ಶ್ರದ್ದಾ ಹತ್ಯೆ ಪ್ರಕರಣ- ಲವ್ ಜಿಹಾದ್ ಬಣ್ಣ?

ಶ್ರದ್ದಾ ಹತ್ಯೆ ಪ್ರಕರಣ- ಲವ್ ಜಿಹಾದ್ ಬಣ್ಣ?

ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣ ದೇಶದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ತನ್ನ ಪ್ರೇಯಸಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಕ್ರೂರವಾಗಿ ಕೊಲೆಗೈದಿದ್ದಾನೆ. ಇದೀಗ ಶ್ರದ್ಧಾ ಮತ್ತು ಅಫ್ತಾಬ್ ಹೆಸರು ಕೇಳುತ್ತಿದ್ದಂತೆ ಈ ಪ್ರಕರಣಕ್ಕೆ ಲವ್ ಜಿಹಾದ್ ಬಣ್ಣ ಬಳಿಯಲಾಗುತ್ತಿದೆ.

ಇದನ್ನೂ ಓದಿ: ಶ್ರದ್ಧಾ ಹತ್ಯೆ – ಒಂದು ವಾರದ ಮುನ್ನವೇ ಅವಳನ್ನು ಕೊಲೆ ಮಾಡಬೇಕಿತ್ತು, ಆದ್ರೆ ಮಿಸ್ ಆಯ್ತು!

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅನೇಕರು ಲವ್ ಜಿಹಾದ್ ಕೋನದಲ್ಲೇ ಈ ತನಿಖೆ ನಡೆಸಬೇಕೆಂದು ಕೂಗು ಕೇಳಿಬರುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಇದನ್ನು ಲವ್ ಜಿಹಾದ್ ಎಂದು ಬಿಂಬಿಸಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಪೊಲೀಸರು ನೀಡಿಲ್ಲ. ಯಾವುದೇ ಮಾಧ್ಯಮಗಳು ಈ ರೀತಿ ವರದಿ ಮಾಡಿಲ್ಲ.

ಅಫ್ತಾಬ್ ಮುಸ್ಲಿಂ ಅಲ್ಲ, ಪಾರ್ಸಿ ಧರ್ಮಕ್ಕೆ ಸೇರಿದವನು ಎನ್ನುವ ಒಂದಷ್ಟು ಪೋಸ್ಟ್ ಗಳು ಹರಿದಾಡಿವೆ. ಆದರೆ ಆತನ ಸಾಮಾಜಿಕ ಜಾಲತಾಣದ ಪೋಸ್ಟ್ ಗಳ ಆಧಾರದಲ್ಲಿ ಆತ ಮುಸ್ಲಿಂ ಎಂಬ ವಾದವೇ ಜೋರಾಗಿದೆ. ಕೆಲ ಮಾಧ್ಯಮಗಳು ಎಫ್ ಐ ಆರ್ ಪ್ರತಿಯನ್ನು ಪ್ರಕಟಿಸಿದ್ದು, ಅದರಲ್ಲಿ ಆತ ಹಾಗೂ ಆತನ ಹೆತ್ತವರು ಮುಸ್ಲಿಂ ಎಂಬುದು ಉಲ್ಲೇಖವಾಗಿದೆ ಎಂದು ವಾದಿಸುತ್ತಿದ್ದಾರೆ.

ಮೂಲತಃ ಮುಂಬೈ ನಿವಾಸಿಯಾಗಿರುವ ಅಫ್ತಾಬ್ ದೆಹಲಿಗೆ ಸ್ಥಳಾಂತರಗೊಂಡು 6 ತಿಂಗಳಷ್ಟೇ ಕಳೆದಿದೆ. ಅದಕ್ಕೂ ಮೊದಲಿನ ಆತನ ಪೂರ್ತಿ ಇತಿಹಾಸ ಮುಂಬೈನಲ್ಲಿದೆ. ಹಾಗಾಗಿ ದೆಹಲಿ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸಲು ಮುಂಬೈಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಲ್ಲಿನ ತನಿಖೆ ಬಳಿಕವೇ ಲವ್ ಜಿಹಾದ್ ಆರೋಪಕ್ಕೆ ಸ್ಪಷ್ಟನೆ ಸಿಗಲಿದೆ.

ಅಫ್ತಾಬ್ ಪ್ರಸ್ತುತ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಯಾವುದೇ ಕಂಪನಿಯಲ್ಲಿ ಸುಧೀರ್ಘವಾಗಿ ಕೆಲಸ ಮಾಡಿಲ್ಲ ಎಂದು ತಿಳಿದು ಬಂದಿದೆ. ಆತನ ಜೊತೆ ಸಂಬಂಧ ಹೊಂದಿದ್ದ ಇತರ ಹುಡುಗಿಯರ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಅಫ್ತಾಬ್,  ಹಿಂದೂ ಯುವತಿಯರೊಂದಿಗೆ ಮಾತ್ರ ಸಂಬಂಧ ಹೊಂದಿದ್ದನಾ ಅಥವಾ ಬೇರೆ ಧರ್ಮದ ಹುಡುಗಿಯರ ಜೊತೆಗೂ ಸಂಬಂಧಗಳನ್ನು ಹೊಂದಿದ್ದನಾ ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ.

ಈತನಿಂದ ಮೋಸ ಹೋದ 4 ಹಿಂದೂ ಯುವತಿಯರ ಹೆಸರು ಹಾಗೂ ಆತನ ಜೊತೆಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಆದರೆ ಇವರೆಲ್ಲಾ ಜೀವಂತವಾಗಿದ್ದಾರೆಯೆ ಎಂಬುದನ್ನು ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ತಮ್ಮ ಮಗಳನ್ನು ವಿಕೃತವಾಗಿ ಕೊಂದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಶ್ರದ್ದಾ ವಾಲ್ಕರ್ ಅವರ ತಂದೆ ಒತ್ತಾಯಿಸಿದ್ದಾರೆ. ಅಲ್ಲದೇ ಈ ಕೃತ್ಯದ ಹಿಂದೆ ಲವ್ ಜಿಹಾದ್ ನಡೆದಿರುವ ಅನುಮಾನವಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಘಾಟ್ಕೋಪರ್ ಪ್ರದೇಶದಲ್ಲಿ ಬಿಜೆಪಿ ಶಾಸಕ ರಾಮ್ ಕದಮ್ ಹಾಗೂ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಅಫ್ತಾಬ್ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ ಈ ಕೊಲೆ ಪ್ರಕರಣವನ್ನು ಲವ್ ಜಿಹಾದ್ ಸಾಧ್ಯತೆಗಳಿರಬಹುದಾದ ಕೋನದಲ್ಲಿ ತನಿಖೆ ನಡೆಸಬೇಕು. ಈ ಕೃತ್ಯದ ಹಿಂದೆ ಯಾವುದಾದರೂ ಸಂಘಟನೆ ಅಥವಾ ಗುಂಪು ಇದೆಯೇ?, ಶತ್ರು ರಾಷ್ಟ್ರದ ಪಾತ್ರವಿದೆಯೇ? ಎಂಬುದನ್ನು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

suddiyaana