J &K ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಆರೋಗ್ಯದಲ್ಲಿ ಏರುಪೇರು

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಆರೋಗ್ಯದಲ್ಲಿ ಏರುಪೇರಾಗಿದೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಜತೆ ಆಜಾದ್ ಕುವೈತ್ಗೆ ತೆರಳಿದ್ದರು. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನದ ಬಣ್ಣವನ್ನು ಜಗತ್ತಿನ ಮುಂದೆ ಬಯಲು ಮಾಡಲು ಗಲ್ಫ್ಟ್ ರಾಷ್ಟ್ರಗಳಿಗೆ ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಆಯೋಗ ಭೇಟಿ ನೀಡುತ್ತಿದೆ. ಕುವೈತ್‌ನಲ್ಲಿ ಆಜಾದ್ ಅವರ ಆರೋಗ್ಯ ಕೈಕೊಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಜಾದ್ ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಸಂಸದ ಪಾಂಡಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರ್ವಪಕ್ಷ ನಿಯೋಗದ ಪ್ರವಾಸದ ಮಧ್ಯದಲ್ಲಿ ಗುಲಾಂ ನಬಿ ಆಜಾದ್ ಅವರ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಬೇಕಾಯಿತು. ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ’ ಎಂದಿದ್ದಾರೆ.
ಬಹ್ರೇನ್ ಮತ್ತು ಕುವೈತ್‌ನಲ್ಲಿ ನಡೆದ ಸಭೆಯಲ್ಲಿ ನಬಿ ಭಾಗಿಯಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಸೌದಿ ಅರೇಬಿಯಾ ಮತ್ತು ಅಲ್ಜೀರಿಯಾದಲ್ಲಿ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ತಾಪಮಾನ ಹೆಚ್ಚಳದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ನಬಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಗುಲಾಂ ನಬಿ ಆಜಾದ್, ಕುವೈತ್‌ನಲ್ಲಿನ ತೀವ್ರ ಶಾಖದಿಂದಾಗಿ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರೂ, ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ಎಲ್ಲಾ ಪರೀಕ್ಷೆಗಳ ಫಲಿತಾಂಶಗಳು ಸಾಮಾನ್ಯವಾಗಿವೆ. ನಿಮ್ಮ ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.