ನೋವಿನ ಬದುಕು ನುಂಗಿ ವಿಶ್ವಕಪ್‌ನಲ್ಲಿ ಶಮಿ ಶ್ರೇಷ್ಠ ಸಾಧನೆ -ಟೀಮ್ ಇಂಡಿಯಾ ಗೆಲುವಿನ ರೂವಾರಿ ಶಮಿ
ಮೊಹಮ್ಮದ್ ಶಮಿ. ಬೆಂಕಿಯಲ್ಲಿ ಅರಳಿದ ಅಪ್ಪಟ ಬಂಗಾರ ಈ ಶ್ರೇಷ್ಠ ಬೌಲರ್.. ಈ ಬಾರಿಯ ವಿಶ್ವಕಪ್ ನ ಅತ್ಯಂತ ಯಶಸ್ವಿ ಬೌಲರ್ ಕೂಡಾ ಹೌದು. ಟೀಮ್ ಇಂಡಿಯಾದ ಗೆಲುವಿನ ರೂವಾರಿಯೂ ಹೌದು. ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ತಂಡದ ಅದ್ಭುತ ಯಾತ್ರೆಗೆ ತನ್ನೆಲ್ಲಾ ಕೊಡುಗೆ ನೀಡಿದವರಲ್ಲಿ ಮೊಹಮ್ಮದ್ ಶಮಿಗೆ ಅಗ್ರಸ್ಥಾನ ನೀಡಿದರೂ ತಪ್ಪಾಗಲ್ಲ.
ಇದನ್ನೂ ಓದಿ: 7 ವಿಕೆಟ್ ಕಬಳಿಸಿ ಸೆಮೀಸ್ ಗೆದ್ದ ಮೊಹಮ್ಮದ್ ಶಮಿ – ವಿಶ್ವಕಪ್‌ನಲ್ಲಿ ಶೈನ್ ಆಗಿರುವ ಶಮಿ ಬದುಕಿನ ಹಿಂದಿದೆ ಕರಾಳ ಕಥೆ
ವಿಶ್ವಕಪ್‌ನಲ್ಲಿ ಶೈನ್ ಆಗುತ್ತಿರುವ ಶಮಿ ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಬಿಸಿ ಮಾಡುತ್ತಾ ಬ್ರೇಕ್‌ನಲ್ಲಿ ವಾಟರ್ ಬಾಯ್ ಆಗಿ ಕೆಲಸ ಮಾಡುತ್ತಾ ಕುಳಿತಿದ್ದರು. ಲೀಗ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿಗೆ ಒಳಗಾದರು. ಆಗ ಶಮಿಗೆ ತಂಡದ ಬಾಗಿಲು ತೆರೆಯಿತು. ತನಗೆ ಸಿಕ್ಕ ಅವಕಾಶವನ್ನು ಕೈ ಜಾರಲು ಬಿಡಲಿಲ್ಲ. ಶಮಿಗೆ ಅವಕಾಶ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಆಯ್ಕೆಗೆ ತನ್ನ ಆಟದ ಮೂಲಕವೇ ಧನ್ಯವಾದ ತಿಳಿಸಿದ್ದಾರೆ ಶಮಿ. ಎದುರಾಳಿಗಳ ವಿಕೆಟ್ ಉರುಳಿಸುತ್ತಾ, ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನರಾಗುವ ಮೂಲಕ ಶಮಿ ಈ ಬಾರಿಯ ವಿಶ್ವಕಪ್‌ನ ಸಕ್ಸಸ್ ಬೌಲರ್ ಎನಿಸಿಕೊಂಡಿದ್ದಾರೆ. ಶಮಿ ಭಾರತದ ಪರ ವಿಶ್ವಕಪ್‌ನಲ್ಲಿ 50 ವಿಕೆಟ್ ಪೂರ್ತಿಗೊಳಿಸಿದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಜೊತೆಗೆ ಕೇವಲ ಆರೇ ಪಂದ್ಯಗಳಿಂದ 23 ವಿಕೆಟ್ ಗಳಿಸಿ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಕೀರ್ತಿ ತನ್ನದಾಗಿಸಿಕೊಂಡಿದ್ದಾರೆ.
ವೈಯಕ್ತಿಕ ಜೀವನದಲ್ಲಾದ ಏರಿಳಿತ, ಫಾರ್ಮ್ ಕಳೆದುಕೊಂಡಿರುವ ನೋವು, ಇಂಜುರಿ ಸಮಸ್ಯೆ, ಅನೇಕ ಬಾರಿ ಅವಕಾಶ ವಂಚಿತರಾಗುತ್ತಾ ಬಂದಿರುವ ಶಮಿ ಈ ಬಾರಿಯ ವಿಶ್ವಕಪ್‌ನ ಹೀರೋ ಕೂಡಾ ಹೌದು. ಮೊಹಮ್ಮದ್ ಶಮಿ 2027ರ ವಿಶ್ವಕಪ್ ಆರಂಭಕ್ಕೂ ಮುನ್ನವೇ ನಿವೃತ್ತಿಯಾಗುವ ಸಾಧ್ಯತೆ ಬಹಳಷ್ಟಿದೆ. ಹೀಗಾಗಿ ಶಮಿಗೆ ಈ ವಿಶ್ವಕಪ್ ತುಂಬಾನೇ ಮುಖ್ಯ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಮೊನ್ನೆ ನಡೆದ ಸೆಮಿಫೈನಲ್‌ನಲ್ಲಿ 7 ವಿಕೆಟ್ ಪಡೆದುಕೊಂಡು ಭಾರತಕ್ಕೆ ಗೆಲುವು ತಂದುಕೊಟ್ಟರು. ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ, ಮೊಹಮ್ಮದ್ ಶಮಿ ಒಂದು ಇನ್ನಿಂಗ್ಸ್ನಲ್ಲಿ 7 ವಿಕೆಟ್ಗಳನ್ನು ಪಡೆದ ಭಾರತದ ಮೊದಲ ಬೌಲರ್ ಆಗಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಖುಷಿ ಇಲ್ಲದಿದ್ದರೂ ಅದೆನ್ನಲ್ಲಾ ಬದಿಗಿಟ್ಟು ಶಮಿ ಗ್ರೌಂಡ್ನಲ್ಲಿ ಹೇಗೆ ಆಟ ಆಡಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಆತ್ಮಹತ್ಯೆಗೆ ಮುಂದಾಗಿದ್ದ ಆಟಗಾರ ಈಗ ಕೊಟ್ಯಂತರ ಮಂದಿಗೆ ಆಟದಲ್ಲಿ ಸ್ಫೂರ್ತಿಯಾಗಿದ್ದಾರೆ. ವೈಯಕ್ತಿಕ ಜೀವನದಲ್ಲಾದ ನೋವಿಗೆ ಮೂರು ಬಾರಿ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದರು. ಫಿಟ್ನೆಸ್ ಕಳೆದುಕೊಂಡು ತಂಡದಲ್ಲಿ ಆಡುವ ಅವಕಾಶ ಕೂಡ ಕಳೆದುಕೊಂಡಿದ್ದರು. ಇದೆಲ್ಲದರ ನಂತರ ಘಟನೆಯಿಂದ ಹೊರಬಂದು, ಮಾನಸಿಕವಾಗಿ ಸದೃಢವಾಗಿ ಮತ್ತೆ ದೇಶಕ್ಕಾಗಿ ಆಡುತ್ತಿದ್ದಾರೆ. ಇದಕ್ಕೆ ಶಮಿ ಯಾವಾಗಲೂ ಗ್ರೇಟ್ ಬೌಲರ್.. ಗ್ರೇಟ್ ಕ್ರಿಕೆಟರ್..