ಸ್ವಿಮ್ಮಿಂಗ್‌ ಮಾಡುತ್ತಿದ್ದವನ ಮೇಲೆ ಶಾರ್ಕ್‌ ದಾಳಿ – ನೋಡ ನೋಡುತ್ತಿದ್ದಂತೆ ಶಾರ್ಕ್‌ ಬಾಯಿಗೆ ತುತ್ತಾದ!

ಸ್ವಿಮ್ಮಿಂಗ್‌ ಮಾಡುತ್ತಿದ್ದವನ ಮೇಲೆ ಶಾರ್ಕ್‌ ದಾಳಿ – ನೋಡ ನೋಡುತ್ತಿದ್ದಂತೆ ಶಾರ್ಕ್‌ ಬಾಯಿಗೆ ತುತ್ತಾದ!

ಸಮುದ್ರದಲ್ಲಿ ಈಜಲು ತೆರಳುವವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ಸಮುದ್ರದಲ್ಲಿ ಈಜಾಡಲು ಹೋಗಿ ಶಾರ್ಕ್‌ ಬಾಯಿಗೆ ಆಹಾರವಾಗಿದ್ದಾನೆ.

ಈಜಿಪ್ಟ್​ನ ಹುರ್ಘಾಡ ನಗರದಲ್ಲಿರುವ ರೆಡ್​ ಸೀ ರೆಸಾರ್ಟ್​ನ ಬಳಿ ಇರುವ ಸಮುದ್ರದಲ್ಲಿ ರಷ್ಯಾ ಮೂಲದ ವ್ಯಕ್ತಿಯೊಬ್ಬ ಈಜಾಡುತ್ತಾ ಸಮಯ ಕಳೆಯುತ್ತಿದ್ದ. ಈ ವೇಳೆ ಶಾರ್ಕ್​ ಒಂದು ಆತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದ್ದು, ಸೋಶೀಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಹುಲಿಗೆ ಆಟ ಪ್ರವಾಸಿಗರಿಗೆ ಪ್ರಾಣ ಸಂಕಟ – ವಾಹನ ಹಿಡಿದು ಭಯ ಹುಟ್ಟಿಸಿದ ವ್ಯಾಘ್ರ

ಪ್ರವಾಸಿಗನ ಮೇಲೆ ದಾಳಿ ಮಾಡಿದ್ದು ಟೈಗರ್​ ಶಾರ್ಕ್​ ಎಂದು ಈಜಿಪ್ಟ್​​ನ ಪರಿಸರ ಸಚಿವಾಲಯ ತಿಳಿಸಿದೆ. ಈ ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಕರಾವಳಿಯ 74 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾನುವಾರದವರೆಗೆ ಜಲಕ್ರೀಡೆ ಹಾಗೂ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದಾರೆ. ಆದರೆ, ಮೃತನ ಮಾಹಿತಿ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ವರದಿಯಾಗಿದೆ.

ವೈರಲ್‌ ಆದ ವಿಡಿಯೋದಲ್ಲಿ, ತನ್ನನ್ನು ಸುತ್ತುವರಿದ ಶಾರ್ಕ್​ನಿಂದ ತಪ್ಪಿಸಿಕೊಳ್ಳಲು ರಷ್ಯಾ ವ್ಯಕ್ತಿ ಭಯದಿಂದ ಸಮುದ್ರದಲ್ಲಿ ಈಜಲು ಪರದಾಡುತ್ತಿದ್ದಾನೆ. ಎರಡ್ಮೂರು ಬಾರಿ ದಾಳಿ ಮಾಡಿ, ಆತನ ಸುತ್ತಲೂ ಸುತ್ತುವ ಶಾರ್ಕ್​, ಅಂತಿಮವಾಗಿ ವ್ಯಕ್ತಿಯನ್ನು ನೀರಿನ ಒಳಗೆ ಎಳೆದೊಯ್ಯುತ್ತದೆ. ಲೈಫ್​ಗಾರ್ಡ್​ ಸಹಾಯಕ್ಕಾಗಿ ಕೂಗಿಕೊಂಡರು ಆತನನ್ನು ರಕ್ಷಿಸಲು ಆತನ ಬಳಿಗೆ ಹೋಗುವಷ್ಟರಲ್ಲಿ ಶಾರ್ಕ್​ ಆತನನ್ನು ಎಳೆದುಕೊಂಡು ಹೋಗಿತ್ತು.

ದಾಳಿಯ ಕೆಲವು ಗಂಟೆಗಳ ಬಳಿಕ ಈಜಿಪ್ಟ್​ ಪರಿಸರ ಸಚಿವಾಲಯದ ಅಧಿಕಾರಿಗಳು ಶಾರ್ಕ್​ ಅನ್ನು ಹಿಡಿದು, ದಾಳಿಗೆ ಕಾರಣ ಏನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲಿಸುತ್ತಿದ್ದಾರೆ. ಹುರ್ಘಾಡದಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ಮೃತ ವ್ಯಕ್ತಿಯು ರಷ್ಯಾ ಮೂಲದವನು ಎಂದು ಪತ್ತೆಹಚ್ಚಿದೆ. ಆದರೆ, ಆತನ ಹೆಸರು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ರಷ್ಯಾ ವ್ಯಕ್ತಿ 1999ರಲ್ಲಿ ಜನಿಸಿದವನಾಗಿದ್ದು, ಈಜಿಪ್ಟ್​ನಲ್ಲೇ ಪೂರ್ಣ ಸಮಯದಿಂದ ವಾಸವಿದ್ದ ಎಂದು ತಿಳಿಸಿದೆ.

 

suddiyaana