ಅಕ್ಟೋಬರ್ ನಲ್ಲೂ 5 ಕೆಜಿ ಅಕ್ಕಿ ಬದಲಿಗೆ ಹಣ – ಸೆಪ್ಟೆಂಬರ್ ತಿಂಗಳ ದುಡ್ಡು ಇನ್ನೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ 

ಅಕ್ಟೋಬರ್ ನಲ್ಲೂ 5 ಕೆಜಿ ಅಕ್ಕಿ ಬದಲಿಗೆ ಹಣ – ಸೆಪ್ಟೆಂಬರ್ ತಿಂಗಳ ದುಡ್ಡು ಇನ್ನೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ 

ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎನ್ನುವ ಸದುದ್ದೇಶದಿಂದ ಕಾಂಗ್ರೆಸ್ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯೇ ಅನ್ನಭಾಗ್ಯ ಯೋಜನೆ. ಆದರೆ ಅದೇ ಯೋಜನೆ ಈಗ ಹಲವು ಗೊಂದಲಗಳಿಗೆ ಕಾರಣವಾಗಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡೋದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಗೆ ಬಳಿಕ ಸಮರ್ಪಕ ಪ್ರಮಾಣದಲ್ಲಿ ಅಕ್ಕಿ ಸಿಕ್ಕಿರಲಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಹಾಗೂ ಉಳಿದ ಅಕ್ಕಿ ಬದಲಿಗೆ ಹಣ ಕೊಡೋದಾಗಿ ಹೇಳಿತ್ತು. ಆದರೆ ಇದೂ ಕೂಡ ವರ್ಕೌಟ್ ಆಗುತ್ತಿಲ್ಲ.

ಇದನ್ನೂ ಓದಿ : ಇನ್ನೂ ಬಗೆಹರಿಯದ ತಾಂತ್ರಿಕ ದೋಷ – 14 ಲಕ್ಷಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ ಕುಟುಂಬಗಳಿಗೆ ಪಾವತಿಯಾಗಿಲ್ಲ ಅನ್ನಭಾಗ್ಯದ ಹಣ

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಟೋಬರ್‌ ತಿಂಗಳಲ್ಲೂ 10 ಕೆಜಿ ಅಕ್ಕಿ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಹೊರ ರಾಜ್ಯಗಳಿಂದ ಅಕ್ಕಿ ತರಿಸಿಕೊಳ್ಳುವ ಪ್ರಯತ್ನ ಮುಂದುವರೆದಿದ್ದು, ಈ ತಿಂಗಳು ಕೂಡ ಪೂರ್ಣ ಪ್ರಮಾಣದ ಆಹಾರ ಧಾನ್ಯ ಸಿಗಲ್ಲ ಎನ್ನಲಾಗಿದೆ. ಹೀಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಡಿಬಿಟಿ ಮೂಲಕ ಸಂದಾಯ ಮಾಡುವುದನ್ನು ಸರ್ಕಾರ ಮುಂದುವರೆಸಲಿದೆ. ಅನ್ನಭಾಗ್ಯ ಯೋಜನೆಯಡಿ ಎಲ್ಲ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಕೊಡಲು ರಾಜ್ಯ ಸರ್ಕಾರ ಶತಪ್ರಯತ್ನ ನಡೆಸುತ್ತಿದೆ. ಈ ಹಿಂದೆ ಪಂಜಾಬ್, ಛತ್ತೀಸ್‌ಗಢ, ತೆಲಂಗಾಣ, ಆಂಧ್ರ ಪ್ರದೇಶ ಸೇರಿ ಮತ್ತಿತರ ರಾಜ್ಯಗಳಿಂದ ಅಕ್ಕಿ ತರಿಸಿಕೊಳ್ಳುವ ಪ್ರಯತ್ನ ಮಾಡಿದ್ದರೂ ಅವುಗಳು ಸಫಲವಾಗಿರಲಿಲ್ಲ. ಆದ್ದರಿಂದ ಏಜೆನ್ಸಿಗಳೊಂದಿಗೆ ನಿರಂತರವಾಗಿ ರಾಜ್ಯ ಸರ್ಕಾರ ಮಾತುಕತೆ ನಡೆಸಿದ್ದು, ಮುಂದಿನ ಎರಡು ವಾರದೊಳಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಆ ಸಭೆಯಲ್ಲಿ ರಿಯಾಯಿತಿ ದರದಲ್ಲಿ ಅಕ್ಕಿ ಪೂರೈಸುವಂತೆ ಏಜೆನ್ಸಿಗಳ ಮನವೊಲಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ.

ಇತ್ತಿಚೆಗಷ್ಟೇ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ಅಕ್ಟೋಬರ್‌ನಿಂದಲೇ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಕೆ.ಹೆಚ್ ಮುನಿಯಪ್ಪ ಅವರ ಹೇಳಿಕೆಯನ್ನು ಸ್ವತಃ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಹೊರ ರಾಜ್ಯಗಳು ಮತ್ತು ಏಜೆನ್ಸಿಗಳಿಂದ ಅಕ್ಕಿ ಖರೀದಿ ಮಾಡುವ ಪ್ರಕ್ರಿಯೆಯೇ ಇನ್ನೂ ಪೂರ್ಣಗೊಂಡಿಲ್ಲ. ಈ ನಡುವೆ 10 ಕೆಜಿ ಅಕ್ಕಿ ಹೇಗೆ ಕೊಡಲು ಸಾಧ್ಯ ಎಂದು ಅಧಿಕಾರಿಗಳು ಕೇಳಿದ್ದಾರೆ. ಹಾಗಾಗಿ ಈ ತಿಂಗಳು ಕೂಡ ಅಕ್ಕಿ ಬದಲು ಹಣವನ್ನೇ ನೀಡಲಾಗುವುದು ಎಂದು ಹೇಳಲಾಗಿದೆ. ಇನ್ನು, ರಾಜ್ಯದಲ್ಲಿ 1.03 ಕೋಟಿ ಅಂತ್ಯೋದಯ ಮತ್ತು ಬಿಪಿಎಲ್ ಕುಟುಂಬಗಳ ಪಡಿತರ ಚೀಟಿದಾರರು ಇದ್ದಾರೆ. ಅದರಲ್ಲಿ 3.69 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು 605 ಕೋಟಿ ರೂ.ಗಳನ್ನು ಸರ್ಕಾರ ಪಾವತಿಸುತ್ತಿದೆ. ಜುಲೈ ತಿಂಗಳಿನಿಂದ ಈ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ.

ಇಲ್ಲಿಯವರೆಗೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಹಣವನ್ನು ಪಾವತಿಸಿದೆ. ಆದರೆ, ಈ ಬಾರಿ ಸೆಪ್ಟೆಂಬರ್ ಮುಗಿದರೂ, ಫಲಾನುಭವಿಗಳ ಬ್ಯಾಂಕ್ ಖಾತೆಗೆ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಡಿಬಿಟಿ ಮೂಲಕ ಪಾವತಿಸುವ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಆಗಸ್ಟ್‌ ತಿಂಗಳ ಹಣ ಪಾವತಿ ತಡವಾಗಿರುವುದರಿಂದ ಸೆಪ್ಟೆಂಬರ್ ತಿಂಗಳ ಹಣ ಪಾವತಿಯ ಪ್ರಕ್ರಿಯೆಯೂ ತಡವಾಗುತ್ತಿದೆ. ಒಂದೆರಡು ವಾರಗಳಲ್ಲಿ ಹಣ ಫಲಾನುಭವಿಗಳಿಗೆ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Shantha Kumari