ಸ್ವಕ್ಷೇತ್ರದಲ್ಲಿ ಲೀಡ್ ತಂದು ಕೊಡದಿದ್ದರೆ ಸಚಿವರು ರಾಜೀನಾಮೆ ಕೊಡಬೇಕಾ? – ಸಚಿವ ಶರಣಬಸಪ್ಪ ದರ್ಶನಾಪುರ ಸ್ಪೋಟಕ ಹೇಳಿಕೆ!
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸದೃಢವಾಗಿದ್ರೂ ಸಿಎಂ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಇದೀಗ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಮತ್ತೆ ಮುಖ್ಯಮಂತ್ರಿ ಕುರ್ಚಿ ಚರ್ಚೆ ಮುನ್ನಲೆಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇತ್ತೀಚೆಗಷ್ಟೇ ದೆಹಲಿಯಲ್ಲಿ ಎಲ್ಲವೂ ನಿರ್ಧಾರ ಆಗಿದೆ ಅಂತಾ ನೀಡಿರುವ ಹೇಳಿಕೆ ಭಾರೀ ಸಂಚಲನವನ್ನು ಉಂಟು ಮಾಡಿತ್ತು. ಈ ಬೆನ್ನಲ್ಲೇ ಸಚಿವ ಶರಣಬಸಪ್ಪ ದರ್ಶನಾಪುರ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸ್ವ ಕ್ಷೇತ್ರದಲ್ಲಿ ಲೀಡ್ ತಂದು ಕೊಡದಿದ್ದರೆ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಅಂತ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಮರೆಯಾಯ್ತು ಸ್ಯಾಂಡಲ್‌ವುಡ್‌ನ ಮತ್ತೊಂದು ರತ್ನ – ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ!
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಶರಣಬಸಪ್ಪ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೆ ಹೋದರೆ ಆ ಕುರ್ಚಿ(ಮಂತ್ರಿ) ಅಲ್ಲಿಗೆ ಬಿಡಬೇಕು. ನಾವೇ ಲೀಡ್ ಕೊಡದಿದ್ದರೆ ನಾವೇನು ಮುಖ ತೋರಿಸಬೇಕು, ನಿಜ ಹೇಳಬೇಕಂದ್ರೆ ನನಗೆ ಮಂತ್ರಿನೇ ಕೊಡಬಾರದಾಗಿತ್ತು. ಏಕೆಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ 20 ಸಾವಿರ ಬಿಜೆಪಿ ಲೀಡ್ ಆಗಿತ್ತು ಎಂದಿದ್ದಾರೆ. ಕೈ ನಾಯಕರ ಹೇಳಿಕೆಗಳು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಲೋಕಸಭೆ ಚುನಾವಣೆ ಬಳಿಕ ಸಚಿವರ ಕುರ್ಚಿಗೆ ಕಂಟಕ ಫಿಕ್ಸ್ ಎನ್ನಲಾಗಿದ್ದು, ಸ್ವಕ್ಷೇತ್ರದಲ್ಲಿ ಲೀಡ್ ಕೊಡದಿದ್ದರೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ ಎನ್ನುವ ಬಗ್ಗೆ ಚರ್ಚೆಗಳಾಗುತ್ತಿವೆ.
ನಿಮ್ಮ (ವಿಧಾನಸಭೆ) ಚುನಾವಣೆ ಮಾಡಿ ಗೆಲ್ತಿರಿ, (ಲೋಕಸಭೆ) ಎಲೆಕ್ಷನ್ ಲೀಡ್ ಮಾಡಲ್ಲ ಅಂತ ಭಾವನೆ ಬರುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಲೀಡ್ ಕೊಡದಿದ್ದರೆ ಬಹಳ ಸಂಕಷ್ಟ ಆಗ್ತಿದೆ. ಅದಕ್ಕಾಗಿ ರಾಜಾ ವೇಣುಗೋಪಾಲ ನಾಯಕ, ಜಿ.ಕುಮಾರ ನಾಯಕರನ್ನು ಗೆಲ್ಲಿಸಬೇಕು. ಅವರನ್ನು ಗೆಲ್ಲಿಸಿ ನನ್ನ ಕೈ ಬಲಪಡಿಸಬೇಕೆಂದು ಸಚಿವ ದರ್ಶನಾಪುರ ಮನವಿ ಮಾಡಿದ್ದಾರೆ.