ಶ್ರದ್ಧಾ ಹತ್ಯೆ ಪ್ರಕರಣ – ಮಂಪರು ಪರೀಕ್ಷೆ ನಿರ್ಧಾರದ ಬಳಿಕ ಹೇಳಿಕೆ ಬದಲಾಯಿಸಿದ ಅಫ್ತಾಬ್!
ನಶೆಯಲ್ಲಿ ತೇಲಾಡುತ್ತಿದ್ದೆ- 35 ಭಾಗವಲ್ಲ ಬದಲಿಗೆ 16 ಪೀಸ್ ಮಾಡಿದ್ದೆ

ಶ್ರದ್ಧಾ ಹತ್ಯೆ ಪ್ರಕರಣ – ಮಂಪರು ಪರೀಕ್ಷೆ ನಿರ್ಧಾರದ ಬಳಿಕ ಹೇಳಿಕೆ ಬದಲಾಯಿಸಿದ ಅಫ್ತಾಬ್!ನಶೆಯಲ್ಲಿ ತೇಲಾಡುತ್ತಿದ್ದೆ- 35 ಭಾಗವಲ್ಲ ಬದಲಿಗೆ 16 ಪೀಸ್ ಮಾಡಿದ್ದೆ

ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರ ಬರುತ್ತಿದೆ. ಪ್ರಕರಣ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮುಂದೆ ಅಫ್ತಾಬ್ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾನೆ. ತನಿಖೆ ವೇಳೆ ಅಫ್ತಾಬ್ ಡ್ರಗ್ಸ್‌ಗೆ ಸೇವಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿತ್ಯ ಗಾಂಜಾ ಸೇವಿಸುತ್ತಿದ್ದೆ, ನಶೆಯಲ್ಲಿ ತೇಲಾಡುತ್ತಿದ್ದೆ, ಗಾಂಜಾ ಸೇವನೆಯನ್ನು ಶ್ರದ್ಧಾ ವಿರೋಧಿಸಿದ್ದಳು, ಇದೇ ಕಾರಣಕ್ಕೆ ಶ್ರದ್ಧಾ ಜಗಳವಾಡುತ್ತಿದ್ದಳು ಎಂದು ತನಿಖೆ ವೇಳೆ ಅಫ್ತಾಬ್ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ- ಅಫ್ತಾಬ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳಾವುವು?

ಮುಂಬೈನಿಂದ ದೆಹಲಿಗೆ ಶಿಫ್ಟ್ ಆಗಿದ್ದರಿಂದ ಶ್ರದ್ಧಾ ಮತ್ತು ನನ್ನ ನಡುವೆ ಲಗೇಜ್ ತರುವ ವಿಚಾರಕ್ಕೆ ಮೇ 18 ರಂದು ಜಗಳವಾಗಿತ್ತು. ಮುಂಬೈನಲ್ಲಿ ಮನೆ ಬಳಕೆಯ ಲಗೇಜ್ ಇತ್ತು. ಅದನ್ನು ದೆಹಲಿಗೆ ತರುವ ಬಗ್ಗೆ ಇಬ್ಬರ ನಡುವೆ ಜಗಳವಾಗಿತ್ತು. ಇಬ್ಬರು ನಗದು ಹಣದ ಕೊರತೆ ಎದುರಿಸುತ್ತಿದ್ದರಿಂದ ಮುಂಬೈನಿಂದ ಲಗೇಜ್ ತರುವುದು ಯಾರು ಎಂದು ಜಗಳಮಾಡಿಕೊಂಡಿದ್ದೆವು ಕೊಲೆಯಾದ ದಿನ ತೀವ್ರ ಮಾತಿನ ಜಕಮಕಿ ನಡೆದಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

ಜಗಳ ನಡುವೆ ಆಗಾಗ ಮನೆಯಿಂದ ಹೊರಗೆ ಹೋಗಿ ಗಾಂಜಾ ಸೇವಿಸಿ ಮನೆಗೆ ವಾಪಸ್ ಆಗಿದ್ದೆ, ಈ ವೇಳೆ ಜಗಳ ಮುಂದುವರಿದು ನಶೆಯಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿದೆ. ಇದು ನಶೆಯಲ್ಲಿ ನಡೆದ ಘಟನೆಯಾಗಿದ್ದು, ಶ್ರದ್ಧಾ ಹತ್ಯೆ ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾನೆ.

ಇದೇ ವೇಳೆ ಅಫ್ತಾಬ್ ತನ್ನ ಹೇಳಿಕೆಯನ್ನು ಬದಲಿಸಿದ್ದು, ಶ್ರದ್ಧಾ ದೇಹವನ್ನು 35 ಭಾಗವಲ್ಲ ಬದಲಿಗೆ 16 ಭಾಗಗಳಾಗಿ ತುಂಡರಿಸಿ ಫ್ರಿಡ್ಜ್‌ನಲ್ಲಿ ತುಂಬಿದ್ದೆ. ಸೊಂಟದ ಕೆಳಭಾಗದಿಂದ ಕಾಲಿನವರೆಗೆ ಮೂರು ಭಾಗಗಳಾಗಿ ಮಾಡಿದರೆ, ಮೇಲಿನ ದೇಹ ಮತ್ತು ಒಳ ಭಾಗಗಳನ್ನು 13 ಭಾಗಗಳಾಗಿ ಕತ್ತರಿಸಿರುವುದಾಗಿ ಹೇಳಿದ್ದಾನೆ. ತಲೆಯನ್ನು ಗುರುತು ಸಿಗದ ಹಾಗೇ ಸುಟ್ಟು ಎಸೆದಿದ್ದು, ಅದನ್ನು ಕತ್ತರಿಸುವ ಪ್ರಯತ್ನ ಮಾಡಿಲ್ಲ ಎಂದು ಮಂಪರು ಪರೀಕ್ಷೆ ನಿರ್ಧಾರದ ಬಳಿಕ ತನ್ನ ಹೇಳಿಕೆಗಳನ್ನು ಬದಲಾಯಿಸಿದ್ದಾನೆ.

ಇದನ್ನೂ ಓದಿ: ಶ್ರದ್ಧಾ ಹತ್ಯೆ – ಒಂದು ವಾರದ ಮುನ್ನವೇ ಅವಳನ್ನು ಕೊಲೆ ಮಾಡಬೇಕಿತ್ತು, ಆದ್ರೆ ಮಿಸ್ ಆಯ್ತು!

ಶ್ರದ್ಧಾ ಸೋಶಿಯಲ್ ಮೀಡಿಯಾ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಹೊಸ ಮಾಹಿತಿ ತಿಳಿದು ಬಂದಿದೆ. ಶ್ರದ್ಧಾ ಅಪ್ಲೋಡ್ ಮಾಡಿದ ಹಳೆಯ ಫೋಟೋದಲ್ಲಿ ಮುಖದ ಮೇಲೆ ಗಾಯ ಪತ್ತೆಯಾಗಿದೆ. ಮುಖದ ಮೇಲೆ ಗಾಯ, ಊದಿಕೊಂಡ ಕಣ್ಣುಗಳು, ಮೂಗಿನ ಮೇಲೆಯೂ ಗಾಯದ ಗುರುತು ಹೊಂದಿರುವ ಫೋಟೋಗಳನ್ನು 2020ರಲ್ಲಿ ಶ್ರದ್ಧಾ ಅಪ್ಲೋಡ್ ಮಾಡಿದ್ದಾಳೆ. ಹೀಗಾಗಿ ಅಫ್ತಾಬ್ ಈ ಹಿಂದೆಯೂ ಶ್ರದ್ಧಾ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ನಾ ಎಂಬ ಅನುಮಾನ ಮೂಡಿದೆ.

ಶ್ರದ್ಧಾ ಮೃತ ದೇಹ ಪತ್ತೆ ಮಾಡುವ ನಿಟ್ಟಿನಲ್ಲಿ ದೆಹಲಿ ಪೊಲೀಸ್ ಮಹಾ ನಿರ್ದೇಶಕರು ಮೆಹ್ರೋಲಿ ಸುತ್ತಲಿನ 176 ಪೊಲೀಸ್ ಠಾಣೆಗಳಿಗೆ ನೋಟಿಸ್ ನೀಡಿದ್ದಾರೆ. ಮೇ 18 ರಿಂದ ಜುಲೈ ಅಂತ್ಯದ ಅವಧಿಯಲ್ಲಿ ದೆಹಲಿಯಲ್ಲಿ ಪತ್ತೆಯಾದ ಗುರುತು ಸಿಗದ ಹೆಣ್ಣು ದೇಹಗಳ ಮಾಹಿತಿಯನ್ನು ತಿಳಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಶ್ರದ್ಧಾಳ ಬಾಕಿ ದೇಹಕ್ಕಾಗಿ ಹುಡುಕಾಟ ತೀವ್ರವಾಗಿದೆ.

ಅಫ್ತಾಬ್ ವಿಚಾರಣೆ ವೇಳೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಹಿನ್ನೆಲೆ ಪೊಲೀಸರು ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಈಗಾಗಲೇ ಮಂಪರು ಪರೀಕ್ಷೆ ನಡೆಸಲು ನ್ಯಾಯಲಯ ಅನುಮತಿ ನೀಡಿದ್ದು, ಅಫ್ತಾಬ್ ಕೂಡಾ ಒಪ್ಪಿಗೆ ಸೂಚಿಸಿದ್ದಾನೆ. ತಜ್ಞರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲು ಪೊಲೀಸರು ತಯಾರಿ ಮಾಡಿಕೊಳುತ್ತಿದ್ದಾರೆ.

suddiyaana