ಸ್ವಿಮ್ಮಿಂಗ್ ಮಾಡುತ್ತಿದ್ದವನ ನುಂಗಿದ ಶಾರ್ಕ್ – ಅದೇ ಶಾರ್ಕ್ ಅನ್ನು ಹುಡುಕಿ ಕೊಂದ ಜನ
ಜೂನ್ 8ರಂದು ಈಜಿಪ್ಟ್ ಸಮುದ್ರದ ತೀರದಲ್ಲಿ ಈಜಾಡುತ್ತಿದ್ದ ರಷ್ಯಾ ಮೂಲದ ಯುವಕನನ್ನ ಟೈಗರ್ ಶಾರ್ಕ್ ತಿಂದು ಹಾಕಿತ್ತು. 23 ವರ್ಷದ ವ್ಲಾದಿಮಿರ್ ಪೋಪೊವ್ ಎಂಬಾತ ತನ್ನ ತಂದೆಯ ಕಣ್ಣೆದುರಿಗೆ ಶಾರ್ಕ್ನ ಹೊಟ್ಟೆ ಸೇರಿದ್ದ. ಘಟನೆ ಬಳಿಕ ಸ್ಥಳೀಯರು ಶಾರ್ಕ್ನ್ನ ಪತ್ತೆ ಹಚ್ಚಿ ಅದನ್ನೇ ಕೊಂದು ಹಾಕಿದ್ದಾರೆ. ಅಷ್ಟೇ ಅಲ್ಲ, ಶಾರ್ಕ್ನ ಹೊಟ್ಟೆಯೊಳಗಿಂದ ರಷ್ಯಾ ಯುವಕನ ಕಳೇಬರವನ್ನ ಕೂಡ ಹೊರಕ್ಕೆ ತೆಗೆಯಲಾಗಿದೆ.
ಇದನ್ನೂ ಓದಿ: ಸ್ವಿಮ್ಮಿಂಗ್ ಮಾಡುತ್ತಿದ್ದವನ ಮೇಲೆ ಶಾರ್ಕ್ ದಾಳಿ – ನೋಡ ನೋಡುತ್ತಿದ್ದಂತೆ ಶಾರ್ಕ್ ಬಾಯಿಗೆ ತುತ್ತಾದ!
ಈಜಿಪ್ಟ್ನ ಹುರ್ಘಾಡ ನಗರದಲ್ಲಿರುವ ರೆಡ್ ಸೀ ರೆಸಾರ್ಟ್ನ ಬಳಿ ಇರುವ ಸಮುದ್ರದಲ್ಲಿ ರಷ್ಯಾ ಮೂಲದ ವ್ಲಾದಿಮಿರ್ ಪೋಪೊವ್ ಎಂಬ ಯುವಕ ಈಜಾಡುತ್ತಾ ಸಮಯ ಕಳೆಯುತ್ತಿದ್ದ. ಈ ವೇಳೆ ಶಾರ್ಕ್ ಒಂದು ಆತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್ನಲ್ಲಿ ರೆಕಾರ್ಡ್ ಆಗಿದ್ದು, ಸೋಶೀಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಆ ಶಾರ್ಕ್ ಅನ್ನು ಸ್ಥಳೀಯರು ಪತ್ತೆ ಹಚ್ಚಿ ಕೊಂದು ಹಾಕಿದ್ದಾರೆ. ಶಾರ್ಕ್ ಹೊಟ್ಟೆಯಿಂದ ಯುವಕನ ಕಳೆಬರಹವನ್ನು ಸ್ಥಳೀಯರು ತೆಗಿದ್ದಾರೆ.
ಈಜಿಪ್ಟ್ ಮಮ್ಮಿಗಳಿಗೆ ಹೆಸರುವಾಸಿಯಾದ ದೇಶ. ಪ್ರಾಚೀನ ಈಜಿಪ್ಟ್ನಲ್ಲಿ ಮೃತ ರಾಜ ಮತ್ತು ರಾಣಿಯ ಶವವನ್ನ ಮಮ್ಮಿಯನ್ನಾಗಿ ಪಿರಮಿಡ್ಗಳ ಒಳಗೆ ಬಚ್ಚಿಡಲಾಗುತ್ತಿತ್ತು. ಅದೇ ರೀತಿ ಈಗ ಮನುಷ್ಯನನ್ನ ತಿಂದ ಶಾರ್ಕ್ನ ಶವವನ್ನ ಕೂಡ ಮಮ್ಮಿಕೇಶನ್ ಮಾಡಲು ಮುಂದಾಗಿದ್ದಾರೆ. ಅದಕ್ಕೂ ಮುನ್ನ, ಈಜಿಪ್ಟ್ ಸಮುದ್ರ ತೀರದಲ್ಲಿ ನಡೆದ ಹಲವು ಶಾರ್ಕ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತಜ್ಞರು ತನಿಖೆಗೆ ಮುಂದಾಗಿದ್ದು, ಈಗ ಮೃತಪಟ್ಟಿರುವ ಶಾರ್ಕ್ ಈ ಹಿಂದೆಯೂ ಅಟ್ಯಾಕ್ ಮಾಡಿತ್ತಾ ಅನ್ನೋ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.