ವಿವಾದಿತ ಮಹಿಷ ದಸರಾ ಆಚರಣೆಗೆ ಅನುಮತಿ! – ಮೈಸೂರಿನಲ್ಲಿ 144 ನಿಷೇಧಾಜ್ಞೆ ಜಾರಿ
ಮೈಸೂರು: ನಾಡಹಬ್ಬ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಮಹಿಷ ದಸರಾ ಆಚರಣೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಈ ಬಗ್ಗೆ ಬಹಳ ದಿನಗಳಿಂದ ಮಹಿಷ ದಸರಾ ನಡೆಸಲು ಪರ-ವಿರೋಧ ನಡೆಯುತ್ತಲೇ ಇತ್ತು. ಒಂದೆಡೆ ದಲಿತ ಸಮಿತಿಗಳು ಹಾಗೂ ಮಹಿಷ ದಸರಾ ಸಮಿತಿಯವರು ನಡೆಸಬೇಕು ಎಂದರೆ, ಇತ್ತ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಇದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಕರೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ವಿವಾದಿತ ಮಹಿಷ ದಸರಾ ಸಭಾ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ಮಹಿಷ ದಸರಾ ಆಚರಣೆಗೆ ಹೆಚ್ಚಾಯ್ತು ಪರ ವಿರೋಧ – ಸಾಂಸ್ಕ್ರತಿಕ ನಗರಿಯಲ್ಲಿ ಪೊಲೀಸ್ ಇಲಾಖೆಗೂ ತಲೆಬಿಸಿ
ಮಹಿಷ ದಸರಾ ಆಚರಣೆಗೆ ಇದೀಗ ಷರತ್ತುಬದ್ಧ ಅನುಮತಿಯನ್ನು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೀಡಿದ್ದಾರೆ. ಮೈಸೂರಿನ ಪುರಭವನದಲ್ಲಿ ಮಹಿಷ ದಸರಾ ನಡೆಯಲಿದೆ. ಮೆರವಣಿಗೆ, ರ್ಯಾಲಿ, ಪ್ರತಿಭಟನೆ ಮಾಡಬಾರದು. ನೇರವಾಗಿ ಸಭಾ ಕಾರ್ಯಕ್ರಮ ಪ್ರಾರಂಭಿಸಬೇಕು. ಪಟಾಕಿ ಸಿಡಿಸಿ ಸಂಭ್ರಮ ಆಚರಿಸಬಾರದು. ಧಾರ್ಮಿಕ ಭಾವನೆ ಕೆಣಕುವ, ಪ್ರಚೋದನೆ ನೀಡುವ ಭಾಷಣ ಮಾಡಬಾರದು ಎಂದು ಷರತ್ತುಗಳೊಂದಿಗೆ ಪೊಲೀಸರು ಅನುಮತಿ ನೀಡಿದ್ದಾರೆ.
ವಿವಾದಿತ ಮಹಿಷಾ ದಸರಾ ಮತ್ತು ಅದರ ವಿರುದ್ಧ ಬಿಜೆಪಿ ನಡೆಸುಲು ಉದ್ದೇಶಿಸಿರುವ ಚಲೋ ಚಾಮುಂಡಿ ಜಾಥಾಗಳೆರಡಕ್ಕೂ ಅನುಮತಿ ನಿಷೇಧಿಸಿರುವ ಮೈಸೂರು ಪೊಲೀಸರು ನಗರದಲ್ಲಿ ಗುರುವಾರ ಮಧ್ಯರಾತ್ರಿ 12 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟ ಹಾಗೂ ಮೈಸೂರಿನ ಟೌನ್ ಹಾಲ್ ನ ಒಳಾವರಣ ಹೊರತುಪಡಿಸಿ ಮೈಸೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದೆ.