ಗೃಹಲಕ್ಷ್ಮೀಯೂ ಇಲ್ಲ.. ಅನ್ನಭಾಗ್ಯವೂ ಸಿಗ್ತಿಲ್ಲ – ಸರ್ವರ್ ಸಮಸ್ಯೆಯಿಂದ ವಂಚಿತರಾಗುತ್ತಿದ್ದಾರೆ ಫಲಾನುಭವಿಗಳು
ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಸರ್ಕಾರ ಹೇಳಿಕೊಳ್ತಿದೆ. ಆದ್ರೆ ಯೋಜನೆಯ ಲಾಭ ಲಕ್ಷಾಂತರ ಫಲಾನುಭವಿಗಳಿಗೆ ತಲುಪಿಯೇ ಇಲ್ಲ. ಸರ್ವರ್ ಪ್ರಾಬ್ಲಂ ಸೇರಿದಂತೆ ನೂರಾರು ವಿಘ್ನಗಳು ಎದುರಾಗುತ್ತಿವೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಮತ್ತು ಶಕ್ತಿ ಯೋಜನೆಗೂ ಸರ್ವರ್ ಪ್ರಾಬ್ಲಂ ಕಾಡ್ತಿದೆ. ಅಕ್ಟೋಬರ್ 11 ರಿಂದ 13ರವರೆಗೆ ಅಂದ್ರೆ 3 ದಿನಗಳ ಕಾಲ ರೇಷನ್ ಕಾರ್ಡ್ ಹೆಸರು ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು. ಹೀಗಾಗಿ ಖುಷಿಯಲ್ಲೇ ತಿದ್ದುಪಡಿಗೆ ಹೋಗಿದ್ದ ಜನ ಸಪ್ಪೆ ಮುಖ ಹಾಕಿ ಹೊರಂದಿದ್ದಾರೆ. ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದಲೂ ವಂಚಿತರಾಗಿದ್ದಾರೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 2 ಕಂತುಗಳ ಹಣ ಬಿಡುಗಡೆಯಾಗಿದೆ. 9.32 ಲಕ್ಷ ಫಲಾನುಭವಿಗಳಿಗೆ ಈವರೆಗೂ ₹2 ಸಾವಿರ ಹಣ ತಲುಪಿಲ್ಲ. ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳ ಅಕೌಂಟ್ ಗೆ ಹಣ ಜಮೆ ಆಗಿಲ್ಲ. ಸರಿಪಡಿಸುವ ಕೆಲಸ ನಡೆಯುತ್ತಿದೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಅಕ್ಟೋಬರ್ 11ರಿಂದ 3 ದಿನಗಳ ಕಾಲ ಸರ್ಕಾರ ಕಾಲಾವಕಾಶ ನೀಡಿತ್ತು. ಸರ್ವರ್ ಪ್ರಾಬ್ಲಂನಿಂದ 3 ದಿನಗಳಿಂದ ಅರ್ಜಿ ಸಲ್ಲ್ಲಿಸಲಾಗದೆ ಪರದಾಡಿದ್ರು. ಒಮ್ಮೆ ಅರ್ಜಿ ಸಲ್ಲಿಸಿ ರಿಜೆಕ್ಟ್ ಆದರೆ, ಮತ್ತೆ ಕಾರ್ಡ್ ಲಾಗಿನ್ ಆಗಲು 30 ದಿನಗಳು ಬೇಕು. ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಮಾಡಿಸಲು ಸರ್ವರ್ ಸಮಸ್ಯೆಯಾಗಿದೆ. ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ನೀಡುವ ಸ್ಮಾರ್ಟ್ ಕಾರ್ಡ್ ಇದಾಗಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಕೆಲವರಿಗೆ ಮತ್ತೆ ಕರೆಂಟ್ ಬಿಲ್ ಬರ್ತಿದೆ. ಪರಿಶೀಲನೆ ನಡೆಸಲು ಸರ್ಕಾರಿ ಕಚೇರಿಗಳಿಗೆ ತೆರಳಿದರೆ ಸರ್ವರ್ ಪ್ರಾಬ್ಲಂ ಅಂತಿದ್ದಾರೆ.
ಇದನ್ನೂ ಓದಿ: ಬಿಜೆಪಿ ಅನುಮತಿ ನೀಡಿದ್ರೆ ಹರಿಯಾಣದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ! – ಬ್ರಿಜ್ ಭೂಷಣ್
ಸರ್ಕಾರದ ಈ ಎಲ್ಲಾ ಯೋಜನೆಗಳನ್ನ ಆನ್ ಲೈನ್ ಮೂಲಕವೇ ಸಲ್ಲಿಸಬೇಕಿದೆ. ಆದರೆ ಪದೇಪದೆ ಸರ್ವರ್ ಸಮಸ್ಯೆ ಆಗ್ತಿರೋದ್ರಿಂದ ಅರ್ಜಿ ಸಲ್ಲಿಕೆ ಮಾಡೋದು ವಿಳಂಬ ಆಗುತ್ತಿದೆ. ಕೆಲ ಅರ್ಜಿಗಳನ್ನ ಸಲ್ಲಿಸಿದ್ರೂ ಸ್ವೀಕೃತಿ ಜನರೇಟ್ ಆಗುತ್ತಿಲ್ಲ. ಹೀಗಾಗಿ ಜನರಿಗೂ ಕೂಡ ಗೊಂದಲು ಉಂಟಾಗಿದೆ. ಮತ್ತೊಂದೆಡೆ ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರವನ್ನು 75 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯಕ್ಕೆ ಅಗತ್ಯವಿರುವ ಅಕ್ಕಿಯನ್ನು ಎಫ್‌ಸಿಐ ನಿಗದಿಪಡಿಸಿದ ದರದಲ್ಲಿ ಪೂರೈಸಲು ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ. ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಮನೆಯಲ್ಲಿ ಒಬ್ಬಂಟಿ ವೃದ್ಧರಿದ್ದರೆ ಅವರ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ.