ಪಠಾಣ್‌’, ‘ಕೆಜಿಎಫ್‌ 2’ ದಾಖಲೆಗಳನ್ನು ಧೂಳೀಪಟ ಮಾಡಿದ ‘ಜವಾನ್’ –ಎರಡನೇ ದಿನವೂ ಭರ್ಜರಿ ಕಲೆಕ್ಷನ್‌!

ಪಠಾಣ್‌’, ‘ಕೆಜಿಎಫ್‌ 2’ ದಾಖಲೆಗಳನ್ನು ಧೂಳೀಪಟ ಮಾಡಿದ ‘ಜವಾನ್’ –ಎರಡನೇ ದಿನವೂ ಭರ್ಜರಿ ಕಲೆಕ್ಷನ್‌!

ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ಜವಾನ್‌ ಸಿನಿಮಾ ಸೆ. 7 ರಂದು ತೆರೆಕಂಡಿದೆ. ಈ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆಕಂಡಿದ್ದು,  ಎಲ್ಲಾ ಕಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಈ ಸಿನಿಮಾಗೆ ಅಂದಾಜು 75 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ ಕೂಡ ಅದ್ಬುತ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ಸುನಾಮಿ ಎದ್ದಿದೆ. 2ನೇ ದಿನ 50ರಿಂದ 53 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ . ಅಂದರೆ, ಎರಡೇ ದಿನಕ್ಕೆ ಜವಾನ್​ಸಿನಿಮಾದ ಕಲೆಕ್ಷನ್​ 120 ಕೋಟಿ ರೂಪಾಯಿ ದಾಟಿದಂತಾಗುತ್ತದೆ. ವಿದೇಶಿ ಕಲೆಕ್ಷನ್​ ಸೇರಿಸಿದರೆ ಈ ಮೊತ್ತ ಇನ್ನೂ ದೊಡ್ಡದಾಗಲಿದೆ. ಈ ಗೆಲುವಿನಿಂದ ಶಾರುಖ್​ ಖಾನ್​ ಅವರ ಮುಖದಲ್ಲಿ ನಗು ಅರಳಿದೆ.

ಇದನ್ನೂ ಓದಿ: ಅಭಿಮಾನಿಗಳ ಮನಗೆದ್ದ ‘ಜವಾನ್’ – ಶಾರುಖ್ ಖಾನ್ ದ್ವಿಪಾತ್ರ ಮೆಚ್ಚಿಕೊಂಡ ಫ್ಯಾನ್ಸ್

ಈ ವರ್ಷದ ಆರಂಭದಲ್ಲಿ ತೆರೆಗೆ ಬಂದಿದ್ದ ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾವು 55 ಕೋಟಿ ರೂ. ಗಳಿಸಿತ್ತು. ಅದು ಇದುವರೆಗಿನ ಮೊದಲ ದಿನದ ಅತೀ ಹೆಚ್ಚು ಗಳಿಕೆ ಆಗಿತ್ತು. ಇದೀಗ ಶಾರುಖ್‌ ಖಾನ್ ತಮ್ಮ ದಾಖಲೆಯನ್ನು ತಾವೇ ಬ್ರೇಕ್ ಮಾಡಿದ್ದಾರೆ. ಅವರ ‘ಜವಾನ್’ ಸಿನಿಮಾವು ಭಾರತದಲ್ಲಿ ಮೊದಲ ದಿನ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಸಾಲಿನಲ್ಲಿ ಈಗ ‘ಜವಾನ್‌’ ಮೊದಲ ಸ್ಥಾನದಲ್ಲಿದೆ. ಇನ್ನು ‘ರಾಕಿಂಗ್ ಸ್ಟಾರ್‌’ ಯಶ್ ಅವರ ‘ಕೆಜಿಎಫ್ – ಚಾಪ್ಟರ್ 2’ ಸಿನಿಮಾದ ಹಿಂದಿ ವರ್ಷನ್‌ಗೆ ಮೊದಲ ದಿನ 53.95 ಕೋಟಿ ರೂ. ಕಲೆಕ್ಷನ್ ಆಗಿತ್ತು. ‘ಜವಾನ್‌’ ದಾಖಲೆಯಿಂದಾಗಿ, ‘ಕೆಜಿಎಫ್ 2’ ಸಿನಿಮಾವು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದೆ.

ಸೌತ್​ ಸಿನಿಮಾ ಮತ್ತು ಬಾಲಿವುಡ್​ ಮಿಶ್ರಣದ ರೀತಿಯಲ್ಲಿ ‘ಜವಾನ್​’ ಚಿತ್ರ ಮೂಡಿಬಂದಿದೆ. ತಮಿಳಿನ ಯಶಸ್ವಿ ನಿರ್ದೇಶಕ ಅಟ್ಲಿ ಅವರು ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ನಯನತಾರಾ, ಪ್ರಿಯಾಮಣಿ, ವಿಜಯ್​ ಸೇತುಪತಿ ಮುಂತಾದ ದಕ್ಷಿಣದ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತೆರೆ ಹಿಂದೆ ಕೂಡ ಸೌತ್​ ಸಿನಿಮಾ ಇಂಡಸ್ಟ್ರಿಯ ಪ್ರತಿಭಾವಂತರು ಕೆಲಸ ಮಾಡಿದ್ದಾರೆ. ಇನ್ನು, ಬಾಲಿವುಡ್​ ಕಲಾವಿದರಾದ ದೀಪಿಕಾ ಪಡುಕೋಣೆ, ಸುನಿಲ್​ ಗ್ರೋವರ್​ ಮುಂತಾದವರು ಕೂಡ ‘ಜವಾನ್​’ ಚಿತ್ರದ ಮೆರುಗು ಹೆಚ್ಚಿಸಿದ್ದಾರೆ.

suddiyaana