ಶಿವಾಜಿ ಪ್ರತಿಮೆ ಹೆಸರಲ್ಲಿ ‘ಪ್ರತಿಷ್ಠೆ’ ಪಾಲಿಟಿಕ್ಸ್ – ರಮೇಶ್ ಜಾರಕಿಹೊಳಿ Vs ಲಕ್ಷ್ಮೀ ಹೆಬ್ಬಾಳ್ಕರ್ ವಾರ್!
ಬೆಳಗಾವಿ ಜಿಲ್ಲೆ. ಕರ್ನಾಟಕದಲ್ಲಿ ಅತೀ ಹೆಚ್ಚು ಅಂದ್ರೆ 18 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ದೊಡ್ಡ ಜಿಲ್ಲೆ. ಆದ್ರೆ ಇಲ್ಲಿ ಚುನಾವಣೆ ಅಂತಾ ಬಂದ್ರೆ 17 ಕ್ಷೇತ್ರಗಳದ್ದೇ ಒಂದು ಲೆಕ್ಕವಾದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ್ದೇ ಮತ್ತೊಂದು ಲೆಕ್ಕ. ಯಾಕಂದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಡುವಿನ ಬದ್ಧ ವೈರತ್ವ. ಹೇಗಾದ್ರೂ ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್ನ್ನ ಈ ಬಾರಿಯ ಎಲೆಕ್ಷನ್ನಲ್ಲಿ ಸೋಲಿಸಲೇಬೇಕು ಅಂತಾ ರಮೇಶ್ ಜಾರಕಿಹೊಳಿ ಪಣ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದೆ. ಅದೂ ಕೂಡ ಶಿವಾಜಿ ಪ್ರತಿಮೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಸಹಯೋಗದಲ್ಲಿ 4.5 ಕೋಟಿ ವೆಚ್ಚದಲ್ಲಿ ರಾಜಹಂಸಗಡ ಕೋಟೆಯನ್ನ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಭಿವೃದ್ಧಿ ಭಾಗವಾಗಿ 50 ಲಕ್ಷ ವೆಚ್ಚದಲ್ಲಿ 43 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಷ್ಯ ಏನಂದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮರಾಠಿ ಮತದಾರದಿದ್ದಾರೆ. ಹೀಗಾಗಿ ಮರಾಠಿ ಮತದಾರರನ್ನ ಸೆಳೆಯಲು ಪ್ರತಿಮೆ ಪಾಲಿಟಿಕ್ಸ್ ಶುರುವಾಗಿದೆ. ಮಾರ್ಚ್ 5ರಂದು 20 ಸಾವಿರಕ್ಕೂ ಹೆಚ್ಚು ಜನ್ರನ್ನ ಸೇರಿಸಿ ಶಿವಾಜಿ ಪ್ರತಿಮೆ ಉದ್ಘಾಟನೆ ಮಾಡಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ಲ್ಯಾನ್ ಮಾಡಿದ್ರು.
ಇದನ್ನೂ ಓದಿ : ವಿದೇಶಿ ಸಿನಿಮಾ ನೋಡಿದ್ರೆ ಹುಷಾರ್ – ಮಕ್ಕಳಿಗೆ 5 ವರ್ಷ ಜೈಲು.. ಹೆತ್ತವರಿಗೆ 6 ತಿಂಗಳು ಶಿಕ್ಷೆ..!
ಲಕ್ಷ್ಮೀಗೆ ಟಕ್ಕರ್ ಕೊಡಲು ರಮೇಶ್ ಜಾರಕಿಹೊಳಿ ಜಿಲ್ಲಾಡಳಿತದಿಂದ ಉದ್ಘಾಟನಾ ಕಾರ್ಯಕ್ರಮ ಮಾಡಿಸಿ ಇವತ್ತೇ ಪುತ್ಥಳಿ ಲೋಕಾರ್ಪಣೆ ಮಾಡಿಸಿದ್ದಾರೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಕರೆಸಿ ಶಿವಾಜಿ ಪ್ರತಿಮೆಯನ್ನ ಲೋಕಾರ್ಪಣೆಗೊಳಿಸಿದ್ದಾರೆ. ಇವತ್ತಿನ ಕಾರ್ಯಕ್ರಮಕ್ಕೆ ರಮೇಶ್ ಜಾರಕಿಹೊಳಿ ಕೂಡ ಭಾಗಿಯಾಗಿದ್ರು. ಇನ್ನು ತನ್ನದೇ ಕ್ಷೇತ್ರವಾದ್ರೂ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೈರಾಗಿದ್ರು. ರಮೇಶ್ ಜಾರಕಿಹೊಳಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಮಾರ್ಚ್ 5ರಂದು ಮತ್ತೆ ಶಿವಾಜಿ ಪ್ರತಿಮೆ ಲೋಕಾರ್ಪಣೆಗೊಳಿಸಲು ಮುಂದಾಗಿದ್ದಾರೆ.
ಮತ್ತೊಂದೆಡೆ ರಾಜಹಂಸಗಡ ಕೋಟೆಯ ಸುತ್ತಮುತ್ತ ಫ್ಲೆಕ್ಸ್ ಪಾಲಿಟಿಕ್ಸ್ ಶುರುವಾಗಿದೆ. ಬಿಜೆಪಿ ಬೆಂಗಲಿಗರು ಇವತ್ತು ಪ್ರತಿಮೆ ಉದ್ಘಾಟನೆ ಹಿನ್ನೆಲೆ ಸಿಎಂ ಭಾವಚಿತ್ರ ಸಹಿತ ಬ್ಯಾನರ್ ಹಾಕಿದ್ದಾರೆ. ಮತ್ತೊಂದೆಡೆ ಮಾರ್ಚ್ 5ರಂದು ಪುತ್ಥಳಿ ಲೋಕಾರ್ಪಣೆ ಮಾಡೋದಾಗಿ ಬ್ಯಾನರ್ ಹಾಕಿದ್ದಾರೆ. ಆದ್ರೆ ಕೆಲ ಕಿಡಿಗೇಡಿಗಳು ಲಕ್ಷ್ಮೀ ಪರ ಹಾಕಿದ್ದ ಬ್ಯಾನರ್ ಹರಿದು ಹಾಕಿದ್ದು, ಅವುಗಳನ್ನ ತೆಗೆದು ಬೇರೆ ಬ್ಯಾನರ್ ಗಳನ್ನ ಹಾಕಲಾಗಿದೆ. ಒಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಮತಭೂಮಿಯಲ್ಲಿ ಶಿವಾಜಿ ಪ್ರತಿಮೆ ಕ್ರೆಡಿಟ್ ವಾರ್ ದೊಡ್ಡ ಸಮರಕ್ಕೆ ಕಾರಣವಾಗಿದ್ದು, ಚುನಾವಣೆಯಲ್ಲಿ ಇಬ್ಬರಲ್ಲಿ ಈ ಮೂರ್ತಿ ಯುದ್ಧ ಯಾರಿಗೆ ವರವಾಗುತ್ತೆ ಎಂದು ಕಾದು ನೋಡಬೇಕು.