ದಸರಾಗೆ ಕೊಡಗಿನಿಂದ 8 ಆನೆಗಳ ಆಯ್ಕೆ ಬಹುತೇಕ ಖಚಿತ – ಸೆ. 1 ರಂದು ಮೈಸೂರಿಗೆ ಗಜಪಯಣ ಸಾಧ್ಯತೆ
ಮೈಸೂರು ದಸರಾ ಎಂದರೆ ಅದು ಆನೆಗಳ ತಂಡ ಇದ್ದೇ ಇರುತ್ತವೆ. ವಿಶ್ವವಿಖ್ಯಾತ ಜಂಬೂಸವಾರಿ ಆಕರ್ಷಣೆಯಾದ ಆನೆಗಳ ಆಯ್ಕೆ ಸುಲಭವಲ್ಲ. ಲಕ್ಷಾಂತರ ಮಂದಿ ಸೇರುವ ಉತ್ಸವದಲ್ಲಿ ಬೆದರದೇ ಯಶಸ್ವಿಯಾಗಿ ಹೆಜ್ಜೆ ಹಾಕುವ ಆನೆಗಳನ್ನು ದಸರಾಗಾಗಿ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಈ ಬಾರಿ ದಸರಾದಲ್ಲಿ ಕೊಡಗು ಜಿಲ್ಲೆಯಿಂದ ಪಾಲ್ಗೊಳ್ಳಲಿರುವ 8 ಆನೆಗಳ ಪಟ್ಟಿ ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ಆಕ್ಟೋಬರ್ 15ರಿಂದ 24ರವರೆ ನಡೆಯಲಿದೆ. ಕೊಡಗು ಜಿಲ್ಲೆಯಿಂದ ಪಾಲ್ಗೊಳ್ಳಲಿರುವ 8 ಆನೆಗಳ ಪಟ್ಟಿ ಬಹುತೇಕ ಖಚಿತವಾಗಿದೆ. ದಸರಾದಲ್ಲಿ ಭಾಗಿಯಾಗಲಿರುವ ಆನೆಗಳು ಆಯ್ಕೆ ಮಾಡಲಾಗಿದ್ದು ಗೋಪಿ(43), ಪ್ರಶಾಂತ್ (52), ಧನಂಜಯ (42), , ವಿಕ್ರಮ್ (59), ವಿಜಯ (53), ಲಕ್ಷ್ಮಣ (34) ಕಾವೇರಿ ಹಾಗೂ ಕಾಂಚನ್ (44) ಗಳು ದಸರಾ ಜಂಬುಸವಾರಿಯಲ್ಲಿ ಹೆಜ್ಜೆ ಹಾಕಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂಓದಿ: ದಸರಾಗೆ ಸಜ್ಜಾಗುತ್ತಿದೆ ಮೈಸೂರು – ಅರಮನೆ ಸುತ್ತಮುತ್ತ ಡ್ರೋನ್ ಕ್ಯಾಮರಾ ಬಳಕೆಗೆ ನಿರ್ಬಂಧ
ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿರುವ ದಸರಾ ಆನೆಗಳಿಗೆ ವಿಶೇಷ ಕಾಳಜಿವಹಿಸಿ ನೋಡಿಕೊಳ್ಳಲಾಗ್ತಿದೆ. ಮೈಸೂರು ವನ್ಯಜೀವಿ ವಿಭಾಗ ಡಿಸಿಎಫ್ ಸೌರಭ್ ನೇತೃತ್ವದ ತಂಡದಿಂದ ಆನೆಗಳ ಆಯ್ಕೆ ಮಾಡಲಾಗಿದ್ದು ಸೆಪ್ಟೆಂಬರ್ 1 ರಂದು ದುಬಾರೆ ಸಾಕಾನೆ ಶಿಬಿರದಿಂದ ಆನೆಗಳು ಮೈಸೂರಿನತ್ತ ಹೊರಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿಯ ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 1ಕ್ಕೆ ಗಜಪಯಣ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 14 ಆನೆಗಳು ಮೈಸೂರಿಗೆ ಬರಲಿದ್ದು, ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರ ದಾಯಿಕವಾಗಿ ಗಜಪಯಣ ಆಯೋಜಿಸಲಾಗಿದೆ.