ಮೆಟ್ರೋ ನಿಲ್ದಾಣದಿಂದ ಹಾರಿ 10ನೇ ತರಗತಿಯ ವಿದ್ಯಾರ್ಥಿ ಸೂ*ಸೈಡ್

ಮೆಟ್ರೋ ನಿಲ್ದಾಣದಿಂದ ಹಾರಿ 10ನೇ ತರಗತಿಯ ವಿದ್ಯಾರ್ಥಿ ಸೂ*ಸೈಡ್

10ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ.  ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಬಾಲಕ ತನ್ನ ಶಿಕ್ಷಕರನ್ನು ದೂಷಿಸಿ ಆತ್ಮಹತ್ಯೆ ಪತ್ರ ಬರೆದಿದ್ದಾನೆ. ಈ ಸಂಬಂಧ 16 ವರ್ಷದ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮೂವರು ಶಿಕ್ಷಕರು ಮತ್ತು ಶಾಲೆಯ ಪ್ರಾಂಶುಪಾಲರು ತನ್ನ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೋವಿನಿಂದ ಹೇಳಿದ್ದಾರೆ.

ದೆಹಲಿಯ ಪ್ರಮುಖ ಶಾಲೆಯೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕ ತನ್ನ ಆತ್ಮಹತ್ಯೆ ಪತ್ರದಲ್ಲಿ, ಕ್ಷಮಿಸಿ ಅಮ್ಮ, ನಾನು ನಿಮ್ಮ ಹೃದಯವನ್ನು ಹಲವು ಬಾರಿ ಮುರಿದಿದ್ದೇನೆ. ಇದೀಗ ನಾನು ಕೊನೆಯ ಬಾರಿಗೆ ಅದನ್ನು ಮಾಡುತ್ತಿದ್ದೇನೆ. ಶಾಲೆಯಲ್ಲಿ ಶಿಕ್ಷಕರು ಹೀಗೇ ಇದ್ದಾರೆ, ನಾನು ಏನು ಹೇಳಲಿ? ಎಂದು ಬರೆದಿದ್ದಾನೆ. ಈ ಘಟನೆಯು ಪೋಷಕರಲ್ಲಿ ತೀವ್ರ ಕಳವಳವನ್ನುಂಟುಮಾಡಿದೆ.

ಇದನ್ನೂ ಓದಿ:  ಬೆಂಗಳೂರಲ್ಲಿ 7 ಕೋಟಿ ರೂಪಾಯಿ ದರೋಡೆ ಘಟನೆಗೆ ವೆಬ್ ಸೀರೀಸ್ ಸ್ಫೂರ್ತಿ?

 ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ 16 ವರ್ಷದ ಬಾಲಕ ಗಾಯಗೊಂಡು ಬಿದ್ದಿದ್ದಾನೆ ಎಂದು ಮಧ್ಯಾಹ್ನ 2.45 ರ ಸುಮಾರಿಗೆ ತಂದೆಗೆ ಕರೆ ಬಂದಿತು. ತಂದೆ ಕರೆ ಮಾಡಿದ ವ್ಯಕ್ತಿಗೆ ತನ್ನ ಮಗನನ್ನು ಬಿಎಲ್ ಕಪೂರ್ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿಕೊಂಡರು. ಕುಟುಂಬವು ಅಲ್ಲಿಗೆ ತಲುಪಿದಾಗ, ಅವನು ಮೃತಪಟ್ಟಿದ್ದಾನೆ ಎಂದು ಅವರಿಗೆ ತಿಳಿಸಲಾಯಿತು.

ಮೆಟ್ರೋ ನಿಲ್ದಾಣದಲ್ಲಿ ಬಾಲಕ ಪ್ಲಾಟ್‌ಫಾರ್ಮ್‌ನಿಂದ ಹಾರಿದ್ದಾನೆ ಎಂದು ತಿಳಿದುಬಂದಿದೆ. ಮೂವರು ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದನಂತೆ. ಕಳೆದ ನಾಲ್ಕು ದಿನಗಳಿಂದ ಶಿಕ್ಷಕರೊಬ್ಬರು ಶಾಲೆಯಿಂದ ಹೊರಹಾಕಲಾಗುವುದು ಮತ್ತು ವರ್ಗಾವಣೆ ಪ್ರಮಾಣಪತ್ರ (TC) ನೀಡಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಬಾಲಕನ ಸ್ನೇಹಿತರು ಹೇಳಿದ್ದರು.

ಮತ್ತೊಬ್ಬ ಶಿಕ್ಷಕ ಒಮ್ಮೆ ತನ್ನ ಮಗನನ್ನು ತಳ್ಳಿದ್ದ ಎಂದು ತಂದೆ ಆರೋಪಿಸಿದ್ದಾರೆ. ಮಂಗಳವಾರದಂದು ತರಗತಿಯಲ್ಲಿ ಬಾಲಕ ಬಿದ್ದಾಗ ಒಬ್ಬ ಶಿಕ್ಷಕ ಅವನನ್ನು ಅವಮಾನಿಸಿ, ಅತಿಯಾಗಿ ನಟಿಸುತ್ತಿದ್ದಾನೆ ಎಂದು ಅಪಹಾಸ್ಯ ಮಾಡಿದರಂತೆ. ಬಳಿಕ ಅವನನ್ನು ತುಂಬಾ ಗದರಿಸಲಾಯಿತು ಎಂದು ಆರೋಪಿಸಲಾಗಿದೆ. ಅವನು ಅಳಲು ಪ್ರಾರಂಭಿಸಿದ್ದಕ್ಕೆ ಎಷ್ಟು ಬೇಕಾದರೂ ಅಳಬಹುದು ಎಂದು ಶಿಕ್ಷಕ ವ್ಯಂಗ್ಯ ಮಾಡಿದ್ದರಂತೆ. ಇದೆಲ್ಲವೂ ನಡೆಯುತ್ತಿರುವಾಗ ಪ್ರಾಂಶುಪಾಲರು ಸಹ ಇದ್ದರು. ಆದರೆ ಅದನ್ನು ತಡೆಯಲು ಅವರು ಏನೂ ಮಾಡಲಿಲ್ಲ ಎಂದು ಮೃತ ಬಾಲಕನ ತಂದೆ ಆರೋಪಿಸಿದರು. ಈ ಹಿಂದೆಯೂ ಸಹ ಬೋಧಕ ಸಿಬ್ಬಂದಿಯಿಂದ ಮಾನಸಿಕ ಕಿರುಕುಳದ ಬಗ್ಗೆ ತನ್ನ ಮಗ ಆತನ ತಾಯಿಗೆ ದೂರು ನೀಡಿದ್ದನು. ಈ ಸಂಬಂಧ ಶಾಲೆಯಲ್ಲಿ ಪ್ರಶ್ನಿಸಲಾಯಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೃತ ಬಾಲಕನ ತಂದೆ ಹೇಳಿದರು.

Kishor KV