1 ವರ್ಷ, 8,640 ಕಿ.ಮೀ ದೂರದ ಪ್ರಯಾಣ -ಕೇರಳದಿಂದ ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ಶಿಹಾಬ್ ಚೋಟ್ಟೂರ್..!

1 ವರ್ಷ, 8,640 ಕಿ.ಮೀ ದೂರದ ಪ್ರಯಾಣ -ಕೇರಳದಿಂದ ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ಶಿಹಾಬ್ ಚೋಟ್ಟೂರ್..!

ಇವತ್ತು ಕಷ್ಟದ ಪ್ರಯಾಣವನ್ನು ಯಾರು ತಾನೇ ಇಷ್ಟ ಪಡುತ್ತಾರೆ. ಆದಷ್ಟು ಸುಲಭವಾಗಿ ಆರಾಮವಾಗಿ ಪ್ರಯಾಣ ಮಾಡೋಣ ಎಂದು ಯೋಚಿಸುವ ಸಮಯವಿದು. ಹೀಗಿರುವಾಗ ತಮ್ಮ ಹಜ್ ಯಾತ್ರೆಗಾಗಿ ಕೇವಲ ಕಾಲ್ನಡಿಗೆಯ ಮೂಲಕವೇ ಮೆಕ್ಕಾ ತಲುಪಿರುವ ಅಪರೂಪದ ಸ್ಟೋರಿ ಒಂದಿದೆ. ಕೇರಳದ ವ್ಯಕ್ತಿಯೊಬ್ಬರು ತಮ್ಮ ರಾಜ್ಯದಿಂದ ಕೇವಲ ಕಾಲ್ನಡಿಗೆಯ ಮೂಲಕ ಮೆಕ್ಕಾಕ್ಕೆ ತಲುಪುತ್ತಾರೆ. ಇದಕ್ಕಾಗಿ ಅವರು ಒಂದು ವರ್ಷ (ಅಂದಾಜು 370 ದಿನಗಳು) ತೆಗೆದುಕೊಳ್ಳುತ್ತಾರೆ. ಶಿಹಾಬ್ ಚೋಟ್ಟೂರ್, 8,640 ಕಿ.ಮೀ ದೂರದ ಪ್ರಯಾಣದಲ್ಲಿ ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತು ಅಂತಿಮವಾಗಿ ಸೌದಿ ಅರೇಬಿಯಾ ತಲುಪಿದ್ದಾರೆ. ಯಾವುದೇ ವಾಹನಗಳನ್ನ ಬಳಸದೆ ಕೇವಲ ಕಾಲ್ನಡಿಗೆಯ ಮೂಲಕ ಶಿಹಾಬ್ ಚೋಟ್ಟೂರ್ ಈ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: ₹2 ಸಾವಿರಕ್ಕಾಗಿ ಅರ್ಜಿ ಸಲ್ಲಿಸುವ ಚಿಂತೆ ಬೇಡ – ಮನೆ ಬಾಗಿಲಿಗೇ ಬಂದು ಮಾಹಿತಿ ಪಡೆಯುತ್ತಾರೆ ಸಿಬ್ಬಂದಿ

ಕೇರಳದ ಮಲಪ್ಪುರಂ ಜಿಲ್ಲೆಯ ವಲಂಚೇರಿಯ  ಶಿಹಾಬ್ ಚೋಟ್ಟೂರ್, ಜೂನ್ 2, 2022 ರಂದು ಹಜ್ ಯಾತ್ರೆ ಮಾಡಲು ಸೌದಿ ಅರೇಬಿಯಾಕ್ಕೆ ಮ್ಯಾರಥಾನ್ ಪ್ರಯಾಣವನ್ನ ಆರಂಭಿಸಿ  ಈ ತಿಂಗಳು ಮೆಕ್ಕಾ ತಲುಪಿದರು. ಕಾಲ್ನಡಿಗೆಯ ಈ ಪ್ರಯಾಣದಲ್ಲಿ, ಶಿಹಾಬ್ ಅವರು ಭಾರತ, ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಅನ್ನು ದಾಟಿ ಮೇ ಎರಡನೇ ವಾರದಲ್ಲಿ ಕುವೈತ್‌ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು. ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ, ಶಿಹಾಬ್ ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾದ ಮದೀನಾಕ್ಕೆ ಹೋದರು. ಮೆಕ್ಕಾಗೆ ತೆರಳುವ ಮೊದಲು ಅವರು ಮದೀನಾದಲ್ಲಿ 21 ದಿನಗಳನ್ನು ಕಳೆಯುತ್ತಾರೆ. ಶಿಹಾಬ್ ಅವರು ಮದೀನಾ ಮತ್ತು ಮೆಕ್ಕಾ ನಡುವಿನ 440 ಕಿಮೀ ದೂರವನ್ನು ಒಂಬತ್ತು ದಿನಗಳಲ್ಲಿ ಪೂರ್ತಿಗೊಳಿಸುತ್ತಾರೆ. ತಾಯಿ ಜೈನಬಾ ಕೇರಳದಿಂದ ನಗರಕ್ಕೆ ಆಗಮಿಸಿದ ಬಳಿಕ ಶಿಹಾಬ್ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ತನ್ನ ಹಜ್ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಶಿಹಾಬ್ ಅವರು ದೇಶದ ಹಲವಾರು ರಾಜ್ಯಗಳ ಮೂಲಕ ನಡೆದು ವಾಘಾ ಗಡಿಯ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು. ಆದರೆ ಅವರು ವೀಸಾ ಹೊಂದಿಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ತಡೆಯುತ್ತಾರೆ. ಟ್ರಾನ್ಸಿಟ್ ವೀಸಾ ಪಡೆಯಲು ಅವರು ವಾಘಾದ ಶಾಲೆಯೊಂದರಲ್ಲಿ ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ಅಂತಿಮವಾಗಿ, ಫೆಬ್ರವರಿ 2023 ರಲ್ಲಿ, ಶಿಹಾಬ್ ಟ್ರಾನ್ಸಿಟ್ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಪಾಕಿಸ್ತಾನವನ್ನು ಪ್ರವೇಶಿಸಿದರು.  ಸೌದಿ ಅರೇಬಿಯಾಕ್ಕೆ ಅವರ ಪ್ರಯಾಣವು ಸ್ವಲ್ಪ ವಿರಾಮದ ನಂತರ ಪುನರಾರಂಭವಾಯಿತು. ನಾಲ್ಕು ತಿಂಗಳ ನಂತರ, ಶಿಹಾಬ್ ಚೋಟ್ಟೂರ್ ಹಜ್ ಯಾತ್ರೆಗಾಗಿ ಮೆಕ್ಕಾ ತಲುಪಿದರು.

suddiyaana