ಊರಿನ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತಾ? – ಯುವಕನ ಬೆನ್ನಿಗೆ ಕಚ್ಚಿದ ಗ್ರಾಮ ಪಂಚಾಯತಿ ಅಧ್ಯಕ್ಷ!

ಗ್ರಾಮದಲ್ಲಿ ಏನಾದ್ರೂ ಸಮಸ್ಯೆ ಇದ್ರೆ ಗ್ರಾಮ ಪಂಚಾಯತ್ ಗಮನಕ್ಕೆ ತರಲಾಗುತ್ತದೆ. ಸಮಸ್ಯೆ ಬಗೆಹರಿಸುವಂತೆ ಕೇಳಿಕೊಳ್ಳಲಾಗುತ್ತದೆ. ಆದ್ರೀಗ ಇಲ್ಲೊಂದು ಕಡೆ ಗ್ರಾಮದ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ ಯುವಕನಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕಚ್ಚಿದ್ದಾನೆ. ಸದ್ಯ ಆತನ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ! – ಶಾಲೆಗೆ ತೆರಳುತ್ತಿದ್ದ 5 ಮಕ್ಕಳಿಗೆ ಗಂಭೀರ ಗಾಯ!
ಈ ವಿಲಕ್ಷಣಕಾರಿ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ನಡೆದಿದೆ. ಶಿಂಧೋಗಿ ಗ್ರಾಮ ಪಂಚಾಯತಿ ಅಧ್ಯಕ್ಷ ದುರ್ಗಪ್ಪ ಟೋಪೋಜಿ ಹಾಗೂ ಆತನ ಸಂಬಂಧಿಗಳು, ಗ್ರಾಮದ ನಿವಾಸಿ ಹನುಮಂತ ಕರೀಕಟ್ಟಿ (30) ಎಂಬ ಯುವಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಬೆನ್ನು ಕಚ್ಚಿರುವುದಾಗಿ ಆರೋಪಿಸಲಾಗಿದೆ. ಘಟನೆ ಪಿಡಿಒ ಸಮ್ಮುಖದಲ್ಲೇ ನಡೆದಿದೆ ಎನ್ನುವುದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಹನುಮಂತ ಕರೀಕಟ್ಟಿ ಎಂಬಾತ ಶಾಲೆ ಪಕ್ಕದ ರಸ್ತೆಯ ಮೇಲೆ ನಿಂತಿರುವ ಚರಂಡಿ ನೀರಿನ ಸಮಸ್ಯೆಯನ್ನು ಪಿಡಿಒ ಗಮನಕ್ಕೆ ತಂದಿದ್ದ. ರಸ್ತೆ ಮೇಲೆ ನಿಂತ ಚರಂಡಿ ನೀರಿನಲ್ಲೇ ಮಕ್ಕಳು ಶಾಲೆ ಹಾಗೂ ಅಂಗನವಾಡಿಗೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ದುರಸ್ತಿ ಮಾಡುವಂತೆ ಮನವಿ ಮಾಡಿದ್ದಾನೆ. ಯುವಕ ಸಮಸ್ಯೆ ಹೇಳುತ್ತಿದ್ದಂತೆ ಕೋಪಗೊಂಡ ಪಂಚಾಯತಿ ಅಧ್ಯಕ್ಷ ದುರ್ಗಪ್ಪ ಟೋಪೋಜಿ, ದೂರುದಾರನ ಮೇಲೆ ಚಪ್ಪಲಿಯಿಂದ ಹಲ್ಲೆಗೈದು, ಬೆನ್ನು ಕಚ್ಚಿ ವಿಕೃತ ವರ್ತನೆ ತೋರಿದ್ದಾನೆ. ಅಧ್ಯಕ್ಷನೊಂದಿಗೆ ಆತನ ಸಂಬಂಧಿಗಳೂ ಸೇರಿ ಪಿಡಿಒ ಮುಂದೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಆರೋಪಿಗಳು ಹನುಮಂತನ ಮನೆಗೆ ನುಗ್ಗಿ, ಆತನ ತಾಯಿ ಹಾಗೂ ವೃದ್ಧ ಅಜ್ಜಿಯ ಮೇಲೂ ಬಡಿಗೆ ಮತ್ತು ಸಲಕಿಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಹನುಮಂತನ ತಾಯಿಯ ಮಂಗಳಸೂತ್ರವನ್ನು ಕಿತ್ತುಹಾಕಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ನಡೆದಿದ್ದ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ದ್ವೇಷ ಸಾಧಿಸಿ ಈ ಹಲ್ಲೆ ನಡೆಸಲಾಗಿದೆ ಎಂದು ಹನುಮಂತ ದೂರಿದ್ದಾರೆ. ಸದ್ಯ ಹಲ್ಲೆಯಲ್ಲಿ ಗಾಯಗೊಂಡ ಹನುಮಂತ ಹಾಗೂ ವೃದ್ಧೆಯನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೋಡಿರಿ

