2,000 ನೋಟುಗಳು ಬ್ಯಾನ್ ಆಗಿಲ್ಲ! – ಆರ್‌ಬಿಐ ಗವರ್ನರ್ ಹೀಗೆ ಹೇಳಿದ್ಯಾಕೆ?
ನವದೆಹಲಿ: 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಲಾಗುವುದು ಎಂದು ಆರ್‌ಬಿಐ ಶುಕ್ರವಾರ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ ಈ ಹಣ ಬದಲಿಸಿಕೊಳ್ಳಲು ಕೂಡ ಕಾಲಾವಕಾಶ ನೀಡಿದೆ. ಆದರೆ 2,000 ನೋಟುಗಳನ್ನು ವ್ಯಾಪಾರಿಗಳು ಪಡೆಯಲು ನಿರಾಕರಿಸುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿವೆ.
ಇದನ್ನೂ ಓದಿ: 2,000 ನೋಟು ರದ್ದಾಗುತ್ತಿದ್ದಂತೆ ಚಿನ್ನಾಭರಣಗಳಿಗೆ ಫುಲ್ ಡಿಮ್ಯಾಂಡ್!
ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡಿದ್ದಾರೆ. ಜನರು ಆತುರದಿಂದ ಬ್ಯಾಂಕ್‌ಗಳಿಗೆ ಧಾವಿಸಬೇಕಿಲ್ಲ. 2000 ರೂ.ನೋಟು ಕಾನೂನುಬದ್ಧವಾಗಿ ಮುಂದುವರೆಯಲಿವೆ. ನಿಮ್ಮ ಬಳಿಯಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ನಾಲ್ಕು ತಿಂಗಳ ಕಾಲಾವಕಾಶವಿದೆ. ಈ ನೋಟುಗಳನ್ನು ಅಂಗಡಿವರು ನಿರಾಕರಿಸುವಂತಿಲ್ಲ ಎಂದು ಹೇಳಿದ್ದಾರೆ.
ನಾವು 2000ರೂ.ನೋಟುಗಳನ್ನು ಚಲಾವಣೆಯಿಂದ ತೆಗೆದುಕೊಳ್ಳುತ್ತಿದ್ದೇವೆ ಆದರೆ ಅವುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ. ಈ ಹಿಂದೆ ಕೇಂದ್ರೀಯ ಬ್ಯಾಂಕ್ ನಿರ್ದೇಶಿಸಿದಂತೆ ಈ ನೋಟುಗಳನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. 2000 ಮುಖಬೆಲೆಯ ನೋಟುಗಳನ್ನು ಹೊಂದಿರುವರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು ಅಥವಾ ಮೇ 23ರಿಂದ ಸೆಪ್ಟೆಂಬರ್ 30ರವರೆಗೆ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ.
ಬ್ಯಾಂಕ್ಗಳಲ್ಲಿ 2,000 ನೋಟುಗಳ ವಿನಿಮಯಕ್ಕಾಗಿ ಸೌಲಭ್ಯವನ್ನು ಒದಗಿಸಬೇಕು. ಬೇಸಿಗೆ ಕಾಲವಿರುವುದರಿಂದ ಸಾರ್ವಜನಿಕರಿಗೆ ಕೂರಲು ಸ್ಥಳ, ಕುಡಿಯುವ ನೀರಿನ ಸೌಲಭ್ಯ ಇತ್ಯಾದಿಗಳಂತಹ ಸೂಕ್ತ ಮೂಲಸೌಕರ್ಯಗಳನ್ನು ಶಾಖೆಗಳಲ್ಲಿ ಒದಗಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. 2,000 ರೂ.ನೋಟುಗಳ ಠೇವಣಿ ಮತ್ತು ವಿನಿಮಯದ ದೈನಂದಿನ ಡೇಟಾವನ್ನು ಬ್ಯಾಂಕ್‌ಗಳು ನಿರ್ವಹಿಸಬೇಕು ಎಂದು ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.