ಬಿಜೆಪಿಗೆ ಪುತ್ತಿಲ ಶಾಕ್! – ಪುತ್ತೂರಲ್ಲಿ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ ಕಮಲ ಪಡೆ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರವನ್ನ ಹಿಂದುತ್ವದ ಪ್ರಯೋಗಶಾಲೆಯೆಂದೇ ಕರೆಯಲಾಗುತ್ತೆ. ಅಲ್ಲೇನಿದ್ರೂ ಹಿಂದುತ್ವ, ಹಿಂದುತ್ವದ ಅಜೆಂಡಾಗಷ್ಟೇ ಹೆಚ್ಚಿನ ಪ್ರಾಮುಖ್ಯತೆ. ಇದೇ ಕಾರಣಕ್ಕೆ ಪುತ್ತೂರು ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದೆ. ಆದ್ರೆ ಕಳೆದ ವಿಧಾನಸಭೆಯಲ್ಲಿ ಅಭ್ಯರ್ಥಿ ಆಯ್ಕೆ ವೇಳೆ ತೆಗೆದುಕೊಂಡ ಒಂದು ನಿರ್ಧಾರ ಬಿಜೆಪಿ ಬುಡವನ್ನೇ ಅಲುಗಾಡಿಸುತ್ತಿದೆ. ಸಾವಿರಾರು ಬೆಂಬಲಿಗರನ್ನ ಹೊಂದಿರುವ ಅರುಣ್ ಪುತ್ತಿಲಗೆ ಕ್ಷೇತ್ರದ ಬಿಜೆಪಿ ಸಿಗುತ್ತೆ ಅಂತಾನೇ ಭಾವಿಸಲಾಗಿತ್ತು. ಆದ್ರೆ ಬಿಜೆಪಿ ಹೈಕಮಾಂಡ್ ಅಂತಿಮ ಕ್ಷಣದಲ್ಲಿ ಆಶಾ ತಿಮ್ಮಪ್ಪಗೆ ಟಿಕೆಟ್ ನೀಡಿತ್ತು. ಇದ್ರಿಂದ ಬೇಸತ್ತ ಅರುಣ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾನಿ ಕಣಕ್ಕಿಳಿದಿದ್ರು. ಪರಿಣಾಮ ಮತಗಳು ವಿಭಜನೆ ಆಗಿದ್ರಿಂದ ಅಂತಿಮವಾಗಿ ಕಾಂಗ್ರೆಸ್ನ ಅಶೋಕ್ ರೈ ಗೆದ್ದು ಬೀಗಿದ್ರು. ಪಕ್ಷೇತರ ಅಭ್ಯರ್ಥಿಯಾಗಿ ಸೋತಿದ್ದ ಅರುಣ್ ಪುತ್ತಿಲ ಇದೀಗ ಪುತ್ತಿಲ ಪರಿವಾರ ಹೆಸರಿನಲ್ಲಿ ತಮ್ಮದೇ ಒಂದು ಪಡೆಯನ್ನು ಕಟ್ಟಿಕೊಂಡಿದ್ದಾರೆ. ಸ್ಥಳೀಯ ಚುನಾವಣೆಗಳಲ್ಲೂ ಬಿಜೆಪಿಗೆ ದುಸ್ವಪ್ನವಾಗಿ ಕಾಡ್ತಿದ್ದಾರೆ. ಪುತ್ತೂರು ಕ್ಷೇತ್ರ ಗಾಮ ಪಂಚಾಯ್ತಿ ವ್ಯಾಪ್ತಿಗಳಲ್ಲೂ ಪುತ್ತಿಲ ಬೆಂಬಲಿಗರು ಸ್ಪರ್ಧಿಸುತ್ತಿದ್ದಾರೆ. ಹಾಗೇ ಪುತ್ತೂರು ನಗರ ಸಭೆಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಬೆಂಬಲಿಗರು ಅಖಾಡಕ್ಕೆ ಇಳಿದಿದ್ದರು. ಇಲ್ಲೂ ಕೂಡ ಬಿಜೆಪಿಗೆ ಶಾಕ್ ತಟ್ಟಿದೆ.
ಇದನ್ನೂ ಓದಿ: ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ – ವಂದೇ ಭಾರತ್ ರೈಲುಗಳಿಗೂ ಚಾಲನೆ
ಪುತ್ತೂರು ನಗರ ಸಭೆಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. ಎರಡೂ ಸ್ಥಾನಗಳಲ್ಲಿ ಪುತ್ತಿಲ ಬೆಂಬಲಿಗರು ಸ್ಪರ್ಧಿಸಿದ್ದರು. ಆದ್ರೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಮತ್ತೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಎರಡೂ ಕ್ಷೇತ್ರದಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ಸೋಲು ಉಂಟಾಗಿದೆ. ವಾರ್ಡ್ 11ರಲ್ಲಿ ಬಿಜೆಪಿಯ ರಮೇಶ್ ರೈ ಗೆಲುವು ಸಾಧಿಸಿದ್ರೆ, ವಾರ್ಡ್ 1ರಲ್ಲಿ ಕಾಂಗ್ರೆಸ್ನ ದಿನೇಶ್ ಶೇವಿರೆ ಗೆಲುವು ಕಂಡಿದ್ದಾರೆ. ಪುತ್ತಿಲ ಬೆಂಬಲಿಗರೂ ಎರಡೂ ಕಡೆ ಸೋತಿದ್ರೂ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಯಾಕಂದ್ರೆ ವಾರ್ಡ್ 11ರ ಕ್ಷೇತ್ರದ ಅಭ್ಯರ್ಥಿ 216 ಮತಗಳನ್ನ ಪಡೆದುಕೊಂಡಿದ್ದಾರೆ. ಹಾಗೇ ವಾರ್ಡ್ 1ರಲ್ಲಿ ಬಿಜೆಪಿಯನ್ನ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಪುತ್ತಿಲ ಪರಿವಾರದ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಪುತ್ತಿಲ ಬೆಂಬಲಿಗರಿಂದಲೇ ಬಿಜೆಪಿ ಇಲ್ಲಿ ಒಂದು ಕ್ಷೇತ್ರವನ್ನ ಕಳೆದುಕೊಂಡಿರೋದು ಕನ್ಫರ್ಮ್ ಆಗಿದೆ.
ವಿಧಾನಸಭಾ ಚುನಾವಣೆ ಟಿಕೆಟ್ ಕೈ ತಪ್ಪಿದಾಗಿನಿಂದ್ಲೂ ಪುತ್ತಿಲ ಬಿಜೆಪಿ ವಿರುದ್ಧ ಕುದಿಯುತ್ತಲೇ ಇದ್ದಾರೆ. ಅರುಣ್ ಪುತ್ತಿಲ ಅವರಿಗೆ ಪುತ್ತೂರಿನ ಟಿಕೆಟ್ ಕೈತಪ್ಪಿದಾಗಲೇ ಕೋಟೇಚಾ ಹಾಲ್ ನಲ್ಲಿ ಸಭೆ ಕರೆದಿದ್ರು. ಸಭೆಯಲ್ಲಿ 3000ಕ್ಕೂ ಹೆಚ್ಚು ಬೆಂಬಲಿಗರು ಸೇರಿದಾಗಲೇ ಬಿಜೆಪಿ ನಡುಗಿ ಹೋಗಿತ್ತು. ಬಳಿಕ ಆರೆಸ್ಸೆಸ್ಸಿನ, ಬಿಜೆಪಿ ಘಟಾನುಘಟಿ ಮುಖಂಡರು ಬಂಡಾಯ ಶಮನಗೊಳಿಸಲು ನಡೆಸಿದ ಯತ್ನ ಫಲ ಕೊಟ್ಟಿರಲಿಲ್ಲ. ಬಳಿಕ ಪುತ್ತಿಲ ತಮ್ಮದೇ ಪರಿವಾರ ಕಟ್ಟಿಕೊಂಡು ಬಿಜೆಪಿ ವಿರುದ್ಧ ಬುಸುಗುಡುತ್ತಲೇ ಇದ್ದಾರೆ. ಆದ್ರೆ ಪುತ್ತೂರಲ್ಲಿ ಬಿಜೆಪಿ ಕೂಡ ಸ್ಟ್ರಾಂಗ್ ಆಗಿಯೇ ಇದೆ.
ಪುತ್ತೂರಲ್ಲಿ ಬಿಜೆಪಿಯದ್ದೇ ಪಾರುಪತ್ಯ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡ 1994ರಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆಯ ವಿರುದ್ಧ ಜಯ ಸಾಧಿಸಿದ ಬಳಿಕ ಬಿಜೆಪಿಯದ್ದೇ ಪಾರುಪತ್ಯ. 2013ರಲ್ಲಿ ಬಿಜೆಪಿಯ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕುಂತಳಾ ಶೆಟ್ಟಿ ಗೆಲುವು ಕಂಡಿದ್ರು. ಬಳಿಕ 2023ರಲ್ಲಿ ಪುತ್ತಿಲ ಬಂಡಾಯದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ರು. ಲೋಕಸಭಾ ಚುನಾವಣೆಯಲ್ಲೂ ಕೂಡ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ತಾಲೂಕುಗಳ ಮತಎಣಿಕೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದ ಕಾಂಗ್ರೆಸ್ ಪಕ್ಷ ಪುತ್ತೂರು ಮತ್ತು ಸುಳ್ಯ ತಾಲೂಕಿನ ಮತಎಣಿಕೆ ವೇಳೆ ಸಂಪೂರ್ಣ ನೆಲಕಚ್ಚುತ್ತದೆ. ಅಂತಿಮವಾಗಿ ಗೆಲುವಿನ ನಗು ಬಿಜೆಪಿಯದ್ದಾಗುತ್ತದೆ. 1991ರಲ್ಲಿ ಧನಂಜಯ್ ಕುಮಾರ್ ವಿರುದ್ಧ ಜನಾರ್ದನ ಪೂಜಾರಿ ಪರಾಭವಗೊಂಡ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಸಂಸದನನ್ನು ಕಂಡಿಲ್ಲ. ಅದರಲ್ಲಿ ಪುತ್ತೂರು ಮತ್ತು ಸುಳ್ಯ ಕ್ಷೇತ್ರದ ಕೊಡುಗೆ ಬಹುದೊಡ್ಡದಿದೆ. ಅಷ್ಟರ ಮಟ್ಟಿಗೆ ಇಲ್ಲಿ ಬಿಜೆಪಿ ಬಲಿಷ್ಠ. ಅಭ್ಯರ್ಥಿ ಯಾರೇ ಇರಲಿ, ಬಿಜೆಪಿಗೆ ಗೆಲುವು ಶತಸಿದ್ಧ ಎಂಬ ಲೆಕ್ಕಾಚಾರ ಇರುತ್ತದೆ.
ಅಸಲಿ ಪುತ್ತೂರಿನಲ್ಲಿ ಅತಿ ಹೆಚ್ಚು ಅಂದ್ರೆ 50 ಸಾವಿರ ಒಕ್ಕಲಿಗ ಮತಗಳಿವೆ. ಎರಡನೇ ಅತಿ ದೊಡ್ಡ ಸಂಖ್ಯೆ ಮುಸ್ಲಿಮರಾಗಿದ್ದು 48 ಸಾವಿರ ಮಂದಿ ಇದ್ದಾರೆ. 30 ಸಾವಿರ ದಲಿತ ಮತದಾರರು, 28 ಸಾವಿರ ಬಂಟ, 25 ಸಾವಿರ ಬಿಲ್ಲವ, 12 ಸಾವಿರ ಬ್ರಾಹ್ಮಣ ಮತದಾರರಿದ್ದಾರೆ. ಇಲ್ಲಿ ಮುಸ್ಲಿಮರ ಬಹುಪಾಲು ಮತದಾರರು ಕಾಂಗ್ರೆಸ್ ಪರ ನಿಲ್ಲುತ್ತದೆ. ಉಳಿದಂತೆ ಎಲ್ಲ ಸಮುದಾಯದ ಜನರು ಅಭ್ಯರ್ಥಿಯ ಸಮುದಾಯವನ್ನು ನೋಡಿ ಮತ ಹಾಕುವುದಿಲ್ಲ. ಯಾವುದಾದರೂ ಒಂದು ಪಕ್ಷದ ಪರವಾಗಿ ನಿಲ್ಲುತ್ತಾರೆ. ಬಹುತೇಕರು ಬಿಜೆಪಿಯ ಪರವಾಗಿಯೇ ಇರ್ತಾರೆ. ಯಾಕಂದ್ರೆ ಹಿಂದುತ್ವದ ಅಜೆಂಡಾ ಇಲ್ಲಿ ಅಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ. ಇದೇ ಅಜೆಂಡಾ ಹೊಂದಿರುವ ಕಾರ್ಯಕರ್ತರು ಪುತ್ತಿಲ ಪರವಾಗಿ ನಿಂತಿರೋದ್ರಿಂದ ಬಿಜೆಪಿ ತನ್ನ ಪ್ರಾಬಲ್ಯ ಕಳೆದುಕೊಳ್ತಿದೆ. ಇದು ಕಾಂಗ್ರೆಸ್ ಪಾಲಿಗೆ ವರದಾನವಾಗುತ್ತಿದೆ.