‘ರಾಜಕಾರಣ ಸಾಕಾಗಿದೆ.. ಬೇರೆ ಅಭ್ಯರ್ಥಿ ಸ್ಪರ್ಧಿಸಿದ್ರೆ ಬೆಂಬಲಿಸುವೆ’ – ಡಿ.ಕೆ ಸುರೇಶ್ ರಿಂದ ಮತ್ತೆ ವೈರಾಗ್ಯದ ಮಾತು
ಡಿ.ಕೆ ಸುರೇಶ್. ಕಾಂಗ್ರೆಸ್ ಪಕ್ಷದ ಕಟ್ಟಾಳು. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸೋದರನಾಗಿರುವ ಸುರೇಶ್ ರಾಜ್ಯದ ಪ್ರಭಾವಿ ನಾಯಕ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಕೂಡ ಹೌದು. ಮೂಲತಃ ಕೃಷಿಕ ಹಾಗೂ ನಂತರ ವ್ಯಾಪಾರೋದ್ಯಮಿಯಾಗಿ ಬೆಳೆದ ಡಿ.ಕೆ. ಸುರೇಶ್ ಈಗ ಕಾಂಗ್ರೆಸ್ ಪಕ್ಷದ ಹುರಿಯಾಳು. ಆದರೀಗ ಇದೇ ಸುರೇಶ್ ರಾಜಕೀಯದ ಬಗ್ಗೆ ವೈರಾಗ್ಯದ ಮಾತುಗಳನ್ನಾಡಿದ್ದು, ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : ಡಿಕೆಶಿ, ಡಿ.ಕೆ ಸುರೇಶ್ ರಿಂದ ದ್ವೇಷದ ರಾಜಕಾರಣ – ಅಧಿಕಾರಿಗಳ ಅಮಾನತು ವಿಚಾರಕ್ಕೆ ಮುನಿರತ್ನ ಆರೋಪ
2013 ರಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಡಿ.ಕೆ ಸುರೇಶ್ ಆಯ್ಕೆಯಾದರು. ಇದಕ್ಕೂ ಮುನ್ನ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂಸದರಾಗಿದ್ದ ಸಿ.ಪಿ. ಯೋಗೀಶ್ವರ್ ಅವರನ್ನು ಸೋಲಿಸಿ 2009 ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸಂಸದರಾಗಿ ಚುನಾಯಿತರಾಗಿದ್ದರು. ಆದರೆ ತಮ್ಮ ಸಂಸದ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ ಕಾರಣ ಇಲ್ಲಿ ಉಪ ಚುನಾವಣೆ ನಡೆದಿತ್ತು. 2013ರ ಉಪಚುನಾವಣೆಯಲ್ಲಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿ ಸುರೇಶ್ ಸಂಸದರಾದರು. ತದನಂತರ 2014 ರಲ್ಲಿ ನಡೆದ 16ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಸಂಸದರಾಗಿ ಚುನಾಯಿತರಾದರು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಏಕೈಕ ಸಂಸದರಾಗಿ ಆಯ್ಕೆಯಾಗಿದ್ದರು.
ಮುಂದಿನ ವರ್ಷ ಲೋಕಸಭಾ ಚುನಾವಣೆ ಇದ್ದು, ತಯಾರಿ ನಡೆಯುತ್ತಿರುವ ಹೊತ್ತಲ್ಲೇ ಸಂಸದ ಡಿಕೆ ಸುರೇಶ್ (DK Suresh) ಅವರಿಗೆ ರಾಜಕೀಯದ ಮೇಲೆ ವೈರಾಗ್ಯ ಮೂಡಿದೆ ಎಂದಿದ್ದಾರೆ. ರಾಜಕಾರಣ (politics) ಸಾಕಾಗಿದೆ, ಅದು ಚೆನ್ನಾಗಿಲ್ಲ, ಲೋಕಸಭಾ ಚುನಾವಣೆಗೆ (Lok Sabha Polls) ಇನ್ನೂ ಒಂದು ವರ್ಷವಿದೆ, ಪಕ್ಷದ ಕಾರ್ಯಕರ್ತರು, ಮುಖಂಡರು ಬೇರೊಬ್ಬ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಖಂಡಿತ ಬೆಂಬಲ ನೀಡುವುದಾಗಿ ಸುರೇಶ್ ಹೇಳಿದರು. ಆದರೆ, ಚುನಾವಣೆ ಸ್ಪರ್ಧಿಸದಿರುವ ಬಗ್ಗೆ ಇನ್ನೂ ತೀರ್ಮಾನ ತೆಗೆದಿಕೊಂಡಿಲ್ಲ ಅಂತಲೂ ಅವರು ಹೇಳಿದರು. ಅಧಿಕಾರದ ದಾಹ ಇರೋರಿಗೆ ರಾಜಕೀಯ ಮಾಡಬೇಕೆಂಬ ಉದ್ದೇಶವಿರುತ್ತದೆ ಆದರೆ ತನಗೆ ಅಧಿಕಾರ ದಾಹವಿಲ್ಲ, ಅಭಿವೃದ್ಧಿ ದಾಹ ಇದೆ, ಅಧಿಕಾರದ ಈ ಕೊನೆಯ ವರ್ಷದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಡಿ.ಕೆ ಸುರೇಶ್ ಹೇಳಿದ್ದಾರೆ.
ಇನ್ನು ಡಿ.ಕೆ ಸುರೇಶ್ ಸೋಲಿಸಲು ಬಿಜೆಪಿ (BJP)-ಜೆಡಿಎಸ್ (JDS) ಹೊಂದಾಣಿಕೆ ಕುರಿತು ಮಾತನಾಡಿದ ಅವರು, ಅವರು ಹೊಂದಾಣಿಕೆ ಮಾಡಿಕೊಳ್ಳಲಿ. ಯಾರು ಬೇಕಾದರೂ ನಿಲ್ಲಲಿ. ನನಗಿರುವುದೂ ಒಂದೇ ಮತ, ಪ್ರಧಾನಿಗಿರೋದು ಒಂದೇ ಮತ. ಆ ಮತವನ್ನು ಯಾರಿಗೆ ಹಾಕಬೇಕು ಎಂದು ಜನರು ತೀರ್ಮಾನ ಮಾಡುತ್ತಾರೆ ಎಂದರು.