ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ.. ಟಿಯರ್ ಗ್ಯಾಸ್ ದಾಳಿ – ಉಗ್ರರ ಕೈವಾಡದ ಶಂಕೆ!
ಖಲಿಸ್ತಾನಿ ಉಗ್ರರ ದಾಳಿ ಬೆನ್ನಲ್ಲೇ ಸಂಸತ್‌ನಲ್ಲಿ ಬುಧವಾರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಲೋಕಸಭೆ ನಡೆಯುತ್ತಿರುವ ವೇಳೆ ಇಬ್ಬರು ಅಪರಿಚಿತರು ಏಕಾಏಕಿ ಸಂಸತ್ ಭವನದ ಒಳಗೆ ಪ್ರವೇಶಿಸಿ, ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಸಂಸತ್ ಭವನದ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು. ಡಿಸೆಂಬರ್ 13 ರಂದು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು. 2001ರಲ್ಲಿ ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. ಇಂದಿಗೆ (ಬುಧವಾರ) ಈ ದಾಳಿ ನಡೆದು 22 ವರ್ಷಗಳಾಗಿವೆ. ಈ ಹಿನ್ನೆಲೆ ಇಬ್ಬರು ಅಪರಿಚಿತರು ಸಂಸತ್ ಭವನದ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 73 ವರ್ಷದಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಸಖತ್ ಸ್ಟಂಟ್ – ‘ವೆಟ್ಟೈಯನ್’ ಸಿನಿಮಾದಲ್ಲಿ ಸಾಹಸ ದೃಶ್ಯ ಕಂಡು ಅಭಿಮಾನಿಗಳು ಪುಳಕ
ಇಬ್ಬರು ಅಪರಿಚಿತರು ಸಂಸತ್ ಭವನಕ್ಕೆ ನುಗ್ಗಿ ದಾಳಿ ಮಾಡಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತರು ಸದನದ ಒಳಗ್ಗೆ ನುಗ್ಗಿ ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಪ್ರೇಕ್ಷಕರಾಗಿ ಸದನದ ಒಳಗೆ ಪ್ರವೇಶಿಸಿದ್ದರು. ಸ್ಪೀಕರ್ ಮುಂದಿರುವ 5ನೇ ಸಾಲಿನವರೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಈ ಘಟನೆ ಸಂಬಂಧ ಯುವಕ ಹಾಗೂ ಯುವತಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿಯಿಂದ ಅಧಿವೇಶನ ಮುಂದೂಡಲಾಗಿದೆ. ಇದೀಗ ಈ ದಾಳಿ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ.