ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ – ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ – ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆಯಾಗಿದೆ. ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌  ಮತ್ತೆ ನಿರಾಕರಿಸಿದೆ.

ಅರವಿಂದ್‌ ಕೇಜ್ರೀವಾಲ್‌ ಅನಾರೋಗ್ಯದ ಕಾರಣ ನೀಡಿ, ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳ ಕಾಲ ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಅದರಂತೆ ಎಎಪಿ ಮುಖ್ಯಸ್ಥರು ಜೂನ್ 2 ರಂದು ತಿಹಾರ್ ಜೈಲಿಗೆ ಹಿಂತಿರುಗಬೇಕಾಗಿದೆ.

ಇದನ್ನೂ ಓದಿ: `ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಹಣ ಹಾಕುವ ಘೋಷಣೆ – ಅಂಚೆ ಕಚೇರಿಯಲ್ಲಿ ಮಹಿಳೆಯರ ಕ್ಯೂ

ಮಂಗಳವಾರ ಕೂಡ ಕೇಜ್ರೀವಾಲ್‌ ಮನವಿಯ ತುರ್ತು ವಿಚಾರಣೆ ರಜಾಕಾಲದ ಪೀಠ ನಿರಾಕರಿಸಿತ್ತು. ತುರ್ತು ವಿಚಾರಣೆ ಸಿಜೆಐ ನಿರ್ಧರಿಸಲಿದ್ದಾರೆ ಎಂದು ಪೀಠ ಹೇಳಿತ್ತು.

ನಿಯಮಿತ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಮುಖ್ಯಮಂತ್ರಿಗೆ ಸ್ವಾತಂತ್ರ್ಯ ನೀಡಲಾಗಿರುವುದರಿಂದ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿತು. ಕೇಜ್ರಿವಾಲ್ ಮೇ 10 ರಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಜೂನ್ 2 ರಂದು ತಿಹಾರ್ ಜೈಲಿಗೆ ಶರಣಾಗುವಂತೆ ಹೇಳಲಾಗಿತ್ತು. ಪಿಎಂಎಲ್‌ಎ ಪ್ರಕರಣದಲ್ಲಿ ಇಡಿ ಅವರ ಬಂಧನದ ಸಿಂಧುತ್ವವನ್ನು ಪ್ರಶ್ನಿಸಿ ಪೀಠವು ಮೇ 17 ರಂದು ತೀರ್ಪನ್ನು ಕಾಯ್ದಿರಿಸಿತ್ತು.

ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ನ್ಯಾಯಾಲಯ, ಬಂಧನದ ಸವಾಲಿನ ಮೇಲೆ ತೀರ್ಪನ್ನು ಈಗಾಗಲೇ ಕಾಯ್ದಿರಿಸಿರುವುದರಿಂದ ಮಧ್ಯಂತರ ಜಾಮೀನು ವಿಸ್ತರಣೆಗೆ ಕೇಜ್ರಿವಾಲ್ ಅವರ ಮನವಿಗೂ ಮುಖ್ಯ ಅರ್ಜಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿತು.

Shwetha M