ಶ್ರದ್ದಾ ಹತ್ಯೆ ಪ್ರಕರಣ- ಮೇ 18ರ ರಾತ್ರಿ ನಡೆದಿದ್ದೇನು?

ಶ್ರದ್ದಾ ಹತ್ಯೆ ಪ್ರಕರಣ- ಮೇ 18ರ ರಾತ್ರಿ ನಡೆದಿದ್ದೇನು?

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಲಿವ್ ಇನ್ ಸಂಬಂಧದಲ್ಲಿದ್ದ ತನ್ನ ಪ್ರೇಯಸಿಯನ್ನು ಯಾರೂ ಕಲ್ಪಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಕ್ರೂರವಾಗಿ  ಆಕೆಯ ಪ್ರಿಯಕರ ಅಫ್ತಾಬ್‌ ಹತ್ಯೆಗೈದಿದ್ದಾನೆ. ಈ ಘಟನೆ ಸುಮಾರು 6 ತಿಂಗಳ ಹಿಂದೆ  ನಡೆದಿದ್ದು, ಇದೀಗ ಬಯಲಿಗೆ ಬಂದಿದೆ. ಪ್ರೀತಿಸಿದ ಹುಡುಗನಿಗಾಗಿ ತನ್ನ ತಂದೆ-ತಾಯಿಯನ್ನು ಬಿಟ್ಟು ಬಂದಿದ್ದ 28 ವರ್ಷದ ಶ್ರದ್ಧಾ ವಾಲ್ಕರ್ ಯಾರೂ ಊಹಿಸದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಹಾಗಾದರೆ ಮೇ 18ರ ರಾತ್ರಿ ನಡೆದಿದ್ದೇನು? ಯಾವ ಕಾರಣಕ್ಕೆ ಈ ಹತ್ಯೆ ನಡೆಯಿತು ಎಂಬುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ…

ಇದನ್ನೂ ಓದಿ: ಕೋಲಾರದಲ್ಲಿ ಕಣಕ್ಕಿಳಿಯುವ ಮೊದಲು ಸಿದ್ದರಾಮಯ್ಯಗೆ ಎಚ್ಚರಿಕೆ

ಮುಂಬೈನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶ್ರದ್ಧಾ ವಾಲ್ಕರ್ ಹಾಗೂ ಅಫ್ತಾಬ್ ಮುಂಬೈನಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು. ಅವರು 3 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಮನೆಯವರು ಅದಕ್ಕೆ ಒಪ್ಪದಿದ್ದಾಗ ಅವರಿಬ್ಬರೂ ದೆಹಲಿಗೆ ಬಂದು ಫ್ಲಾಟ್​ನಲ್ಲಿ ವಾಸವಾಗಿದ್ದರು. ಶ್ರದ್ಧಾಗೆ ತಮ್ಮ ಸಂಬಂಧಕ್ಕೊಂದು ಹೆಸರು ಬೇಕು,  ಹೀಗಾಗಿ, ತನ್ನನ್ನು ಮದುವೆಯಾಗೆಂದು ಶ್ರದ್ಧಾ, ಅಫ್ತಾಬ್ ಬಳಿ ಹಠ ಮಾಡುತ್ತಲೇ ಇದ್ದಳು. ಆದರೆ, ಆಕೆಯನ್ನು ಮದುವೆಯಾಗಲು ಅಫ್ತಾಬ್​ಗೆ ಒಪ್ಪಿಗೆ ಇರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ 18ರಂದು ಅಫ್ತಾಬ್,​ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ ಕ್ರೈಂ ಥ್ರಿಲ್ಲರ್‌ ನೋಡಿದ್ಧ ಅಫ್ತಾಬ್‌!

ಕೊಲೆ ಮಾಡಿದ ಬಳಿಕ ಏನು ಮಾಡುವುದೆಂದು ತೋಚದೆ ಮೊದಲು ಆ ಶವವನ್ನು ಬೆಡ್​ರೂಮಿನಲ್ಲಿಟ್ಟುಕೊಂಡು ಕುಳಿತಿದ್ದಾನೆ. ನಂತರ ಆ ಶವವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಬೇಕೆಂಬ ಯೋಚನೆ ಬಂದಿತ್ತು. ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್​ ಡೆಕ್ಸ್ಟರ್ ಸೇರಿದಂತೆ ಕೆಲ ಕ್ರೈಂ ಸಿನಿಮಾಗಳನ್ನು ನೋಡಿದ್ದನಂತೆ. ನಂತರ ​ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಬಿಸಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದಾನೆ.

ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಹತ್ಯೆಗೈದು ಆಕೆಯ ಶವದ ಜೊತೆಗೆ ಅದೇ ರೂಮಿನಲ್ಲಿ ಒಂದು ದಿನ ಕಳೆದಿದ್ದ. ಮಾರನೇ ದಿನ ಹೊಸ ಫ್ರಿಡ್ಜ್ ಖರೀದಿಸಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಅದರಲ್ಲಿ ಇಟ್ಟಿದ್ದಾನೆ. ಇದರ ಜೊತೆಗೆ ಈತ ಕೊಂಚವೂ ಭಯವಿಲ್ಲದೆ ಮತ್ತೊಬ್ಬ ಯುವತಿಯ ಜೊತೆ ತನ್ನ ರೂಮಿನಲ್ಲೇ ಸರಸ ಸಲ್ಲಾಪವಾಡುತ್ತಿದ್ದ. ಇದರ ನಡುವೆ ಅಫ್ತಾಬ್‌ನ ಮತ್ತೊಂದು ಕ್ರೌರ್ಯ ಅನಾವರಣಗೊಂಡಿದೆ.

ಶ್ರದ್ಧಾ ಶವದ ಮುಖ ಗಂಟೆಗಟ್ಟಲೆ ನೋಡುತ್ತಿದ್ದ!

ಅಫ್ತಾಬ್ ಪ್ರತಿದಿನ ಫ್ರಿಡ್ಜ್ ತೆರೆದು ಗಂಟೆಗಟ್ಟಲೆ ಶ್ರದ್ಧಾ ಮುಖವನ್ನೇ ದಿಟ್ಟಿಸುತ್ತಿದ್ದನಂತೆ. ದೇಹವನ್ನು ತುಂಡರಿಸಿದ ಬಳಿಕ ಪ್ರತಿದಿನ ಶ್ರದ್ಧಾಳ ಶವದ ಮುಖ ನೋಡುತ್ತಿದ್ದನಂತೆ. ಅಷ್ಟೇ ಅಲ್ಲದೆ ಶ್ರದ್ಧಾಳ ಗುರುತು ಅಳಿಸಲು ದೇಹದ ಭಾಗಗಳನ್ನು ಸುಟ್ಟಿದ್ದಾನೆ. ಮೆಹ್ರೌಲಿ ಮಾರುಕಟ್ಟೆಯಿಂದ ಬ್ಲೋವರ್ ಖರೀದಿಸಿ ಕೈ ಬೆರಳು ಸೇರಿದಂತೆ ಹಲವು ಭಾಗಗಳನ್ನು ಬ್ಲೋವರ್ ನಿಂದ ಸುಟ್ಟು ಹಾಕಿದ್ದಾನೆ. ನಂತರ 18 ದಿನಗಳವರೆಗೆ ಪ್ರತಿ ರಾತ್ರಿ 12 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಿ, ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಆಕೆಯ ದೇಹದ ಒಂದೊಂದೇ ಭಾಗಗಳನ್ನು ಬಿಸಾಡಿ ಬರುತ್ತಿದ್ದ. ಇದರಿಂದಾಗಿ ಆ ಶವ ಯಾರದ್ದು ಎಂದು ಯಾರಿಗೂ ಗೊತ್ತಾಗುವುದಿಲ್ಲ ಎಂಬುದು ಅವನ ಪ್ಲಾನ್ ಆಗಿತ್ತು.

18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್​ನಲ್ಲಿ ಇಟ್ಟಿದ್ದರಿಂದ ಮತ್ತು ಮನೆಯಲ್ಲಿ ಸ್ವಲ್ಪ ರಕ್ತದ ವಾಸನೆ ಹಾಗೇ ಉಳಿದಿದ್ದರಿಂದ ಮನೆಯ ವಾಸನೆಯನ್ನು ಕಡಿಮೆ ಮಾಡಲು ರೂಂ ಫ್ರೆಷನರ್​ಗಳನ್ನು ತಂದಿದ್ದ. ಹಾಗೇ, ದಿನವೂ ಊದುಬತ್ತಿ ಹೊತ್ತಿಸಿ ಇಡುತ್ತಿದ್ದ. ತಾನು ಮಾಡಿದ ಕೊಲೆಯ ಕುರುಹು ಅಳಿಸುವುದಕ್ಕಾಗಿ ಅಫ್ತಾಬ್ ಗೂಗಲ್ ಮಾಡಿ ರಕ್ತವನ್ನು ತೊಳೆಯಲು ರಾಸಾಯನಿಕಗಳನ್ನು ಹುಡುಕಿ ಖರೀದಿಸಿದ್ದಾನೆ. ಅಲ್ಲದೇ ಆಕೆ ಸತ್ತಿಲ್ಲ, ಬದುಕಿದ್ದಾಳೆ ಎಂಬುದನ್ನು ಹೊರ ಜಗತ್ತಿಗೆ ತೋರಿಸುವುದಕ್ಕಾಗಿ ಆಕೆಯ ಇನ್‌ಸ್ಟಾ ಗ್ರಾಂನಲ್ಲಿ ಈತ ಸಕ್ರಿಯನಾಗಿದ್ದ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಶ್ರದ್ಧಾ ಹತ್ಯೆ  ಪ್ರಕರಣದ ಬಗ್ಗೆ ಒಂದೊಂದೇ ಮಾಹಿತಿ ಹೊರಬರುತ್ತಿದ್ದಂತೆ ಇಂಥಾ ಘೋರ ಕೃತ್ಯವೆಸಗಿದ ಅಫ್ತಾಬ್‌ಗೆ ಕಠಿಣ ಶಿಕ್ಷೆಯಾಗಬೇಕೆಂದು ದೇಶದಾದ್ಯಂತ ಜನರು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಈ ಪ್ರಕರಣ ಸಂಬಂಧ ಕೊಲೆಗಾರ ಅಫ್ತಾಬ್ ಅಮಿನ್ ಪೂನವಾಲಾನ ಹಿಂದೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು, ಆರೋಪಿಯ ಕ್ರೌರ್ಯದ ಬಗ್ಗೆ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಆರೋಪಿಗೆ ಮರಣದಂಡನೆ ವಿಧಿಸಿ ಎಂದು ಶ್ರದ್ಧಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.

suddiyaana