ಶಕ್ತಿ ಯೋಜನೆಯಿಂದ ಕಂಡಕ್ಟರ್ ಕೆಲಸಕ್ಕೆ ಕುತ್ತು! – ಮಹಿಳೆಯರ ಎಡವಟ್ಟಿನಿಂದ ನಿರ್ವಾಹಕರಿಗೆ ಶಿಕ್ಷೆ?

ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಲಕ್ಷಾಂತರ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಆದ್ರೀಗ ಶಕ್ತಿ ಯೋಜನೆಯಿಂದ ಕಂಡಕ್ಟರ್‌ಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಸಿಎಂ ಮುಡಾ ಕೇಸ್ ಕಂಟಕ – ಇಡೀ ದಿನ ಕಾರ್ಯಕ್ರಮ ಕಾಯ್ದಿರಿಸಿದ ಸಿದ್ದರಾಮಯ್ಯ!
ಹೌದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಯೋಜನೆ ತುಂಬಾ ಅನುಕೂಲವಾಗಿದೆ. ಆದ್ರೀಗ ಮಹಿಳಾ ಪ್ರಯಾಣಿಕರು ಮಾಡುವ ಎಡವಟ್ಟಿನಿಂದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗಳು ಕೆಲಸ ಕೆಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೌದು, ಮಹಿಳಾ ಪ್ರಯಾಣಿಕರು ಯಾವ ಸ್ಥಳಕ್ಕೆ ಹೋಗಬೇಕೋ, ಅಲ್ಲಿಗೆ ಶೂನ್ಯ ದರದ ಟಿಕೆಟ್ ಪಡೆದು, ಬೇರೊಂದು ನಿಲ್ದಾಣಗಳಲ್ಲಿ ಇಳಿದು ಹೋಗುತ್ತಿದ್ದಾರೆ. ಈ ವೇಳೆ ಟಿಕೆಟ್ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬಂದು ಪರಿಶೀಲಿಸಿದಾಗ, ಪ್ಯಾಸೆಂಜರ್ ಇರುವುದಿಲ್ಲ. ಆದರೆ ಟಿಕೆಟ್ ರಿಸಿವ್ ಆಗಿರುತ್ತದೆ. ಇದಕ್ಕೆ ಕಂಡಕ್ಟರ್‌ಗಳನ್ನು ಹೊಣೆಯಾಗಿಸಿ, ತನಿಖಾಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಅಮಾನತು ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ತಪ್ಪು ಮಾಡದಿದ್ದರೂ ಕಂಡಕ್ಟರ್‌ಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಹೀಗಾಗಿ ದಯಮಾಡಿ ನಮ್ಮನ್ನು ಕಾಪಾಡಿ ಅಂತ ಸಾರಿಗೆ ಸಚಿವರಿಗೆ ಕಂಡಕ್ಟರ್‌ಗಳು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ.
ಪ್ರಯಾಣದ ವೇಳೆ ಬಸ್‌ಗಳು ಯಾವುದಾದರೂ ಡಾಬಾ, ಹೊಟೇಲ್‌ಗಳಲ್ಲಿ ನಿಲ್ಲಿಸಿದಾಗ, ಒಂದು ಬಸ್‌ನಲ್ಲಿ ಟಿಕೆಟ್ ಪಡೆದು, ಇನ್ನೊಂದು ಬಸ್‌ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಟಿಕೆಟ್ ಪಡೆದ ಬಸ್‌ನಲ್ಲಿ ಆ ಪ್ರಯಾಣಿಕರು ಇಲ್ಲದಿದ್ದಾಗ ಅನಿವಾರ್ಯವಾಗಿ ಅವರಿಗಾಗಿ ಕಾಯುತ್ತಾರೆ. ಇದರಿಂದ ಇತರೆ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಬಸ್ ನಿರ್ವಾಹಕರಿಗೆ ಆಗುತ್ತಿರುವ ಈ ಸಮಸ್ಯೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗಮನಕ್ಕೂ ಬಂದಿದೆ. ಈ ಬಗ್ಗೆ ನಿಗಮದ ಎಂಡಿ ಜೊತೆ ಮಾತನಾಡಿದ್ದು, ಇದಕ್ಕೊಂದು ಪರಿಹಾರ ಹುಡುಕುವ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.