ಜುಲೈ 14ಕ್ಕೆ ಸಿಗಂದೂರು ಸೇತುವೆ ಉದ್ಘಾಟನೆ – ಸೇತುವೆಗೆ ಸಿಗಂದೂರು ಚೌಡೇಶ್ವರಿ ಎಂದು ಹೆಸರಿಡುವ ಕುರಿತು ಚರ್ಚೆ

ಜುಲೈ 14ಕ್ಕೆ ಸಿಗಂದೂರು ಸೇತುವೆ ಉದ್ಘಾಟನೆ – ಸೇತುವೆಗೆ ಸಿಗಂದೂರು ಚೌಡೇಶ್ವರಿ ಎಂದು ಹೆಸರಿಡುವ ಕುರಿತು ಚರ್ಚೆ

ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾದ ದೇಶದ ಎರಡನೇ ಕೇಬಲ್​ ಆಧಾರಿತ ಸೇತುವೆಯು ಜುಲೈ 14ರಂದು ಉದ್ಘಾಟನೆ ಆಗಲಿದೆ. ಈ ಬಗ್ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.  ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರದ ಭೂ ಸಾರಿಗೆ ಸಚಿವರಾದ ನಿತೀನ್​ ಗಡ್ಕರಿ ಹಾಗೂ ಪ್ರಹ್ಲಾದ್​ ಜೋಶಿ ಅವರು ಆಗಮಿಸಲಿದ್ದಾರೆ.

ಸಾಗರ ತಾಲೂಕಿನ ಹೊಳೆಬಾಗಿಲಿನಿಂದ ಕಳಸವಳ್ಳಿ ಶರಾವತಿ ಹಿನ್ನೀರಿನಲ್ಲಿ ಸುಮಾರು 2.25 ಕಿ.ಮಿ. ಉದ್ದದ ಸೇತುವೆ ಆಗಿದೆ. ಗ್ರಾಮೀಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ಡರ್ಜೆಗೆ ಏರಿಸಿ ಸುಮಾರು 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆಯ ಉದ್ಘಾಟನೆ ನಡೆಯಲಿದೆ. ಸೇತುವೆ ಕಾಮಗಾರಿ ಅಲ್ಪಸ್ವಲ್ಪ ಉಳಿದಿದ್ದು, ಉದ್ಘಾಟನೆ ದಿನಾಂಕದ ಒಳಗೆ ಮುಕ್ತಾಯವಾಗಲಿದೆ. ಸೇತುವೆಗೆ ಸಿಗಂದೂರು ಚೌಡೇಶ್ವರಿ ಎಂದು ಹೆಸರಿಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ಸೇತುವೆಯ ಸಂಪರ್ಕದಿಂದ ಉತ್ತರ ಕರ್ನಾಟಕದಿಂದ ಬಯಲು ಸೀಮೆಗೆ ಸಂಪರ್ಕ ಕಲ್ಪಿಸಲಾಗುತ್ತೆ.

ಈ ಬಗ್ಗೆ ಮಾತನಾಡಿದ ಬಿವೈ ರಾಘವೇಂದ್ರ ಈ ಸೇತುವೆಯು ನಿತಿನ್​ ಗಡ್ಕರಿ ಹಾಗೂ ಯಡಿಯೂರಪ್ಪನವರ ದೂರದೃಷ್ಟಿಯಿಂದ ಸೇತುವೆಗೆ ಚಾಲನೆ ನೀಡಲಾಗಿತ್ತು ಅಂತ ಹೇಳಿದ್ರು. ಈ ವೇಳೆ ಜಿಲ್ಲಾಧ್ಯಕ್ಷರಾದ ಜಗದೀಶ್​, ಶಾಸಕರಾದ ಆರಗ ಜ್ಞಾನೇಂದ್ರ, ಎಸ್​.ಎನ್​. ಚನ್ನಬಸಪ್ಪ, ಮಾಜಿ ಶಾಸಕರಾದ ಹರತಾಳು ಹಾಲಪ್ಪ ಸೇರಿ ಇತರರು ಉಪಸ್ಥಿತರಿದ್ದರು.

ನಾಡಿಗೆ ಬೆಳಕು ನೀಡಬೇಕೆಂದು ಸ್ವಾತಂತ್ರ್ಯ ನಂತರದಲ್ಲಿ ಮೈಸೂರಿನ ಅರಸರು ಶರಾವತಿ ನದಿಗೆ ಲಿಂಗನಮಕ್ಕಿ ಎಂಬಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಿದರು. ಆಗ ಸಾಗರ ತಾಲೂಕಿನ ಕೂಳೂರು ಭಾಗದಿಂದ ತುಮರಿ, ಬ್ಯಾಕೋಡು ಭಾಗದ ರಸ್ತೆ ಮುಳುಗಡೆಯಾಗಿ, ಈ ಭಾಗದ ಜನರಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗಿತ್ತು. ಈ ಭಾಗದ ಜನ ಸಾಗರ ಪೇಟೆ ನೋಡಬೇಕೆಂದರೆ ಸುಮಾರು 80 ಕಿ.ಮಿ. ದೂರ ಸುತ್ತಿಬಳಸಿ ಬರಬೇಕಿತ್ತು. ನಂತರ ಹಿನ್ನೀರಿಗೆ ಲಾಂಚ್ ವ್ಯವಸ್ಥೆ ಬಂದಿತು. ಆದರೂ ಸಹ ಈ ಭಾಗದ ಜನರಿಗೆ ರಾತ್ರಿ ವೇಳೆ ತುರ್ತು ಸೇವೆಗೆ ಸಾಗರ, ಶಿವಮೊಗ್ಗಕ್ಕೆ ಬರಲು ಕಷ್ಟವಾಗುತ್ತಿತ್ತು. ರಾತ್ರಿ ವೇಳೆ ಲಾಂಚ್ ಸೇವೆ ಇರುತ್ತಿರಲಿಲ್ಲ. ಇದರಿಂದ ದ್ವೀಪದ ಜನರ ಸಮಸ್ಯೆ ಮುಂದುವರಿದಿತ್ತು. ಈಗ ಸೇತುವೆ ಕಾಮಗಾರಿ ಮುಗಿದಿದ್ದು ಉದ್ಘಾಟನೆಗೆ ಅಣಿಯಾಗಿದೆ.

Kishor KV