ಮಹಾ ಶಿವರಾತ್ರಿ ಆಚರಣೆ ಶುರುವಾಗಿದ್ದೇಕೆ? – ಜಾಗರಣೆಯ ಮಹತ್ವವೇನು?

ಮಹಾ ಶಿವರಾತ್ರಿ ಆಚರಣೆ ಶುರುವಾಗಿದ್ದೇಕೆ? – ಜಾಗರಣೆಯ ಮಹತ್ವವೇನು?

ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ…’ ಎಂಬುದು, ಶಿವ ಭಕ್ತರ ಭಕ್ತಿಯ ಮಾತು. ಓಂ ನಮಃ ಶಿವಾಯ’ ಎಂದು ಭಕ್ತಿಯಿಂದ ಪಠಿಸುತ್ತಿದ್ದರೆನೇ ಮನಸ್ಸಿನಲ್ಲಿ ಉಲ್ಲಾಸ, ಸಮಾಧಾನದ ಭಾವ ಮೂಡುತ್ತದೆ. ಶಿವನ ಮಹಿಮೆ ಕೊಂಡಾಡುವ ಹಬ್ಬವೇ ಶಿವರಾತ್ರಿ. ಹಾಗಾದರೆ ಶಿವರಾತ್ರಿ ಹಬ್ಬ ಶುರುವಾಗಿದ್ದು ಹೇಗೆ? ಅಂದೇ ಏಕೆ ಶಿವನ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆಯಿದೆ? ವೈಜ್ಞಾನಿಕ ಕಾರಣವೇನು? ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಹೆಗಡೆ ಹಳೇ ವರಸೆ – ಸಂಸದ ಅನಂತಕುಮಾರ್ ಹೆಗಡೆ ಸರ್ವಾಧಿಕಾರಿ ವರ್ತನೆ ಬಿಜೆಪಿಗೆ ಮುಜುಗರ

ಶಿವರಾತ್ರಿಗೆ ಹಲವು ಪುರಾಣಗಳ ಪ್ರತೀತಿಯೂ ಇದೆ.  ಪ್ರತಿ ವರ್ಷ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು, ರಾತ್ರಿ ಸಮಯದಲ್ಲಿ ಶಿವ, ಪಾರ್ವತಿ ದೇವಿಯ ಜೊತೆ ಭೂಮಿಗೆ ಬರುತ್ತಾನೆ. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಯಾರು ಪೂಜಿಸುತ್ತಾರೋ.. ಶ್ರದ್ಧಾ ಭಕ್ತಿಯಿಂದ ಶಿವನ ಆರಾಧನೆ ಮಾಡುತ್ತಾರೋ.. ಅಂತವರ ಪಾಪಗಳು ಪರಿಹಾರವಾಗುತ್ತವೆ ಎನ್ನಲಾಗುತ್ತದೆ.

ಸ್ಕಂದ ಪುರಾಣದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ವಿವರಿಸಲಾಗಿದೆ. ಶಿವರಾತ್ರಿಯ ಸಮಯ ಪರಶಿವನ ಪೂಜೆಗೆ ಬಹು ಪ್ರಶಸ್ತ ಕಾಲ. ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದದೊಂದಿಗೆ ಸ್ಪೂರ್ತಿ ಹುಟ್ಟಿಸುವ ವಾತಾವರಣ ಕಾಣಬಹುದು. ಈ ಪರ್ವಕಾಲದಲ್ಲಿ ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ. ಶಿವರಾತ್ರಿಯ ಮತ್ತೊಂದು ವಿಶೇಷವೆಂದರೆ, ಶಿವನು ಪಾರ್ವತಿ ದೇವಿಯನ್ನು ವಿವಾಹವಾಗಿದ್ದು ಶಿವರಾತ್ರಿಯ ದಿನವೇ. ಪಾರ್ವತಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ. ಶಿವನ ಜಪ ಮಾಡಿ ಶಿವನನ್ನು ಒಲಿಸಿಕೊಂಡಳು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಅಲ್ಲದೆ ದೇವತೆಗಳು ಮತ್ತು ಅಸುರರು, ಅಮೃತಕ್ಕಾಗಿ ಸಮುದ್ರಮಂಥನ ಮಾಡುವಾಗ ಮೊದಲು ಹಾಲಾಹಲ ಉತ್ಪತ್ತಿಯಾಯಿತು. ಆದರೆ ದೇವತೆಗಳು ಮತ್ತು ಅಸುರರು ಆ ಹಾಲಾಹಲವನ್ನು ಕುಡಿಯಲು ಮುಂದಾಗಲಿಲ್ಲ. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಹೀಗಾಗಿ ಲೋಕಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ. ಅದೇ ಸಮಯಕ್ಕೆ ಪತ್ನಿ ಪಾರ್ವತಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು. ಹಾಗಿದ್ದರೂ ವಿಷ ದೇಹ ಸೇರುವ ಅಪಾಯವಿತ್ತು. ಯಾಕೆಂದರೆ ವ್ಯಕ್ತಿ ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದ್ರು. ಇದೇ ಕಾರಣಕ್ಕೆ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಈ ಸಮಯದಲ್ಲಿ ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭವಾಗುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿ, ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಇಂತಹ ಸಮಯದಲ್ಲಿ ನಮ್ಮ ದೇಹದಲ್ಲೂ ಬಹಳಷ್ಟು ಬದಲಾವಣೆಗಳಾಗುತ್ತವೆ. ಉಸಿರಾಟದ ತೊಂದರೆ ನೆಗಡಿ, ಕೆಮ್ಮು, ಶೀತ ಮತ್ತಿತರೆ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದೇ ಸಮಯದಲ್ಲಿ ಶಿವರಾತ್ರಿಯಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಬಿಲ್ವಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುತ್ತದೆ. ಹೀಗಾಗಿ ಶಿವರಾತ್ರಿಯಂದು ಶಿವನ ಆರಾಧನೆ‌ ಮಾಡುತ್ತಾ ಬಿಲ್ವಪತ್ರೆ ಸಮರ್ಪಿಸಿದರೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

Shwetha M