ಶಫಾಲಿ ವರ್ಮಾ ವಿಶ್ವದಾಖಲೆ ದ್ವಿಶತಕ – 20ನೇ ವಯಸ್ಸಲ್ಲಿ ಸಿಕ್ಸರ್ ಕ್ವೀನ್ ಸಿಡಿಲಬ್ಬರ
ಟೀಮ್ ಇಂಡಿಯಾ ಶೇರಿಣಿ ಶಫಾಲಿ

ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ರನ್ ಮಳೆ, ಗುಡುಗು ಸಿಡಿಲಿನ ಅಬ್ಬರದಂತೆ ಮೈದಾನ ಮೂಲೆ ಮೂಲೆಯಲ್ಲಿ ಸಿಕ್ಸ್ ಫೋರ್‌ಗಳ ಅಬ್ಬರಕ್ಕೆ ಸೌತ್ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡ ಗಡಗಡನೇ ನಡುಗಿ ಹೋಗಿದೆ. ಟೀಮ್ ಇಂಡಿಯಾ ಅಂತಾ ಸಿಡಿಲಮರಿ ಸ್ಮೃತಿ ಮಂದಾನಾ ಔಟಾದ್ರೆ ಸಾಕು ಅಂತಿದ್ದ ಎದುರಾಳಿಗಳಿಗೆ ಮತ್ತೊಂದು ಸಿಂಹಿಣಿ ಎದುರಾಗಿದೆ. ಈ ಸಿಂಹಿಣಿ ಸೌತ್ ಆಫ್ರಿಕಾ ಎದುರು ಬರೀ ಘರ್ಜಿಸಿಲ್ಲ, ಇಡೀ ಜಗತ್ತೇ ತನ್ನತ್ತ ತಿರುಗಿ ಚಪ್ಪಾಳೆ ಹೊಡೆಯುಂತಾ ಸಾಧನೆ ಮಾಡಿದೆ. ದಾಖಲೆ ಮೇಲೆ ದಾಖಲೆ ಬರೆದಿದ್ದು ಬೇರೆ ಯಾರು ಅಲ್ಲ ಶಫಾಲಿ ವರ್ಮಾ .
ನಮ್ಮ ಹೆಮ್ಮೆಯ ಕ್ರಿಕೆಟರ್ಸ್ ಇನ್ನೇನು ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳೋ ಕಾತರದಲ್ಲಿದ್ರೆ, ಇತ್ತ ನಮ್ಮ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟರ್ಸ್ ದೇಶವೇ ಹೆಮ್ಮೆ ಪಡುವಂತಾ ದಾಖಲೆ ಬರೆದಿದ್ದಾರೆ. ಅದ್ರಲ್ಲೂ ಶೇರಿಣಿ ಶಫಾಲಿ ವರ್ಮಾ ದಾಖಲೆಯ ಹತ್ರ ಬರಲು ವಿದೇಶಿ ಟೀಮ್‌ಗಳಲ್ಲಿ ಸಧ್ಯಕ್ಕಂತೂ ಸಾಧ್ಯವೇ ಇಲ್ಲ.
ಇದನ್ನೂ ಓದಿ: IND Vs SA.. ಯಾರು ಚಾಂಪಿಯನ್? – ಚೋಕರ್ಸ್ ಗೆ HITಮ್ಯಾನ್ ಚೋಕ್
ವಯಸ್ಸು ಕೇವಲ 20. ಶಾರ್ಟ್ ಹೇರ್‌ಸ್ಟೈಲ್, ನೋಡಲು ಸಿಕ್ಕಾಪಟ್ಟೆ ಬೋಲ್ಡ್ ಲುಕ್, ಐದು ಅಡಿಗಳಿಗಿಂತ ಸ್ವಲ್ಪ ಎತ್ತರದ ಶಫಾಲಿ ಕೈಯಲ್ಲಿ ಬ್ಯಾಟ್ ಸೌಂಡ್ ಮಾಡೋ ರೀತಿಯೇ ಸ್ಪೆಷಲ್. ಕಣ್ಣುಗಳಲ್ಲಿ ಸದಾ ರನ್ ಹೊಡೆಯೋ ಹಂಬಲ, ವಯಸ್ಸು ಚಿಕ್ಕದಾದ್ರೂ ಬೆಟ್ಟದಷ್ಟು ಸಾಧನೆ ಮಾಡೋ ಛಲ. ಕೊನೆಗೂ ಟೀಮ್ ಇಂಡಿಯಾಕ್ಕೆ ಮತ್ತೊಬ್ಬ ಶೇರಿಣಿಯ ಬಲ ಸಿಕ್ಕಾಯ್ತು. ಶಫಾಲಿ ವರ್ಮಾ ಸಾಧನೆಗೆ ಈಗ ಇಡೀ ವಿಶ್ವವೇ ಬೆರಗಾಗಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಶಫಾಲಿ ವರ್ಮಾ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ವೇಗದ ಡಬಲ್ ಸೆಂಚುರಿ ಸಿಡಿಸಿದ ಟೀಮ್ ಇಂಡಿಯಾ ಆಟಗಾರ್ತಿ ಶಫಾಲಿ ವರ್ಮಾ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ. ತನ್ನ ಖಾತೆಗೆ ವಿಶ್ವದಾಖಲೆಯನ್ನು ಬರೆಸಿಕೊಂಡಿದ್ದಾರೆ. ಶಫಾಲಿ ವರ್ಮಾ ಈ ಎಲ್ಲಾ ಸಾಧನೆ ಮಾಡಿರುವುದು ಕೇವಲ 20ನೇ ವಯಸ್ಸಿನಲ್ಲಿ ಎಂಬುದು ಮತ್ತೊಂದು ವಿಶೇಷ. ಶತಕ ಭಾರಿಸಿದ ಮೇಲೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಡ್ಯಾಶಿಂಗ್ ಓಪನರ್ ಶಫಾಲಿ, 196 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. 8 ಭರ್ಜರಿ ಸಿಕ್ಸ್ ಹಾಗೂ 23 ಫೋರ್ಗಳೊಂದಿಗೆ 205 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ 205 ರನ್‌ಗಳೊಂದಿಗೆ ಶಫಾಲಿ ವರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಪಟ್ಟಿಯನ್ನು ಒಂದೊಂದಾಗಿ ನೋಡ್ತಾ ಹೋಗೋಣ.
ದಾಖಲೆ ಕ್ವೀನ್ ಶಫಾಲಿ ವರ್ಮಾ
ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಶಫಾಲಿ ವರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984 ರಲ್ಲಿ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ 137 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಕೇವಲ 113 ಎಸೆತಗಳಲ್ಲಿ ಸೆಂಚುರಿ ಪೂರೈಸಿರುವ ಶಫಾಲಿ ಮಹಿಳಾ ಟೆಸ್ಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ವೇಗದ ದ್ವಿಶತ: 113 ಎಸೆತಗಳಲ್ಲಿ ಶತಕ ಬಾರಿಸಿದ್ದ ಶಫಾಲಿ ವರ್ಮಾ ದ್ವಿಶತಕ 197 ಬಾಲ್ಗಳಲ್ಲಿ ಡಬಲ್ ಸೆಂಚುರಿ ಪೂರೈಸಿದ್ದರು. ಇದರೊಂದಿಗೆ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ದ್ವಿಶತಕ ಸಿಡಿಸಿದ ದಾಖಲೆ ಕೂಡ ಟೀಮ್ ಇಂಡಿಯಾ ಆಟಗಾರ್ತಿಯ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರ ಹೆಸರಿನಲ್ಲಿತ್ತು. ಅನ್ನಾಬೆಲ್ ಡಬಲ್ ಸೆಂಚೂರಿ ಹೊಡೆದಿದ್ರು.
ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಶಫಾಲಿ ವರ್ಮಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2002 ರಲ್ಲಿ ಮಿಥಾಲಿ ರಾಜ್ 214 ರನ್‌ಗಳೊಂದಿಗೆ ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದರು. ಇದೀಗ 205 ರನ್‌ಗಳೊಂದಿಗೆ ಶಫಾಲಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಮಹಿಳಾ ಟೆಸ್ಟ್ ಪಂದ್ಯವೊಂದರ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಕೂಡ ಶಫಾಲಿ ವರ್ಮಾ ಪಾಲಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಶಫಾಲಿ 8 ಸಿಕ್ಸ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ 2 ಸಿಕ್ಸ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಮಹಿಳಾ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್ಗೆ ಅತ್ಯಧಿಕ ರನ್ ಕಲೆಹಾಕಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ. ಟೀಮ್ ಇಂಡಿಯಾದ ಆರಂಭಿಕ ಜೋಡಿ 292 ರನ್ಗಳನ ಜೊತೆಯಾಟದೊಂದಿಗೆ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನ್ ತಂಡದ ಆರಂಭಿಕ ಜೋಡಿ ಕಿರಣ್ ಬಲೂಚ್ ಮತ್ತು ಸಜ್ಜಿದಾ ಶಾ 241 ರನ್ಗಳ ಜೊತೆಯಾಟವಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ದಾಖಲೆಯನ್ನು ಶಫಾಲಿ-ಸ್ಮೃತಿ ಜೋಡಿ ತಮ್ಮದಾಗಿಸಿಕೊಂಡಿಸಿದ್ದಾರೆ. ಈ ಹಿಂದೆ ತಿರುಶ್ ಕಾಮಿನಿ ಮತ್ತು ಪುನಮ್ ರಾವುತ್ 275 ರನ್ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದರು. ಇದೀಗ 292 ರನ್ಗಳ ಜೊತೆಯಾಟದೊಂದಿಗೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಟೀಮ್ ಇಂಡಿಯಾ ಮಹಿಳಾ ತಂಡದಲ್ಲಿ ಸ್ಮೃತಿ ಮಂದಾನಾ ಎದುರಾಳಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದರು. ಇದೀಗ ಶಫಾಲಿ ವರ್ಮಾ ಕೂಡಾ ಅದೇ ರೀತಿ ಮಾಡಿದ್ದಾರೆ. ಶಫಾಲಿ ವರ್ಮಾ ಭಾರಿಸಿದ ಸಿಕ್ಸ್, ಫೋರ್‌ಗಳ ಸುರಿಮಳೆಗೆ ಸೌತ್ ಆಫ್ರಿಕಾದ ಫೀಲ್ಡರ್‌ಗಳು ಸುಸ್ತಾಗಿ ಹೋಗಿದ್ರು. ಮೈದಾನದ ಮೂಲೆ ಮೂಲೆಗೂ ಓಡೋಡಿ ಚೆಂಡು ತರೋದೇ ಫೀಲ್ಡರ್‌ಗಳಿಗೆ ಸವಾಲಾಗಿ ಹೋಗಿತ್ತು. ಇದೆಲ್ಲದರ ಕ್ರೆಡಿಟ್ ಶಫಾಲಿಗೆ ಸಲ್ಲುತ್ತೆ.