗಲೇಬೇಕಾದ ಅನಿವಾರ್ಯತೆಯಿದೆ. ಹಾಗಾದ್ರೆ, ಪೊಲೀಸರಿಗೆ ಅಫ್ತಾಬ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶ್ರದ್ದಾ ಹತ್ಯೆ ಪ್ರಕರಣ- ಲವ್ ಜಿಹಾದ್ ಬಣ್ಣ?

ಅಫ್ತಾಬ್ ಶ್ರದ್ಧಾಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ  ಎಸೆದಿದ್ದು, ತನಿಖೆ ವೇಳೆ ಕೇವಲ 10-13 ಮೂಳೆಗಳು ಸಿಕ್ಕಿವೆ. ಆದರೆ, ಆಕೆಯ ತಲೆ ಇನ್ನೂ ಪತ್ತೆಯಾಗಿಲ್ಲ. ಕಾಡಿನಲ್ಲಿ ಸಿಕ್ಕಿರುವ ಮೂಳೆಗಳು ಮನುಷ್ಯರದ್ದೇ ಎನ್ನಲಾಗಿದ್ದು, ಈ ಕುರಿತು ನಿಖರತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಛತ್ತರ್​ಪುರ್ ಪ್ರದೇಶದಲ್ಲಿ ಅಫ್ತಾಬ್- ಶ್ರದ್ಧಾ ವಾಸವಾಗಿದ್ದ ಫ್ಲಾಟ್​ನಲ್ಲಿ ಪೊಲೀಸರು ತನಿಖೆ ನಡೆಸುತ್ತಿರುವ ವೇಳೆ ಅಡುಗೆ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಅದರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.  ಇಷ್ಟೇ ಅಲ್ಲದೇ ಮನೆಯಲ್ಲಿ ಸಿಕ್ಕ ರಕ್ತ ಮತ್ತು ಕಾಡಿನಲ್ಲಿ ಸಿಕ್ಕ ದೇಹದ ಭಾಗಗಳು ಯಾರದೆಂದು ಪತ್ತೆ ಮಾಡಲು ಶ್ರದ್ಧಾಳ ತಂದೆಯ ಡಿಎನ್ ಎ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿಗಳು ಲಭ್ಯವಾಗಿದೆ.

ಅಫ್ತಾಬ್‌ನ ಫ್ಲಾಟ್‌ನಲ್ಲಿ ನೀರಿನ ಬಿಲ್ ದುಪ್ಪಟ್ಟು ಪ್ರಮಾಣದಲ್ಲಿ ಬಂದಿರುವುದು ಪೊಲೀಸರಲ್ಲಿ ಅನುಮಾನ ಹುಟ್ಟಿಸಿದೆ. ಬಹುಶಃ ಶ್ರದ್ಧಾಳನ್ನು ಕೊಂದ ಬಳಿಕ ಮನೆಯನ್ನು ಕ್ಲೀನ್ ಮಾಡಲು ಅಫ್ತಾಬ್ ಅಪಾರ ಪ್ರಮಾಣದ ನೀರನ್ನು ಬಳಸಿದ್ದಾನೆ ಎಂದು ಊಹಿಸಲಾಗಿದೆ.

ತನಿಖಾಧಿಕಾರಿಗಳು ಅಫ್ತಾಬ್ ವಾಸವಾಗಿದ್ದ ಫ್ಲಾಟ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದಿದ್ದಾರೆ. ಹೆಚ್ಚಿನ ಸಿಸಿಟಿವಿಗಳು 15 ದಿನಗಳ ದಾಖಲೆಗಳನ್ನು ಸೆರೆಹಿಡಿಯುವುದರಿಂದ 6 ತಿಂಗಳ ಹಿಂದಿನ ದೃಶ್ಯಾವಳಿಗಳನ್ನು ಕಲೆಹಾಕುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಅಲ್ಲದೇ ಫ್ಲಾಟ್‌ನಲ್ಲಿ ಶ್ರದ್ಧಾ ಅವರ ವಸ್ತುಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಆದರೆ ಅದನ್ನು ಕುಟುಂಬದವರು ಇನ್ನೂ ಗುರುತಿಸಿಲ್ಲ.

ದೆಹಲಿ ಪೊಲೀಸರು ಅಫ್ತಾಬ್‌ನ ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆತ ಸತ್ಯವನ್ನು ಹೇಳುತ್ತಿದ್ದಾನೆಯೇ ಅಥವಾ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆಯೇ ಎಂಬುದನ್ನು ಸಾಬೀತುಪಡಿಸಲು ಈ ಪರೀಕ್ಷೆಗೆ ಅವಕಾಶ ಕೇಳಲಾಗಿದೆ.

ಶ್ರದ್ಧಾಳ ದೇಹವನ್ನು ತುಂಡರಿಸುವ ವೇಳೆ ಅಫ್ತಾಬ್​ನ ಕೈಗೆ ಚಾಕುವಿನಿಂದ ಗಾಯಗಳಾಗಿತ್ತು. ಆ ಗಾಯದ ಚಿಕಿತ್ಸೆಗಾಗಿ ಅಫ್ತಾಬ್ ಮೇ ತಿಂಗಳಲ್ಲಿ ವೈದ್ಯರನ್ನು ಭೇಟಿ ಮಾಡಿದ್ದ. ವೈದ್ಯರು ಅಫ್ತಾಬ್ ಬಹಳ ಚಡಪಡಿಸುತ್ತಿದ್ದ, ಹಣ್ಣುಗಳನ್ನು ಕತ್ತರಿಸುವಾಗ ಕೈಗೆ ಗಾಯವಾಗಿತ್ತು ಎಂದು ಹೇಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಶ್ರದ್ಧಾಳನ್ನು ಕೊಂದ ನಂತರ, ಅಫ್ತಾಬ್ ಆಕೆಯ ಬ್ಯಾಂಕ್ ಖಾತೆಯ ಆ್ಯಪ್ ಅನ್ನು ಆಪರೇಟ್ ಮಾಡಿ 54,000 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಆ ಹಣದಲ್ಲಿ ಅಫ್ತಾಬ್ ದೊಡ್ಡ ಫ್ರಿಡ್ಜ್ ಖರೀದಿಸಿದ್ದ ಎನ್ನಲಾಗಿದೆ. ಆ ಫ್ರಿಡ್ಜ್​ನ ಬಿಲ್ ಕೂಡ ಪತ್ತೆಯಾಗಿದೆ.

suddiyaana