ನನ್ನನ್ನೇ ಭಯಪಡಿಸುವೆಯಾ.. ನಿನ್ನ ಸೊಕ್ಕನ್ನಡಗಿಸುವೆ! – ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಬೆಚ್ಚಿಬಿದ್ದ ಕರಡಿ!

ನನ್ನನ್ನೇ ಭಯಪಡಿಸುವೆಯಾ.. ನಿನ್ನ ಸೊಕ್ಕನ್ನಡಗಿಸುವೆ! – ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಬೆಚ್ಚಿಬಿದ್ದ ಕರಡಿ!

ಮನುಷ್ಯರಾದ ನಮಗೆ ಕನ್ನಡಿಯಲ್ಲಿ ನಮ್ಮ ಮುಖವನ್ನು ನಾವೇ ನೋಡುವುದೆಂದರೆ ತುಂಬಾ ಇಷ್ಟ. ಹೀಗಾಗಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗೋವರೆಗೆ ನಾಲ್ಕೈದು ಬಾರಿಯಾದರೂ ಕನ್ನಡಿಯಲ್ಲಿ ಮುಖ ನೋಡುವುದು ಸಾಮಾನ್ಯ. ಇನ್ನೂ ಕೆಲವರು ಪದೇ ಪದೆ ಕನ್ನಡಿ ನೋಡುವ ಅಭ್ಯಾಸ ಹೊಂದಿರುತ್ತಾರೆ. ಹೀಗಾಗಿ ಮನೆಯಿಂದ ಹೊರಗೆ ಹೋಗುವಾಗಲೂ ಪರ್ಸ್‌ನಲ್ಲಿ ಸಣ್ಣ ಕನ್ನಡಿಯೊಂದನ್ನು ಇಟ್ಟುಕೊಂಡಿರುತ್ತಾರೆ. ಆದರೆ ಪ್ರಾಣಿಗಳು ಎಂದಿಗೂ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿರುವುದಿಲ್ಲ. ಹೀಗಾಗಿ ಅವುಗಳಿಗೆ ಇದರ ಅರಿವು ಇರುವುದಿಲ್ಲ. ಹೀಗಾಗಿ ಪ್ರಾಣಿಗಳ ಮುಂದೆ ಕನ್ನಡಿ ಇಟ್ಟ ಕೂಡಲೇ ಭಯಗೊಳ್ಳುತ್ತವೆ. ತಮ್ಮ ಹತ್ತಿರ ಇನ್ನೊಂದು ಪ್ರಾಣಿ ಇದೆ ಎಂದು ಕೋಪಗೊಂಡು  ಕನ್ನಡಿ ಮೇಲೆ ದಾಳಿ ಮಾಡುತ್ತವೆ. ಇದೀಗ ಇಲ್ಲೊಂದು ಕರಡಿ ಕನ್ನಡಿಯಲ್ಲಿ ತನ್ನ ಮುಖವನ್ನು ತಾನೇ ನೋಡಿದೆ. ಇದೀಗ ಮೊದಲ ಬಾರಿ ಕನ್ನಡಿ ನೋಡಿ ಪ್ರತಿಕ್ರಿಯಿಸಿರು ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ನಿಮ್ಮ‌ ಕನ್ನಡಿ‌ ನಿಮಗೆ‌ ಸುಳ್ಳು ಹೇಳುತ್ತಾ? – ನಿಮ್ಮ ಸೌಂದರ್ಯದ ರಹಸ್ಯ ಗೊತ್ತಿದೆಯೇ?

Nature is Amazing ಎಂಬ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಾಡಿನ ಮಧ್ಯೆ ಕನ್ನಡಿಯೊಂದನ್ನು ಇಡಲಾಗಿದೆ. ಕನ್ನಡಿ ಇಟ್ಟ ಸ್ಥಳಕ್ಕೆ ಕರಡಿಯೊಂದು ಬಂದಿದೆ. ಇದೇನಿದು ವಿಚಿತ್ರ ವಸ್ತು ಎಂದು ಅದರ ಬಳಿ ಬಂದು ನೋಡಿದೆ. ಕನ್ನಡಿಯನ್ನು ನೋಡಿದ ಕರಡಿ, ಅದರ ಬಳಿ ಬಂದು ತನ್ನ ಪ್ರತಿಬಿಂಬವನ್ನು ನೋಡಿದೆ. ಕನ್ನಡಿ ನೋಡಿದ ಕೂಡಲೇ ಇದಾವುದೋ ಬೇರೆ ಪ್ರಾಣಿ ಎಂದು ಭಾವಿಸಿ ಕೋಪಗೊಂಡಿದೆ. ಬಳಿಕ ನನ್ನನ್ನೇ ಭಯಪಡಿಸುವೆಯಾ ನಿನ್ನ ಸೊಕ್ಕನ್ನಡಗಿಸುವೆ ಎಂದುಕೊಂಡು  ಕರಡಿ ಕೋಪದಿಂದ  ಕನ್ನಡಿಯ ಮೇಲೆ ದಾಳಿ ಮಾಡಲು ಆರಂಭಿಸುತ್ತದೆ.  ಕೊನೆಯಲ್ಲಿ  ಕನ್ನಡಿಯನ್ನೇ ನೆಲಕ್ಕುರುಳಿಸಿ ಪುಡಿ ಮಾಡಿಬಿಡುತ್ತದೆ. ಕರಡಿಯ ಈ ಪ್ರತಿಕ್ರಿಯೆ ಕಾಣಲು ತುಂಬಾ ಹಾಸ್ಯಮಯವಾಗಿದ್ದು, ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.

ಕನ್ನಡಿಯನ್ನು ಕಂಡು ಕರಡಿ ಪ್ರತಿಕ್ರಿಯಿಸಿದ ರೀತಿಯನ್ನು  ನೋಡಿ ಸಾಮಾಜಿಕ ಮಾಧ್ಯಮ  ಬಳಕೆದಾರರು ಹಾಸ್ಯಮಯವಾಗಿ ಕಮೆಂಟ್ ಮಾಡಿದ್ದಾರೆ.  ಒಬ್ಬ ಬಳಕೆದಾರರು ನೀವು ಸ್ವತಃ ನಿಮ್ಮನ್ನೇ ದ್ವೇಷಿಸಿದಾಗ ಹೀಗೆ ಇರುತ್ತೆ” ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.  ಇನ್ನೊಬ್ಬ ಬಳಕೆದಾರರು ಪ್ರಾಣಿಗಳಿಗೆ ಹೆದರಿಕೆಯಾಗುವಂತ ಇಂತಹ ವಸ್ತುಗಳನ್ನು ಕಾಡಿನಲ್ಲಿ ಇಡಬಾರದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಕರಡಿ ತನ್ನನ್ನು ತಾನು ತುಂಬಾ ದ್ವೇಷಿಸುತ್ತಿರುವಂತಿದೆʼ ಎಂದು ಹೇಳಿದ್ದಾರೆ.

Shwetha M