ರಾಹುಲ್ ದ್ರಾವಿಡ್ ಪುತ್ರನಿಗೆ ಶಾಕ್ – ಆಸ್ಟ್ರೇಲಿಯಾ ಸರಣಿಯಿಂದಲೇ OUT
ಸಮಿತ್ ದ್ರಾವಿಡ್ ಕನಸು ಭಗ್ನವಾಗಿದ್ದೇಗೆ?
ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ದ್ರೋಣಾಚಾರ್ಯ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. ಅದೇ ರಾಹುಲ್ ದ್ರಾವಿಡ್ ಅವ್ರ ಪುತ್ರ ಈಗಷ್ಟೇ ಕ್ರಿಕೆಟ್ ಅಂಗಳದಲ್ಲಿ ಸದ್ದು ಮಾಡೋಕೆ ಶುರು ಮಾಡಿದ್ದಾರೆ. ದೇಶೀಯ ಟೂರ್ನಿಗಳಲ್ಲಿ ಸಮಿತ್ ದ್ರಾವಿಡ್ ಹೆಸರು ಸಂಚಲನ ಮೂಡಿಸ್ತಿದೆ. ಅಷ್ಟೇ ಯಾಕೆ ಇತ್ತೀಚೆಗೆ ಟೀಂ ಇಂಡಿಯಾ ಅಂಡರ್ 19ತಂಡಕ್ಕೂ ಆಯ್ಕೆಯಾಗಿ ಕನ್ನಡಿಗರ ಖುಷಿ ಡಬಲ್ ಮಾಡಿದ್ರು. ಬಲಗೈ ಬ್ಯಾಟರ್ ಆಗಿರುವ ಸಮಿತ್ ದ್ರಾವಿಡ್ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಮಹಾರಾಜ ಟ್ರೋಫಿಯಲ್ಲಿ ಅಪ್ಪನಂತೆ ಕ್ಲಾಸಿಕ್ ಆಗಿ ಬ್ಯಾಟ್ ಬೀಸಿದ ಅವರು ಸೈ ಎನಿಸಿಕೊಂಡಿದ್ದರು. ಈಗ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ರೂ ಕೂಡ ಟೀಂ ಇಂಡಿಯಾ ಪರ ಕಣಕ್ಕಿಳಿಯೋ ಅವಕಾಶ ಕಳ್ಕೊಂಡಿದ್ದಾರೆ. ಅದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಡಿಕೆಶಿ ಸಿಎಂ ಆಗಲ್ವಾ..?
ಸಮಿತ್ ಗೆ ಬಿಗ್ ಶಾಕ್!
ಇತ್ತೀಚೆಗಷ್ಟೇ ಮುಕ್ತಾಯವಾದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡ ಆಡಿದ್ದರು. ಮೈಸೂರು ವಾರಿಯರ್ಸ್ ತಂಡದ ಪರ ಸಮಿತ್ ದ್ರಾವಿಡ್ ಪ್ರರ್ದಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಲ್ಲಿ ಮಿಂಚಿದ್ದರ ಫಲವಾಗಿಯೇ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡದಲ್ಲಿ ಸಮಿತ್ ಸ್ಥಾನ ಗಿಟ್ಟಿಸಿಕೊಂಡಿದ್ರು. ಇನ್ನೇನು ಟೀಂ ಇಂಡಿಯಾ ಪರ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನ ಆಡ್ತಾರೆ ಅನ್ನುವಾಗ್ಲೇ ಬಿಗ್ ಶಾಕ್ ಎದುರಾಗಿದೆ. ಭಾರತ ತಂಡಕ್ಕಾಗಿ ಆಡುವ ಅವರ ಕನಸು ಭಗ್ನಗೊಂಡಿದೆ. ಪುದುಚೇರಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದ ಆಲ್‌ರೌಂಡರ್ ಸಮಿತ್ ದ್ರಾವಿಡ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಮೊದಲಿಗೆ ಪುದುಚೇರಿಯಲ್ಲಿ ಭಾರತ ಅಂಡರ್-19 ತಂಡದ ಪರ ಸಮಿತ್ ದ್ರಾವಿಡ್ ಅವರು ಪಾದರ್ಪಣೆ ಮಾಡುವ ಕನಸು ಕಂಡಿದ್ದರು. ಆದರೆ ಅವರು ಮೂರು ಏಕದಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಸಮಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 3-0 ಅಂತರದಲ್ಲಿ ಸರಣಿ ಗೆದ್ದಿತ್ತು. ಆ ಬಳಿಕ ಚೆನ್ನೈನಲ್ಲಿ ಸೋಮವಾರದಿಂದ ಆರಂಭವಾಗಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದಲೂ ಸಮಿತ್ ದ್ರಾವಿಡ್ ಹೊರಬಿದ್ದಿದ್ದಾರೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಸಮಿತ್ ದ್ರಾವಿಡ್ ಸದ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇದ್ದಾರೆ. ಸದ್ಯ ಸಮಿತ್ ದ್ರಾವಿಡ್ ಅವರ ಬಗ್ಗೆ ಭಾರತ ಅಂಡರ್-19 ತಂಡದ ಹೆಡ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸಮಿತ್ ಪ್ರಸ್ತುತ ಎನ್‌ಸಿಎಯಲ್ಲಿದ್ದು, ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈಗಲೇ ಏನನ್ನೂ ಹೇಳಲಾಗಲ್ಲ. ಆದರೆ ಅವನು ಸದ್ಯಕ್ಕೆ ಆಡುವುದು ಕಷ್ಟಕರವಾಗಿದೆ ಎಂದಿದ್ದಾರೆ.
ಈ ಅವಕಾಶ ಕಳ್ಕೊಂಡ್ರೆ ಸಮಿತ್ ಮತ್ತೆ ಅಂಡರ್ 19 ತಂಡದಲ್ಲಿ ಕಾಣಿಸೋದು ಕಷ್ಟ ಇದೆ. ಸಮಿತ್ ದ್ರಾವಿಡ್ ನವೆಂಬರ್ 10, 2005 ರಂದು ಜನಿಸಿದ್ದು, ಕೇವಲ ಒಂದು ತಿಂಗಳಲ್ಲಿ ತಮ್ಮ 19ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಮುಂದಿನ ಅಂಡರ್-19 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳಲ್ಲಿ ನಡೆಯಲಿದೆ. 2026ರ ಅಂಡರ್-19 ವಿಶ್ವಕಪ್ ವೇಳೆಗೆ ಸಮಿತ್ಗೆ 20 ವರ್ಷಕ್ಕೂ ಹೆಚ್ಚು ವಯಸ್ಸಾಗಲಿದೆ. ಈ ಕಾರಣದಿಂದ ಸಮಿತ್ ದ್ರಾವಿಡ್ 2026ರ ಅಂಡರ್-19 ವಿಶ್ವಕಪ್‌ನಲ್ಲಿ ಆಡುವುದಕ್ಕೆ ಅವಕಾಶ ಸಿಗೋದಿಲ್ಲ.