ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಉಗ್ರರ ಗುಂಡೇಟಿಗೆ ಮೂವರು ಬಲಿ!
ಮಣಿಪುರ: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದದಲ್ಲಿ ಹಿಂಸಾಚಾರ ಮುಂದುವರಿದಿದೆ. ಉಗ್ರರು ಕುಕಿ –ಝೋ ಬುಡಕಟ್ಟು ಸಮುದಾಯದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮಣಿಪುರದ ಕಂಗ್ಪೋಪ್ಕಿ ಜಿಲ್ಲೆಯಲ್ಲಿ ನಡೆದಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆಯ ಉಗ್ರರು ವಾಹನದಲ್ಲಿ ಬಂದು ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕಿ ಜಿಲ್ಲೆಗಳ ಗಡಿ ಭಾಗದಲ್ಲಿರುವ ಇರೆಂಗ್ ಮತ್ತು ಕರಮ್ ಪ್ರದೇಶಗಳ ನಡುವಿನ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದಿಢೀರನೇ ಮಾರ್ಗ ಬದಲಾಯಿಸಿದ ಆಟೋ ಚಾಲಕ – ಭಯದಲ್ಲಿ ಸಂಚರಿಸುತ್ತಿದ್ದ ರಿಕ್ಷಾದಿಂದ ಜಿಗಿದು ಕೈ ಮುರಿದುಕೊಂಡ ಮಹಿಳೆ!
ಉಗ್ರರು ದಾಳಿ ನಡೆಸಿದ ಗ್ರಾಮವು ಬೆಟ್ಟಗಳಲ್ಲಿ ನೆಲೆಗೊಂಡಿದೆ ಮತ್ತು ಬುಡಕಟ್ಟು ಜನರ ಪ್ರಾಬಲ್ಯವನ್ನು ಹೊಂದಿದೆ. ಸೆಪ್ಟೆಂಬರ್ 8 ರಂದು ತೆಂಗ್ನೌಪಾಲ್ ಜಿಲ್ಲೆಯ ಪಲ್ಲೆಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿ, 50 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಯ ಬೆನ್ನಲ್ಲೇ ಈ ಘಟನೆ ನಡೆದಿದೆ.
ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮೈತೆ ಸಮುದಾಯದ ಬೇಡಿಕೆಯ ವಿರುದ್ಧ ಪ್ರತಿಭಟಿಸಲು ಬೆಟ್ಟದ ಪ್ರದೇಶಗಳಲ್ಲಿರುವ ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ನಂತರ ಮೇ.03 ರಿಂದ ಆರಂಭವಾದ ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಈ ವರೆಗೂ 160 ಮಂದಿ ಸಾವನ್ನಪ್ಪಿದ್ದಾರೆ. ಮಣಿಪುರದಲ್ಲಿ ಮೈತೆ ಸಮುದಾಯದವರು ಶೇ.’53 ರಷ್ಟಿದ್ದು, ಇಂಫಾಲ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗ, ಕುಕಿ ಸಮುದಾಯಗಳು ಶೇ.40 ರಷ್ಟಿದ್ದು ಬೆಟ್ಟದ ಪ್ರದೇಶಗಳಲ್ಲಿರುವ ಜಿಲ್ಲೆಗಳಲ್ಲಿದ್ದಾರೆ.