ಬಿಎಸ್‌ವೈ- ಶೋಭಾ ದೂರ..ದೂರ – ಯಡ್ಡಿ Vs ಯತ್ನಾಳ್.. ಶೋಭಾ ಶಿಫ್ಟ್
ವಿಜಯೇಂದ್ರ ಭವಿಷ್ಯಕ್ಕೆ ಕೊಳ್ಳಿಯಿಟ್ರಾ?
ರಾಜ್ಯ ಬಿಜೆಪಿಯಲ್ಲಿ ಯಾವುದು ಸರಿ ಇಲ್ಲ ಅನ್ನೋದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ. ಯಾಕಂದ್ರೆ ಬಸನಗೌಡ ಯತ್ನಾಳ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡೆ ಈ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಉಪ ಚುನಾವಾಣೆ, ವಕ್ಫ್ ಪ್ರೋಟೆಸ್ಟ್ಗಳನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಬಿಜೆಪಿಯಲ್ಲಿ ಭಿನ್ನ ಮತ ಸ್ಫೋಟ ಆಗುತ್ತಿದೆ ಅನ್ನೋದು ಎದ್ದು ಕಾಣುತ್ತಿದೆ. ಅದರಲ್ಲೂ ಒಂದ್ ಕಾಲದಲ್ಲಿ ಯಡಿಯೂರಪ್ಪರ ಪರಮಾಪ್ತೆಯಾಗಿದ್ದ ಶೋಭಾ ಕರಂದ್ಲಾಜೆ, ಈಗ ಬಿಎಸ್‌ವೈ ಅವರ ಕಡುವಿರೋಧಿ ಯತ್ನಾಳ್ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿರೋದು ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಿದ್ರೆ ಯತ್ನಾಳ್ ಹಾಗೂ ಶೋಭಾ ಪ್ಲ್ಯಾನ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ಕೊಹ್ಲಿ Or ಕೆಎಲ್? – ಐವರ ರೇಸ್.. ವಿದೇಶಿಗನಿಗೆ ಲಕ್?
ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯದ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತಿದೆ. ಇದು ಉಪ ಚುನಾವಣೆ ಮುಗಿದ ನಂತರ ಮತ್ತಷ್ಟು ಸ್ಫೋಟವಾಗೋ ಸಾಧ್ಯತೆಯಿದೆ. ನೀವೆಲ್ಲಾ ಈಗಾಗಲೇ ನೋಡಿದಂತೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಿನ ನಿತ್ಯ ಕೆಂಡ ಕಾರತ್ತಲೇ ಇರುತ್ತಾರೆ..ಅದ್ರಲ್ಲೂ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆದ ಮೇಲೆ ಬಿಜೆಪಿಯಲ್ಲಿ ಎರಡು ಬಾಣವಾಗಿದೆ. ಒಂದು ಯತ್ನಾಳ್ ಬಣವಾದ್ರೆ, ಇನ್ನೊಂದು ವಿಜಯೇಂದ್ರ ಬಣ.. ಅದ್ರಲ್ಲೂ ಯತ್ನಾಳ್ ಸೇರಿದಂತೆ ಅವರ ಆಪ್ತರು ವಿಜಯೇಂದ್ರ ಮೇಲೆ ನೇರವಾಗಿಯೇ ಮಾತಿನ ದಾಳಿ ಮಾಡುತ್ತಿದ್ದಾರೆ.
ಈ ನಡುವೆ ಯತ್ನಾಳ್ ಜೊತೆ ಶೋಭಾ ಕರಂದ್ಲಾಜೆ ಕೈ ಜೋಡಿಸಿದ್ದಾರೆ. ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರೈತರ ಜಮೀನು ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಖಂಡಿಸಿ ಅನಿರ್ಧಾಷ್ಟಾವಧಿ ಅಹೋರಾತ್ರಿ ಧರಣಿ ನಡೆಯುತ್ತಿದೆ. ಈ ಧರಣಿಯಲ್ಲಿ ಯಡಿಯೂರಪ್ಪನವರ ಪರಮಾಪ್ತೆ ಮತ್ತು ಬಿಎಸ್ವೈ ತಮ್ಮ ರಾಜಕೀಯ ಗುರುವೆಂದೇ ಹಲವು ಬಾರಿ ಹೇಳಿಕೊಂಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಣಿಸಿಕೊಂಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಧರಣಿಯಲ್ಲಿ ಕುಳಿತು ಹೊಸ ಸಂದೇಶವನ್ನ ರವಾನಿಸಿದ್ದಾರೆ. ಒಂದ್ ಕಾಲದಲ್ಲಿ ಯಡಿಯೂರಪ್ಪ ಎಲ್ಲೇ ಹೋದ್ರೂ ಅಲ್ಲಿ ಶೋಭಾ ಕರಂದ್ಲಾಜೆ ಇರುತ್ತಿದ್ದರು.. ಆದ್ರೆ 2019ರಲ್ಲಿ ಯಡಿಯೂರಪ್ಪ ನಾಲ್ಕನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ರೋ.. ಅಲ್ಲಿಂದ ನಂತರ ನಿಧಾನಕ್ಕೆ ಯಡಿಯೂರಪ್ಪ ಅವರಿಂದ ಶೋಭಾರನ್ನು ದೂರವಿಡುವ ಕೆಲಸ ವ್ಯವಸ್ಥಿತವಾಗಿ ಬಿಜೆಪಿಯಲ್ಲಿ ನಡೆದಿತ್ತು ಎಂಬ ಮಾತು ಗುಟ್ಟಾಗಿಯೇನೂ ಉಳಿದಿಲ್ಲ.. ಇದಾದ ನಂತರ ಯಾವಾಗ ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಖಾಡಕ್ಕೆ ಇಳಿದ್ರೋ ಅಲ್ಲಿಂದ ನಂತರ ಶೋಭಾ ಮತ್ತು ಯಡಿಯೂರಪ್ಪ ಮತ್ತಷ್ಟು ದೂರ ದೂರವಾದ್ರೂ..2019 ರಲ್ಲಿ ಬಿಎಸ್ವೈ ಸಿಎಂ ಆಗಿದ್ದಾಗ ಅಕ್ಕಪಕ್ಕನೂ ಶೋಭಾ ಕಾಣಿಸಿಕೊಳ್ಳಬಾರದು ಅಂತಾ ವಿಜಯೇಂದ್ರ ಹೇಳಿದ್ದಾರೆ, ಹಾಗಾಗಿ ಅವರು ಕಾಣಿಸಿಕೊಂಡಿಲ್ಲ ಅನ್ನೋ ಮಾತು ಕೇಳಿ ಬಂದಿತ್ತು.. ನಂತ್ರ ಇವರಿಬ್ಬರು ಎಲ್ಲೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿಲ್ಲ. ಆದ್ರೂ ಬಿಎಸ್ವೈ ಜೊತೆ ಶೋಭಾ ಕರಂದ್ಲಾಜೆಗೆ ಬಿಡಿಸಲಾಗದ ನಂಟಿತ್ತು… ಆದ್ರೆ ಈಗ ಯತ್ನಾಳ್ ಜೊತೆ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಡಿಯೂರಪ್ಪನವರ ಕುಟುಂಬದ ಜೊತೆಗಿನ ನಂಟು ಸಂಪೂರ್ಣ ಕಳಚಿ ಹೋಯ್ತಾ ಅನ್ನೋ ಮಾತು ಕೇಳಿ ಬರ್ತಿದೆ.
ಇದಕ್ಕೆ ಪೂರಕ ಎನ್ನುವಂತೆ ಯತ್ನಾಳ್ ನೀಡಿರುವ ಹೇಳಿಕೆಯೂ ಅದೇ ದಾಟಿಯಲ್ಲಿದೆ. “ನಾನು ಮತ್ತು ಶೋಭಾ ಕರಂದ್ಲಾಜೆ ಒಟ್ಟಾಗಿ ಧರಣಿಯಲ್ಲಿ ಕೂತಿರುವುದು, ನಮ್ಮ ಪಕ್ಷದ ಹಲವು ನಾಯಕರಿಗೆ ಆಶ್ಚರ್ಯವನ್ನು ತಂದಿರಬಹುದು. ನಾವಿಬ್ಬರೇ, ಕರ್ನಾಟಕದ ಭವಿಷ್ಯದ ಮುಂದಿನ ನಾಯಕರು” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಆ ಮೂಲಕ, ಸಂದೇಹಕ್ಕೆ ಇನ್ನಷ್ಟು ತುಪ್ಪ ಸುರಿದಿದ್ದಾರೆ.
ಯತ್ನಾಳ್ – ಶೋಭಾ ಪ್ಲ್ಯಾನ್ ಏನು?
ವಿಜಯೇಂದ್ರ ಅವರು ಅಧ್ಯಕ್ಷರಾಗಿ ಇರುವವರೆಗೆ, ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಯತ್ನಾಳ್ ಹೇಳಿರುವುದು ಒಂದು ಕಡೆ. ಲೋಕಸಭಾ ಚುನಾವಣೆಯ ನಂತರ ಒಮ್ಮೆಯೂ ಶೋಭಾ, ವಿಜಯೇಂದ್ರ ಅವರನ್ನು ಭೇಟಿಯಾಗದೇ ಇರುವುದು ಇನ್ನೊಂದು ಕಡೆ. ಹಾಗಾಗಿ, ಯತ್ನಾಳ್ – ಶೋಭಾ ಒಟ್ಟಿಗೆ ಧರಣಿಯಲ್ಲಿ ಕಾಣಿಸಿಕೊಂಡಿರುವುದು ರಾಜ್ಯಾ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಯಡಿಯೂರಪ್ಪ ನೆರಳಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಶೋಭಾ, ಬಿಎಸ್ವೈ ಸಿಎಂ ಆದಾಗ ಮಂತ್ರಿಯಾಗಿ ಗುರುತಿಸಿಕೊಂಡಿದ್ರು. ಇದು ಪಕ್ಷದ ಕೆಲವರ ಕೆಂಗಣ್ಣಿಗೆ ಕಾರಣವಾಗಿತ್ತು. ಪಕ್ಷದಲ್ಲೇ ಇವರ ಬಗ್ಗೆ ಎಷ್ಟೇ ಟೀಕೆ ಬಂದ್ರೂ ಯಾವುದಕ್ಕೂ ಇಬ್ಬರು ತಲೆಕೆಡಿಸಿಕೊಂಡಿರಲ್ಲ. ಶೋಭಾ ಕರಂದ್ಲಾಜೆಯವರನ್ನು 2010ರಲ್ಲಿ ತಮ್ಮ ಕ್ಯಾಬಿನೆಟ್‌ನಿಂದ ಕೈಬಿಡುವಂತೆ ಬಿಜೆಪಿಯ ರೆಡ್ಡಿ ಸಹೋದರರು ಷರತ್ತು ಹಾಕಿದ್ದಾಗ, ಯಡಿಯೂರಪ್ಪನವರು ಬಹಿರಂಗವಾಗಿಯೇ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದರು ಅಂದರೆ ಅವರಿಬ್ಬರ ನಡುವಿನ ವಿಶ್ವಾಸ ಯಾವ ಬಗೆಯದ್ದು ಎಂಬುದು ರಾಜ್ಯದ ಜನರಿಗೂ ಅರ್ಥವಾಗಿತ್ತು. ಹೀಗೆ ಒಂದು ಕಾಲದಲ್ಲಿ ಯಡಿಯೂರಪ್ಪನವರ ಉತ್ತರಾಧಿಕಾರಿಯಂತೆ ಶೋಬಾ ಕರಂದ್ಲಾಜೆ ಇದ್ದರು. ಆದ್ರೆ ಇದೇ ವಿಚಾರ ವಿಜಯೇಂದ್ರ ಅವರ ಸಿಟ್ಟಿಗೆ ಕಾರಣವಾಗಿ, ಬಿಎಸ್ವೈಯಿಂದ ಶೋಭಾ ಅವರನ್ನ ದೂರ ಇರಿಸಲಾಯ್ತು ಶೋಭಾ ಕರಂದ್ಲಾಜೆಯನ್ನ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಕಳಿಸಿ, ದೂರ ದೂರ ಮಾಡಲಾಗಿತ್ತು. ಇಬ್ಬರ ಸಂಪರ್ಕವನ್ನ ಕಡಿತಗೊಳಿಸುವಲ್ಲಿ ವಿಜಯೇಂದ್ರ ಯಶಸ್ವಿಯಾದ್ರು. ಆದ್ರೆ ಬಹಳ ತಾಳ್ಮೆಯಿಂದಲೇ ಇದ್ದ ಶೋಭಾ ಕರಂದ್ಲಾಜೆ, ನಿಧಾನಕ್ಕೆ ಅವಕಾಶ ನೋಡಿ, ಕೇಂದ್ರ ನಾಯಕರ ವಿಶ್ವಾಸ ಗಳಿಸಿ ಕೇಂದ್ರದಲ್ಲಿ ಮಂತ್ರಿಯಾಗಿದ್ರು. ಈ ನಡುವೆ ಹೋದಲ್ಲಿ ಬಂದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಬೆಂಕಿ ಉಗುಳುವ ಯತ್ನಾಳ್ ಬಣವನ್ನ ಶೋಭಾ ಸೇರಿಕೊಂಡಿದ್ದಾರೆ. ಯತ್ನಾಳ್ ಮತ್ತು ಶೋಭಾ ಕಟ್ಟಾ ಸಂಘಪರಿವಾರದ ನಾಯಕರು. ಅಷ್ಟೇ ಅಲ್ಲ ಹಿಂದುತ್ವ ಪ್ರತಿಪಾದಕರು, ಜೊತೆಗೆ ಈಗ ವಿಜಯೇಂದ್ರ ವಿರೋಧಿ ಬಣವಾಗಿ ನಿಲ್ಲುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ. ಅಪ್ಪನ ನೇರಳಲ್ಲಿ ಬೆಳದು ಪಕ್ಷಕ್ಕಾಗಿ ದುಡಿಯುತ್ತಿರೋ ನಾಯಕರನ್ನ ಸೈಡ್ಲೈನ್ ಮಾಡ್ತಿರೋ ವಿಜಯೇಂದ್ರ ಅವರ ಹಾದಿ ಬಂದ್ ಮಾಡೋಕೆ ಯತ್ನಾಳ್ ಮತ್ತು ಶೋಭಾ ಒಂದಾಗಿದ್ದಾರಾ ಅನ್ನೋ ಅನುಮಾನ ಮೂಡುವುದು ಸಹಜ.
ಶೋಭಾ-ಯತ್ನಾಳ್ ಒಂದಾಗಲು ಹೈಕಮಾಂಡ್ ಸೂಚನೆ?
ಇದೇ ಈಗಿರುವ ಮತ್ತೊಂದು ಬಲವಾದ ಅನುಮಾನ.. ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾದ್ಮೇಲೆ ಕಮಲ ಪಕ್ಷಕ್ಕೆ ಹೇಳಿಕೊಳ್ಳುವಂತಹ ಲಾಭವೇನೂ ಆಗಿಲ್ಲ.. ಹೋಗ್ಲಿ ಸಂಘಟನೆಯಲ್ಲಾದ್ರೂ ಬಲ ಹೆಚ್ಚಾಗ್ತಿದ್ಯಾ ಅಂತ ನೋಡಿದ್ರೆ, ದಿನಕ್ಕೊಬ್ಬರಂತೆ ಬಂಡಾಯದ ಮಾತುಗಳನ್ನಾಡುತ್ತಾ.. ವಿಜಯೇಂದ್ರ ಅವರ ನಾಯಕತ್ವವನ್ನೇ ಪ್ರಶ್ನಿಸುತ್ತಿದ್ದಾರೆ.. ಇದ್ರಿಂದಾಗಿಯೇ ಯತ್ನಾಳ್ ಆರಂಭಿಸಿದ ವಕ್ಫ್ ಹೋರಾಟದಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಲು ಹೆಚ್ಚಿನ ಅವಕಾಶವಿದೆ ಎಂದು ಗುರುತಿಸಿದ ಹೈಕಮಾಂಡ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಈ ವಿಚಾರದಲ್ಲಿ ಹೋರಾಟಕ್ಕೆ ಕಳಿಸಿದೆಯಾ ಎಂಬ ಚರ್ಚೆ ಶುರುವಾಗಿದೆ.. ಅದರಲ್ಲೂ ಮೂರು ದಿನಗಳಿಂದ ಅಹೋರಾತ್ರಿ ಧರಣಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಕಚೇರಿಯ ಕೆಲಸ ಕಾರ್ಯ ಬಿಟ್ಟು ಕೂರಬೇಕು ಅಂದ್ರೆ ಅದು ಸುಮ್ಮನೆ ಮಾತಲ್ಲ.. ಅಲ್ಲದೆ ಯತ್ನಾಳ್ ಮತ್ತು ಶೋಭಾ , ಲಿಂಗಾಯತ ಹಾಗೂ ಒಕ್ಕಲಿಗ ಕಾಂಬಿನೇಷನ್ ಆಗಿರೋದ್ರಿಂದ ಬಿಜೆಪಿ ಭವಿಷ್ಯದ ನಾಯಕತ್ವವನ್ನು ರೂಪಿಸುವ ಕೆಲಸಕ್ಕೆ ಕೈಹಾಕಿರುವ ಸಾಧ್ಯತೆ ದಟ್ಟವಾಗಿದೆ.. ಏನೇ ಆದ್ರೂ ವಕ್ಫ್ ಹೋರಾಟದ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಕಂಗೆಡಿಸುತ್ತಿರುವ ಬಿಜೆಪಿಯ ಹೋರಾಟದ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಾಳ್ ಹಾಗೂ ಶೋಭಾ ಕರಂದ್ಲಾಜೆ ಮುಂದಾಗಿರುವುದರಲ್ಲಿ ರಾಜಕೀಯದ ದೊಡ್ಡ ಗುರಿ ತಲುಪುವ ಉದ್ದೇಶ ಇರೋದಂತೂ ಸ್ಪಷ್ಟ.