ನಟಿ ಶಿಲ್ಪಾ ಶೆಟ್ಟಿ, ರಾಜ್ಕುಂದ್ರಾಗೆ ಬಿಗ್ ಶಾಕ್ – ಬರೋಬ್ಬರಿ 97 ಕೋಟಿ ಮೌಲ್ಯದ ಆಸ್ತಿ ಜಪ್ತಿ!
ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ. ಬಿಟ್ಕಾಯಿನ್ ಪೊಂಜಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಂಪತಿಗೆ ಸೇರಿದ 98 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಇಡಿ ಅಧಿಕಾರಿಗಳು ವಶಪಡೆದಿದ್ದಾರೆ.
ಇದನ್ನೂ ಓದಿ: ಸೌಜನ್ಯಗಾಗಿ ನೋಟಾ ಅಭಿಯಾನ! – ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆ!
2017ರಲ್ಲಿ 6600 ಕೋಟಿ ರೂಪಾಯಿಯನ್ನು ರಾಜ್ ಕುಂದ್ರಾ ಹಾಗೂ ಅವರ ಸಂಗಡಿಗರು ಬಿಟ್ಕಾಯಿನ್ ಮೂಲಕ ಸಂಪಾದಿಸಿದ್ದರು. ಜೊತೆಗೆ ತಿಂಗಳಿಗೆ ಶೇ. 10 ಪಾವತಿಸುವುದಾಗಿ ಜನರಿಗೆ ಆಮಿಷ ಒಡ್ಡಿದ್ದರು. ಇದನ್ನು ಬೃಹತ್ ಬಿಟ್ಕಾಯಿನ್ ಹಗರಣ ಎಂದು ಆರೋಪಿಸಲಾಗಿದೆ. ಬಿಟ್ಕಾಯಿನ್ ಪ್ರಕರಣದಿಂದ ರಾಜ್ ಕುಂದ್ರಾ ಪ್ರಸ್ತುತ 150 ಕೋಟಿ ಲಾಭ ಗಳಿಸುತ್ತಿದ್ದಾರೆ ಎಂದು ಇಡಿ ವರದಿಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಹುದಲ್ಲಿರುವ ಅವರ ಫ್ಲ್ಯಾಟ್, ಪುಣೆಯಲ್ಲಿರುವ ಬಂಗಲೆ, ರಾಜ್ ಕುಂದ್ರಾ ಹೆಸರಲ್ಲಿರುವ ಶೇರುಗಳನ್ನು ಜಪ್ತಿ ಮಾಡಲಾಗಿದೆ.
ಬಿಟ್ಕಾಯಿನ್ ಹಗರಣದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಹೆಸರಿತ್ತು. ಇದು ಸಾವಿರಾರು ಕೋಟಿ ರೂಪಾಯಿ ಹಗರಣ ಎನ್ನಲಾಗಿದೆ. ಈ ಪ್ರಕರಣದಲ್ಲಿ ಇಬ್ಬರಿಗೂ ಇಡಿ 2018ರಲ್ಲಿ ಸಮನ್ಸ್ ನೀಡಿತ್ತು. ಅವರನ್ನೂ ಪ್ರಶ್ನಿಸಲಾಯಿತು. ಆಗ ಈ ಪ್ರಕರಣದ ಪ್ರಮುಖ ಆರೋಪಿ ಅಮಿತ್ ಭಾರದ್ವಾಜ್ ಅವರನ್ನು ಬಂಧಿಸಲಾಗಿತ್ತು. ಈ ಹಗರಣವು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. gatbitcoin.com ಎಂಬ ವೆಬ್ಸೈಟ್ನಿಂದ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ. ಈ ಪ್ರಕರಣ ಕುಂದ್ರಾಗೆ ಸಂಬಂಧಿಸಿದ್ದು. ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಕುಂದ್ರಾ ಅಪರಾಧಿಯೇ ಅಥವಾ ಹೂಡಿಕೆದಾರನೇ ಎಂಬುದು ಸ್ಪಷ್ಟವಾಗಿಲ್ಲ.