ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್
ಸಂಸತ್‌ನಲ್ಲಿ ಡಿಸೆಂಬರ್ 13ರಂದು ನಡೆದ ಭದ್ರತಾ ಲೋಪ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ದೆಹಲಿ ಪೊಲೀಸರ ವಿಶೇಷ ಕೋಶ ಘಟಕಗಳನ್ನ ರಚಿಸಲಾಗಿದೆ.
ಹೌದು, ಡಿ. 13 ರಂದು ಲೋಕಸಭೆ ಕಲಾಪದ ವೇಳೆ ಟಿಯರ್ ಗ್ಯಾಸ್ ದಾಳಿ ನಡೆದಿತ್ತು. ಪ್ರಕರಣದ ತನಿಖೆಗೆ ಕರ್ನಾಟಕ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತನಿಖೆ ನಡೆಸಲು ಈ ಘಟಕಗಳನ್ನ ರಚಿಸಲಾಗಿದೆ. ಇದಲ್ಲದೇ ಇನ್ನೂ 50 ಪ್ರತ್ಯೇಕ ತಂಡಗಳನ್ನ ರಚಿಸಲಾಗಿದ್ದು, ಆರೋಪಿಗಳ ಡಿಜಿಟಲ್ ಬಳಕೆ, ಬ್ಯಾಂಕಿಂಗ್ ವಿವರ, ಪೂರ್ವಾಪರ ಹಿನ್ನೆಲೆಯ ತನಿಖೆ ನಡೆಸಲಾಗುತ್ತಿದೆ. ವಿಶೇಷ ಕೋಶದ ತಂಡವು ಆರೋಪಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ 6 ರಾಜ್ಯಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಇರಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗಾಜಾ ಜಾಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆಯಿಂದ ಭೀಕರ ದಾಳಿ – 90 ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಸಾವು
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈ 6 ಆರೋಪಿಗಳಲ್ಲಿ ಒಬ್ಬನಾದ ಸಾಗರ್ ಶರ್ಮಾನನ್ನ ದಕ್ಷಿಣ ವಲಯದ ವಿಶೇಷ ಸೆಲ್ ಸಾಕೇತ್ ತಂಡವು ವಿಚಾರಣೆ ನಡೆಸುತ್ತಿದೆ. ಇನ್ನೂ ಮಾಸ್ಟರ್ ಮೈಂಡ್ ಲಲಿತ್ ಝಾನನ್ನ ವಿಶೇಷ ಸೆಲ್ ತಂಡವು ಜನಕರಪುರಿ ಸೌತ್ ವೆಸ್ಟರ್ನ್ ರೇಂಜ್‌ಗೆ ಹಸ್ತಾಂತರಿಸಿದೆ. ಮೈಸೂರು ಮೂಲದ ಆರೋಪಿ ಮನೋರಂಜನ್‌ನನ್ನ ನವದೆಹಲಿ ರೇಂಜ್ ಸೆಲ್‌ಗೆ ಹಸ್ತಾಂತರಿಸಿದ್ದು, ಅಲ್ಲಿನ ತಂಡ ವಿಚಾರಣೆ ನಡೆಸುತ್ತಿದೆ. ಸಂಸತ್ ಹೊರಗೆ ಪ್ರತಿಭಟನೆ ಮಾಡಿದ್ದ ನೀಲಂ ದೇವಿಯನ್ನ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ವಿಶೇಷ ಕೋಶದ ಕೌಂಟರ್-ಇಂಟೆಲಿಜೆನ್ಸ್ ಯುನಿಟ್ ಸುಪರ್ದಿಯಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ.
6 ಜನ ಆರೋಪಿಗಳನ್ನ ಶನಿವಾರವೇ ವಿಶೇಷ ಕೋಶದ ವಿವಿಧ ಘಟಕಗಳಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ವಿಶೇಷ ಕೋಶದಿಂದ ತನಿಖೆ ಮಾಡಿದ ನಂತರ ಹೆಚ್ಚಿನ ತನಿಖೆಗಾಗಿ ಎನ್‌ಎಫ್‌ಸಿ ವಿಶೇಷ ತಂಡಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
ಡಿಸೆಂಬರ್ 13 ರಂದು ನಡೆದ ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 5ನೇ ಆರೋಪಿ ಲಲಿತ್ ಝಾ, ದೆಹಲಿ ಪೊಲೀಸರ ಮುಂದೆ ಗುರುವಾರ ಶರಣಾದನು. ಇಡೀ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಲಲಿತ್ ಝಾ ನನ್ನ ನಂಬಲಾಗಿದೆ. ಇತರೆ ಆರೋಪಿಗಳ ಕುರಿತ ಸಾಕ್ಷ್ಯ ನಾಶ ಮಾಡಿರುವ ಆರೋಪಗಳೂ ಕೇಳಿಬಂದಿವೆ. ಈ ನಡುವೆ ದೆಹಲಿ ಪೊಲೀಸರು ಆರೋಪಿಗಳ ಸುಟ್ಟ ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಹಲವು ಸ್ಪೋಟಕ ರಹಸ್ಯಗಳು ಬೆಳಕಿಗೆ ಬಂದಿವೆ.