ಬಿಜೆಪಿಗೆ ಶಾಕ್‌ ಮೇಲೆ ಶಾಕ್‌! – 20 ಸಾವಿರ ಕೋಟಿ ರೂಪಾಯಿ ಟೆಂಡರ್‌ ರದ್ದು ಮಾಡಿದ್ಯಾಕೆ ಕಾಂಗ್ರೆಸ್?‌

ಬಿಜೆಪಿಗೆ ಶಾಕ್‌ ಮೇಲೆ ಶಾಕ್‌! – 20 ಸಾವಿರ ಕೋಟಿ ರೂಪಾಯಿ ಟೆಂಡರ್‌ ರದ್ದು ಮಾಡಿದ್ಯಾಕೆ ಕಾಂಗ್ರೆಸ್?‌

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಇನ್ನೂ ಆ ಶಾಕ್‌ ನಿಂದ ಹೊರಬಂದಂತಿಲ್ಲ. ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ರಾಜ್ಯದ ಕಾಂಗ್ರೆಸ್‌ ಮತ್ತೊಂದು ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರು ಮಾಡಲಾದ ಸುಮಾರು 20,000 ಕೋಟಿ ಮೌಲ್ಯದ ಕಾಮಗಾರಿಗಳು ಹಾಗೂ ಟೆಂಡರ್‌ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಇನ್ನೂ ಬಗೆಹರಿಯದ ಬಿಕ್ಕಟ್ಟು – ಸಚಿವ ಸಂಪುಟ ರಚನೆಗೆ ದಿಲ್ಲಿಯಲ್ಲಿ ಕಸರತ್ತು

ಕಳೆದೆರಡು ದಿನಗಳ ಹಿಂದೆ ಬಿಜೆಪಿ ಸರಕಾರ ಆದೇಶಿಸಿದ್ದ ಎಲ್ಲ ಇಲಾಖೆಗಳ ಮತ್ತು ಅವುಗಳ ಅಧೀನಕ್ಕೊಳಪಡುವ ನಿಗಮ, ಮಂಡಳಿ, ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಬಿಲ್‌ ಪಾವತಿಗಳನ್ನು ಸ್ಥಗಿತಗೊಳಿಸಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು. ಹಣಕಾಸಿನ ಸೂಕ್ತ ಅನುದಾನವಿಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಟೆಂಡರ್‌ಗಳನ್ನು ಕರೆದಿದೆ ಎಂದು ಆರೋಪಿಸಿ, ಅವುಗಳೆಲ್ಲವನ್ನೂ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಲಾಗಿತ್ತು. ಈಗ ಆ ಇಲಾಖೆಗಳು ಯಾವುವು, ವಿವಿಧ ಟೆಂಡರ್‌ಗಳ ಒಟ್ಟಾರೆ ಮೊತ್ತ ಎಷ್ಟು ಎಂಬುದನ್ನು ಸ್ವತಃ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.

‘ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿರುವ ವಿಶ್ವೇಶ್ವರಯ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮ, ಇಂಧನ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಜಲಜೀವನ್ ಮಿಷನ್ ಯೋಜನೆಯಡಿ ಅನುದಾನದ ಲಭ್ಯತೆ ಇಲ್ಲದೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಅನುದಾನದ ಕೊರತೆ, ಭೂಸ್ವಾಧೀನದ ತೊಂದರೆ ಇದ್ದರೂ ತರಾತುರಿಯಲ್ಲಿ ಟೆಂಡರ್‌ ನಡೆಸಿರುವ ದೂರುಗಳಿವೆ’ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

ತರಾತುರಿಯಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್‌ಗಳನ್ನು ಕರೆಯಲಾಗಿದೆ. ಆ ಕಾಮಗಾರಿಗಳಿಗೆ 20,000 ಕೋಟಿ ವೆಚ್ಚಕ್ಕೆ ಅನುಮೋದನೆ ಅಗತ್ಯವಿದೆ. ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಕೆಲವೆಡೆ ವ್ಯಾಪಕ ಅಕ್ರಮಗಳು ನಡೆದಿರುವ ದೂರುಗಳೂ ಇವೆ. ಈ ಎಲ್ಲ ಕಾಮಗಾರಿಗಳನ್ನೂ ಪರಿಶೀಲಿಸುವ ಅಗತ್ಯವಿದೆ. ಈ ಕಾರಣಕ್ಕಾಗಿ ಮುಂದಿನ ಆದೇಶದವರೆಗೆ ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಮತ್ತು ಟೆಂಡರ್ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.

suddiyaana