ಕನ್ನಡಿಗರು ಎಂದೆಂದಿಗೂ ಮರೆಯದ ಮಹಾಪುರುಷ -ಆಧುನಿಕ ಕರ್ನಾಟಕದ ನಾಟಕ ಪಿತಾಮಹ ಶಾಂತಕವಿ

ಕನ್ನಡಿಗರು ಎಂದೆಂದಿಗೂ ಮರೆಯದ ಮಹಾಪುರುಷ -ಆಧುನಿಕ ಕರ್ನಾಟಕದ ನಾಟಕ ಪಿತಾಮಹ ಶಾಂತಕವಿ

ಕೀರ್ತನೆಗಳ ಮೂಲಕ ಕನ್ನಡಿಗರ ಇತಿಹಾಸ ಹೇಳಿದ, ಮರಾಠಿ ಪ್ರಭಾವದಲ್ಲಿದ್ದ ಕನ್ನಡಿಗರಲ್ಲಿ ಕನ್ನಡ ಬಿತ್ತಿದ, ಆಧುನಿಕ ಕರ್ನಾಟಕದ ನಾಟಕ ಪಿತಾಮಹರು ಎನಿಸಿಕೊಂಡವರು ಶಾಂತಕವಿ. ಕನ್ನಡಿಗರು ಎಂದೆಂದಿಗೂ ಮರೆಯದ ಶಾಂತಕವಿಗಳ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಕನ್ನಡ ಏಕೀಕರಣಕ್ಕೆ ಕುವೆಂಪು ಕೊಡುಗೆ – ಕನ್ನಡಿಗರನ್ನು ಬಡಿದೆಬ್ಬಿಸಿದ ರಾಷ್ಟ್ರಕವಿ ಕುವೆಂಪು ಎಂದೆಂದಿಗೂ ಸ್ಮರಣೀಯರು

ಆಧುನಿಕ ಕನ್ನಡದ ಪ್ರಥಮ ನಾಟಕಕಾರ, ಕೀರ್ತನಕಾರರಾಗಿ ಕನ್ನಡಿಗರಲ್ಲಿ ಕನ್ನಡತನ ತುಂಬಿದವರು ಶಾಂತಕವಿಗಳು. ಇವರ ನಿಜನಾಮ ಸಕ್ಕರಿ ಬಾಳಾಚಾರ್ಯ. ಸಕ್ಕರಿ ಬಾಳಾಚಾರ್ಯರು 1856ರ ಜನವರಿ 15ರಂದು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಜನಿಸಿದರು. ಧಾರವಾಡ ಬೆಳಗಾವಿಯಂತಹ ಅಚ್ಚಕನ್ನಡ ಪ್ರದೇಶಗಳಲ್ಲೂ ಮರಾಠಿ ಭಾಷೆಯ ದಟ್ಟ ಪ್ರಭಾವವಿತ್ತು. ಕನ್ನಡದ ಮೇಲೇ ದಬ್ಬಾಳಿಕೆ ನಡೆಯುತ್ತಿತ್ತು. ಅಂತಹ ಸಂದರ್ಭದಲ್ಲಿ ಕನ್ನಡಿಗರನ್ನು ಜಾಗೃತಗೊಳಿಸಿ ಕನ್ನಡದ ಅಭಿಮಾನ ತುಂಬಲು ಪ್ರಯತ್ನಿಸಿದ ಮಹಾನ್ ಪುರುಷ ಶಾಂತಕವಿ. ” ಎಲ್ಲಿ ಕಂಡಲ್ಲಿ ಮರಾಠೀ ಭಾಷಾಮಯವಲ್ತೆ” ಎಂದು ಸಿಟ್ಟಿಗೆದ್ದು ಕನ್ನಡತನವನ್ನು ಬಡಿದೆಬ್ಬಿಸಲು ಉತ್ತರ ಕರ್ನಾಟಕದ ಮೊಟ್ಟ ಮೊದಲ ವೃತ್ತಿ‌ನಾಟಕ ಕಂಪನಿಯನ್ನು ಸ್ಥಾಪಿಸಿ, ತಾವೇ ಕನ್ನಡ ನಾಟಕಗಳನ್ನು ಬರೆದರು. ಕನ್ನಡದ ಕೀರ್ತನೆಗಳನ್ನು ಬರೆದು ಹಾಡಿದ ಉಗ್ರ ಭಾಷಾಭಿಮಾನಿ ಸಕ್ಕರಿ ಬಾಳಾಚಾರ್ಯರು. ತಮ್ಮ ಮನೆತನದ ದೇವರು ಶಾಂತೇಶ ಎಂಬುದನ್ನೇ ಕಾವ್ಯನಾಮ ಮಾಡಿಕೊಂಡು ಶಾಂತಕವಿ ಆದರು. ಗದಗದಲ್ಲಿ ಕನ್ನಡ ಉದ್ಧಾರಕ್ಕಾಗಿ ಕನ್ನಡ ನಾಟಕದ ಏಳ್ಗೆಗಾಗಿ ಕರ್ನಾಟಕ ಕಂಪನಿಯನ್ನು ಕಟ್ಟುವ, ಕನ್ನಡ ನಾಟಕಗಳನ್ನು ಬರೆದುಕೊಡುವ ನಾಟಕವನ್ನು ಕಲಿಸಿಕೊಡುವ ಕೆಲಸ ಇವರಿಂದಲೇ ಆರಂಭವಾಯಿತು.  ಅವರು ರಚಿಸಿದ ಮೊದಲ ನಾಟಕ ಉಷಾಹರಣ.  ಈ ಕಾರಣಕ್ಕಾಗಿ ಇಂದಿಗೂ ಶಾಂತಕವಿಗಳು ಕರ್ನಾಟಕ ನಾಟಕದ ಪ್ರಥಮ ಗುರುವೆಂದು ಗೌರವಿಸಲ್ಪಡುತ್ತಾರೆ. ವೃತ್ತಿಯಿಂದ ಶಾಂತಕವಿಗಳು ಅಧ್ಯಾಪಕರು. ಜನರಲ್ಲಿ ನಾಟಕ ಕಲೆಯ ಬಗೆಗೆ ಹೊಸ ಅಭಿರುಚಿ ಹುಟ್ಟಿಸುವುದರಲ್ಲಿ ಶಾಂತಕವಿಗಳ ಪಾತ್ರ ಪ್ರಮುಖವಾದುದು.  ಅವರು ಎಷ್ಟೊಂದು ಹಟವಾದಿಗಳಿದ್ದರೆಂದರೆ ನಾಟಕ ಅಭ್ಯಾಸ ಮಾಡಿಸುವ ಸಲುವಾಗಿ ಶಾಲೆ ಬಿಟ್ಟ ನಂತರ  ಗದಗದಿಂದ ಹೊಂಬಳಕ್ಕೆ ೯ ಕಿ. ಮೀ. ಎಮ್ಮೆಯ ಮೇಲೆ ಕುಳಿತು ಹೋಗಿಬರುತ್ತಿದ್ದರಂತೆ. ಶಾಂತಕವಿಗಳ ನಾಟಕಗಳನ್ನು ಆಡಲೆಂದೇ ಕನ್ನಡನಾಡಿನ ಅನೇಕ ಕಡೆಗಳಲ್ಲಿ  ನಾಟಕ ಕಂಪನಿಗಳು ಹುಟ್ಟಿಕೊಂಡಿದ್ದವಂತೆ. ಚೆಲುವು ರೂಪುಗಳಿದ್ದ, ಲಲಿತಭಾಷಣವಿದ್ದ, ತಿಳಿಗಾನವಿದ್ದ, ಭಕ್ತರ ಕಥೆ, ದೇವತೆಗಳ ಲೀಲೆ ಇದ್ದ ಅವರ ನಾಟಕಗಳು ಜನರಿಗೆ ಹಿಡಿಸಿದವು. ಶಾಂತಕವಿಗಳು ೭೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಅದರಲ್ಲಿ ೨೮ ನಾಟಕಗಳು. ಅವರು ರಚಿಸಿದ ” ರಕ್ಷಿಸು  ಕರ್ನಾಟಕ ದೇವಿ” ಎಂಬ ಪದ್ಯ ಅಂದಿನ ಮುಂಬಯಿ ಕರ್ನಾಟಕದ ನಾಡಗೀತೆಯೆನಿಸಿತ್ತು. ಇದಲ್ಲದೆ ಶಾಂತಕವಿಗಳು ಹಲವಾರು ಕನ್ನಡ ಗೀತೆಗಳನ್ನೂ, ಲಾವಣಿಗಳನ್ನೂ ರಚಿಸಿದ್ದರು. 1920ರಲ್ಲಿ ಶಾಂತಕವಿಗಳು ಕನ್ನಡಿಗರನ್ನು ಅಗಲಿದರು. ತಮ್ಮ ಗುರು ಶಾಂತಕವಿಗಳಗಳ ಬಗ್ಗೆ ವರಕವಿ ಬೇಂದ್ರೆಯವರು ಶಾಂತಕವಿಗಳ ವಿಶ್ರಾಂತಿ ಎಂದು ಬರೆದ ಕವನ ಇಂದಿಗೂ ಪ್ರಖ್ಯಾತವಾಗಿದೆ. ಶಾಂತಕವಿಗಳು ಕನ್ನಡಿಗರು ಸ್ಮರಿಸಬೇಕಾದ ಮಹಾನುಭಾವರು.

 

Sulekha