ಬೆಂಗಳೂರಿನಲ್ಲಿ ಮಳೆಯ ಅವಘಡ ತಪ್ಪಿಸಲು ಬೇಕಿದೆ 658 ಕಿ.ಮೀ ಒಳಚರಂಡಿ ವಿಸ್ತರಣೆ! – ಅಧ್ಯಯನ ವರದಿಯಲ್ಲಿ ಏನಿದೆ?

ಬೆಂಗಳೂರಿನಲ್ಲಿ ಮಳೆಯ ಅವಘಡ ತಪ್ಪಿಸಲು ಬೇಕಿದೆ 658 ಕಿ.ಮೀ ಒಳಚರಂಡಿ ವಿಸ್ತರಣೆ! – ಅಧ್ಯಯನ ವರದಿಯಲ್ಲಿ ಏನಿದೆ?

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು. ಅನೇಕ ಮರಗಳು ಧರೆಗೆ ಉರುಳಿದ್ದವು. ಹಲವು ಅಂಗಡಿಗಳಿಗೆ ಮಳೆ ನೀರು ಪ್ರವಾಹದಂತೆ ನುಗ್ಗಿತ್ತು. ಈ ಮೇ ತಿಂಗಳಿನಲ್ಲಿ ಸುರಿದ ರಣಮಳೆ ದಾಖಲೆಯನ್ನು ಸೃಷ್ಟಿಸಿದೆ. ನಗರದಲ್ಲಿ ಸುಮಾರು 31 ಸೆಂ.ಮೀ ಮಳೆಯಾಗಿದ್ದು, 66 ವರ್ಷಗಳ ದಾಖಲೆಯನ್ನು ಮುರಿದಿದೆ. ಇದರ ನಡುವೆ ಮತ್ತೊಂದು ಅಚ್ಚರಿಯ ವರದಿ ಹೊರ ಬಿದ್ದಿದೆ.

ಇದನ್ನೂ ಓದಿ: 66 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ! – ಮೇ ತಿಂಗಳಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

ಅಂತಾರಾಷ್ಟ್ರೀಯ ಆಸ್ತಿ ಸಲಹಾ ಸಂಸ್ಥೆಯಾಗಿರುವ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ನಗರದ ಮಳೆನೀರು ಒಳಚರಂಡಿ ಮೂಲಸೌಕರ್ಯದಲ್ಲಿನ ಅಂತರವನ್ನು ಅರ್ಥಮಾಡಿಕೊಳ್ಳಲು ಅಸ್ತಿತ್ವದಲ್ಲಿರುವ ಡೇಟಾವನ್ನು ಆಧರಿಸಿ ಅಧ್ಯಯನ ನಡೆಸಿದೆ. ಇದರ ವರದಿಯ ಪ್ರಕಾರ, ಬೆಂಗಳೂರು ನಗರದಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿ ತಡೆಗೆ 658 ಕಿಮೀಗಳಷ್ಟು ಪ್ರಾಥಮಿಕ ಮತ್ತು ಮಾಧ್ಯಮಿಕ ಒಳ ಚರಂಡಿಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದೆ.

ಬೆಂಗಳೂರು ಅರ್ಬನ್ ಫ್ಲಡ್ ಎಂಬ ಶೀರ್ಷಿಕೆಯಡಿ ಈ ಅಧ್ಯಯನವನ್ನು ಸಿದ್ದಪಡಿಸಲಾಗಿದೆ. ಸದ್ಯ ಈಗ ಬೆಂಗಳೂರು 842 ಕಿಮೀ ಚರಂಡಿಯನ್ನು ಹೊಂದಿದೆ. ಪ್ರಾದೇಶಿಕ ವಿಸ್ತರಣೆಗೆ ಪೂರಕವಾಗಿ, ನಗರದಲ್ಲಿ ಚರಂಡಿಗಳನ್ನು ವಿಸ್ತರಿಸುವ ಅಗತ್ಯವಿದೆ. ಅಸ್ತಿತ್ವದಲ್ಲಿರುವ ಚರಂಡಿಯನ್ನ ಸರಿಪಡಿಸುವ ಜೊತೆಗೆ ಹೊಸ ಚರಂಡಿಗಳ ನಿರ್ಮಾಣಕ್ಕೆ 2,800 ಕೋಟಿ ರೂ.ಗಳ ಅತ್ಯವಿದೆ ಎಂದು ಈ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಸ್ಥಳಾಕೃತಿ ಮತ್ತು ಒಳಚರಂಡಿ ವ್ಯವಸ್ಥೆಯಿಂದ ಈ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ 1.8 ಕೋಟಿಗೆ ತಲುಪುವ ಸಾಧ್ಯತೆಯಿದೆ. ಜನಸಂಖ್ಯೆಗೆ ಅನುಗುಣವಾಗಿ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯವನ್ನು ಸಮರ್ಪಕವಾಗಿ ದುಪ್ಪಟ್ಟು ಅಭಿವೃದ್ಧಿಯ ಅಗತ್ಯವಿದೆ. ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ನಗರದ ಭೂ ಬಳಕೆಯ ಡೈನಾಮಿಕ್ಸ್ ಗಮನಾರ್ಹವಾಗಿ ಬದಲಾಗಿದೆ. ಬೆಂಗಳೂರಿನ ಬಿಲ್ಟ್-ಅಪ್ ಪ್ರದೇಶದ ಪಾಲು 2002 ರಲ್ಲಿ ಶೇ. 37.4 ರಿಂದ 2020ರ ವೇಳೆಗೆ ಶೇ. 93.3 ಕ್ಕೆ ಏರಿಯಾಗಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

suddiyaana