ಶಿವಣ್ಣ ಇನ್ಮುಂದೆ ಕ್ಯಾನ್ಸರ್ ಫ್ರೀ – ಸರ್ಜರಿಗೂ ಮುನ್ನ ಕಾಡಿತ್ತು ಆ ಭಯ!
ಹೊಸ ವರ್ಷದ ದಿನವೇ ಕನ್ನಡ ಚಿತ್ರರಂಗಕ್ಕೆ ಶುಭಸುದ್ದಿ ಸಿಕ್ಕಿದೆ. ದೊಡ್ಮನೆ ದೊಡ್ಡಮಗ ಶಿವರಾಜ್ ಕುಮಾರ್ ಸರ್ಜರಿ ಬಳಿಕ ಚೇತರಿಸಿಕೊಂಡಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮೊಳಗಿನ ಭಯವನ್ನ ಹೊರ ಹಾಕಿರೋ ಶಿವಣ್ಣ ಕಮ್ ಬ್ಯಾಕ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಆನಂದನಾಗಿ ಕನ್ನಡಚಿತ್ರರಂಗಕ್ಕೆ ಕಾಲಿಟ್ಟಿದ್ದ ಶಿವಣ್ಣ ಜನುಮದ ಜೋಡಿಯಾಗಿ ಮೆರೆದಿದ್ರು. ಹಾರ್ಡ್ ಮೂವಿಗಳಿಗೆ ಓಂಕಾರ ಹಾಕಿ ಅಣ್ಣತಂಗಿ ಬಾಂಧವ್ಯವನ್ನ ಇಡೀ ಜಗತ್ತಿಗೆ ಸಾರಿದ್ರು. ಕ್ಲಾಸ್ ಹಾಗೂ ಮಾಸ್ ಎರಡರಲ್ಲೂ ಮಿಂಚಿದ್ದ ಶಿವಣ್ಣಗೆ ಇತ್ತೀಚೆಗೆ ಆರೋಗ್ಯ ಕೈಕೊಟ್ಟಿತ್ತು. ಅದೂ ಕೂಡ ಕ್ಯಾನ್ಸರ್ ಅನ್ನೋ ಹೆಮ್ಮಾರಿಗೆ ಸಿಲುಕಿದ್ರು. ಇದೀಗ ಸರ್ಜರಿ ಮುಗಿದಿದೆ. ಶಿವಣ್ಣ ಚೇತರಿಸಿಕೊಂಡಿದ್ದಾರೆ. ತಮ್ಮ ಹೆಲ್ತ್ ಬಗ್ಗೆ ತಾವೇ ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ : ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣ ಮೊದಲ ಮಾತು – ಆರೋಗ್ಯ ಹೇಗಿದೆ?
ಶಿವಣ್ಣಗೆ ಅನಾರೋಗ್ಯ ಅಂದಾಗ ಹೆಚ್ಚೇನು ಜನ ತಲೆಕೆಡಿಸಿಕೊಂಡಿರಲಿಲ್ಲ. ಬಟ್ ಮೂತ್ರಕೋಶ ಕ್ಯಾನ್ಸರ್ ಎಂದಾಗ ಇಡೀ ಕರುನಾಡೇ ಶಾಕ್ ಆಗಿತ್ತು. ಅವ್ರ ಸರ್ಜರಿ ದಿನ ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ಪೂಜೆಯೂ ನಡೆದಿದೆ. ಇದೀಗ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಅಮೆರಿಕದಲ್ಲಿ ನಡೆದಿದ್ದ ಸರ್ಜರಿ ಸಕ್ಸಸ್ಫುಲ್ ಆಗಿದ್ದು, ಇನ್ಮುಂದೆ ಶಿವಣ್ಣ ಕ್ಯಾನ್ಸರ್ ಫ್ರೀ ಆಗಿದ್ದಾರೆ. ಇದನ್ನ ಖುದ್ದು ಗೀತಾ ಶಿವರಾಜ್ ಕುಮಾರ್ ಅವ್ರೇ ಹೇಳಿದ್ದಾರೆ.
ಇನ್ನು ಡಿಸೆಂಬರ್ 18ರಂದು ಶಿವಣ್ಣ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ರು. ಅದಕ್ಕೂ ಮುನ್ನ ಸ್ಯಾಂಡಲ್ವುಡ್ನ ನಟ, ನಟಿಯರು ಅವ್ರ ಮನೆಗೆ ತೆರಳಿ ಧೈರ್ಯ ತುಂಬಿದ್ರು. ಇನ್ನು ಸರ್ಜರಿಗೂ ಮುನ್ನ ಶಿವಣ್ಣ ಕೂಡ ಭಯಗೊಂಡಿದ್ರು. ಫುಲ್ ಎಮೋಷನ್ ಕೂಡ ಆಗಿದ್ರಂತೆ. ಬಟ್ ಈ ಭಯ ಎಲ್ಲವನ್ನು ನೀಗಿಸೋಕೆ ಅಭಿಮಾನಿಗಳು, ಕೋಆರ್ಟಿಸ್ಟ್ಗಳು ಹಾಗೇ ಡಾಕ್ಟರ್ಸ್ ಇದ್ರು. ಇದೇ ವೇಳೆ ತಮಗೆ ಕ್ಯಾನ್ಸರ್ ಅಂತಾ ಗೊತ್ತಾದ್ಮೇಲೆ 45 ಸಿನಿಮಾದ ಶೂಟಿಂಗ್ ಹೇಗೆ ಮಾಡಿದ್ನೋ ಗೊತ್ತೇ ಇಲ್ಲ. ಕ್ಲೈಮ್ಯಾಕ್ಸ್ನಲ್ಲಿ ಬರುವ ಫೈಟ್ ಹೇಗೆ ಮಾಡಿದ್ನೋ. ಆದ್ರೆ ಸರ್ಜರಿಗೆ ಹೊರಡೋ ಡೇಟ್ ಹತ್ರ ಬರ್ತಾ ಬರ್ತಾ ಭಯ ಶುರುವಾಯ್ತು. ಬಟ್ ಎಲ್ರೂ ಜೊತೆಯಲ್ಲಿದ್ರು ಎಂದ್ರು. ಗೀತಕ್ಕರ ಬಗ್ಗೆ ಮನಬಿಚ್ಚಿ ಮಾತನಾಡಿದ ಶಿವಣ್ಣ, ಜೀವನದಲ್ಲಿ ಗೀತಾ ಇಲ್ದೇ ಶಿವಣ್ಣ ಇಲ್ಲ. ಶಿವಣ್ಣ ಇಲ್ದೇ ಗೀತಾ ಇಲ್ಲ. ನನ್ನ ಮಗಳು ಸೇರಿದಂತೆ ಸಾಕಷ್ಟು ಜನ ಸಪೋರ್ಟಿವ್ ಆಗಿದ್ರು ಅಂತಾ ಜೊತೆಗೆ ಇದ್ದವರನ್ನೆಲ್ಲಾ ನೆನೆದ್ರು.
ಇನ್ನು ಶಿವಣ್ಣ ಆಪರೇಷನ್ ಬಗ್ಗೆ ಒಂದಷ್ಟು ಜನ್ರಿಗೆ ಕನ್ಫ್ಯೂಷನ್ಸ್ ಇತ್ತು. ಕಿಡ್ನಿ ಕಸಿ ಮಾಡಲಾಗಿದೆ ಎಂದು ಅನೇಕರು ತಪ್ಪಾಗಿ ತಿಳಿದುಕೊಂಡಿದ್ರು. ಆದರೆ ಅದು ಸುಳ್ಳು ಎಂದಿರುವ ಶಿವಣ್ಣ ಸತ್ಯ ಏನೆಂದರೆ ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನ ತೆಗೆದು ಹಾಕಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಕೃತಕ ಮೂತ್ರ ಪಿಂಡವನ್ನ ಅಳವಡಿಸಿದ್ದಾರೆ. ಇಷ್ಟೇ ಆಗಿದ್ದು ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಾವ ಪಾತ್ರಕ್ಕಾದರೂ ಸೈ ಎನ್ನುವಂಥಾ ನಟ ಶಿವಣ್ಣ. ಬಹುಶಃ ಡಾ.ರಾಜ್ ಕುಮಾರ್ ಅವರನ್ನು ಬಿಟ್ರೆ ವೆರೈಟಿ ಪಾತ್ರಗಳನ್ನು ಮಾಡಿದ ಮತ್ತೋರ್ವ ಸ್ಟಾರ್ ಶಿವಣ್ಣ. ಇಂಥಾ ಶಿವಣ್ಣಗೆ ಕ್ಯಾನ್ಸರ್ ಎಂದಾಗ ಇಡೀ ಸ್ಯಾಂಡಲ್ವುಡ್ ಜೊತೆ ಕರುನಾಡೂ ಕೂಡ ಆತಂಕಗೊಂಡಿತ್ತು. ಆದ್ರೀಗ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿದಿದೆ. ಆಪರೇಷನ್ ಬಳಿಕ ಚೇತರಿಸಿಕೊಳ್ಳುತ್ತಿರುವ ಶಿವಣ್ಣ ಅವರ ಆರೋಗ್ಯದ ಎಲ್ಲ ವರದಿಗಳು ನೆಗೆಟಿವ್ ಬಂದಿವೆ. ಕ್ಯಾನ್ಸರ್‌ನಿಂದ ಮುಕ್ತಿ ಪಡೆದಿದ್ದಾರೆ.